ಲೈಟ್ನಿಂಗ್ – ಮಿಂಚು( ವಿದ್ಯುನ್ಮಾಲೆ) – ಒಂದು ಮೋಡದ ಎರಡು ವಿರುದ್ಧ ವಿದ್ಯುದೀಕೃತ ಪದರಗಳ ನಡುವೆ ಅಥವಾ ಎರಡು ವಿದ್ಯುದೀಕೃತ ಮೋಡಗಳ ನಡುವೆ ಅಥವಾ ಒಂದು ವಿದ್ಯುದೀಕೃತ ಮೋಡ ಹಾಗೂ ಭೂಮಿಯ ಮೇಲ್ಮೈಯಲ್ಲಿನ ಒಂದು ಬಿಂದುವಿನ ನಡುವೆ ಹಾಯುವಂತಹ ತುಂಬಾ ಶಕ್ತಿಯುಳ್ಳ ವಿದ್ಯುತ್ ವಿಸರ್ಜನೆ ಅಥವಾ ಹೊನಲು.
ಲೈಟ್ ಬಲ್ಬ್ – ಗಾಜಿನ ಬುರುಡೆಯ ವಿದ್ಯಿದ್ದೀಪ ( ಬಲ್ಬು) – ವಿದ್ಯುತ್ತಿನಿಂದ ಬೆಳಕನ್ನು ಪಡೆಯಲು ಬಳಸುವ ಉಪಕರಣ. ಇದರಲ್ಲಿ, ಒಂದು ಗಾಜಿನ ಬುರುಡೆಯಲ್ಲಿ ಒಂದು ಟಂಗ್ಸ್ಟನ್ ತಂತು ಮತ್ತು ಒಂದು ಜಡ ಅನಿಲ ಇರುತ್ತವೆ. ಈ ತಂತುವಿನಲ್ಲಿ ವಿದ್ಯುತ್ತನ್ನು ಹಾಯಿಸಿದಾಗ ಅದು ಕಾದು ಬೆಳ್ಳಗಾಗುತ್ತದೆ. ಟಂಗ್ಸ್ಟನ್ ಲೋಹವು ಆವಿಯಗಿ ಗಾಜಿನ ಬುರುಡೆಯು ಕಪ್ಪಾಗುವುದನ್ನು ಆದಷ್ಟೂ ತಡೆಯಲು ಜಡ ಅನಿಲವನ್ನು ಬಳಸುತ್ತಾರೆ.
ಲೈಟ್ – ಬೆಳಕು – ಇದು ವಿದ್ಯುತ್ಕಾಂತೀಯ ಅಲೆಯ ಒಂದು ವಿಧ. ಇದಕ್ಕೆ ಮಾನವ ಕಣ್ಣು ಸ್ಪಂದಿಸುತ್ತದೆ. ಇದರ ಮೇಲೆಯೇ ನಮ್ಮ ದೃಷ್ಟಿಪ್ರಜ್ಞೆಯು ಅವಲಂಬಿತವಾಗಿರುತ್ತದೆ. ಪ್ರಪಂಚವನ್ನು ನಾವು ನಮ್ಮ ಕಣ್ಣಿಂದ ನೋಡಲು ಸಾಧ್ಯವಾಗುವುದು ಸಹ ಇದರಿಂದಲೇ. ನಾವು ಬಣ್ಣಗಳನ್ನು ಗುರುತಿಸಲು ಸಾಧ್ಯವಾಗುವುದು ಸಹ ಇದರಿಂದಲೇ.
ಲಿಬ್ರೇಷನ್ – ಓಲಾಟ – ಇದು ಖಗೋಳವಿಜ್ಞಾನದ ಒಂದು ವಿದ್ಯಮಾನ. ಭೂಮಿಯಿಂದ ನೋಡಿದಾಗ, ಕೆಲವು ಸಲ, ಚಂದ್ರನ, ತೋರುವ ಅಥವಾ ನಿಜವಾದ ಓಲಾಟದಿಂದಾಗಿ ಸಾಮಾನ್ಯವಾಗಿ ಕಾಣದ ಅದರ ( ಚಂದ್ರನ) ಅಂಚುಗಳು ಭೂಮಿಯಲ್ಲಿರುವವರಿಗೆ ಕಾಣುತ್ತವೆ. ಈ ಓಲಾಟದಿಂದಾಗಿ ಚಂದ್ರನ 59% ಮೇಲ್ಮೈಯನ್ನು ನಾವು 30 ವರ್ಷಗಳ ಅವಧಿಯುದ್ದಕ್ಕೂ ನೋಡಬಹುದು.
ಎಲ್ಎಫ್(ಲೋ ಫ್ರೀಕ್ವೆನ್ಸಿ) – 30-300 ಕಿಲೋ ಹರ್ಟ್ಝ್ ಆವರ್ತನಗತಿಯುಳ್ಳ ( ಅಂದರೆ 1 -10ಕಿ.ಮೀ.ತರಂಗಾಂತರವುಳ್ಳ) ವಿದ್ಯುತ್ಕಾಂತೀಯ ಅಲೆಗಳು.
ಲೇಡನ್ ಜಾರ್ – ಲೇಡನ್ ಪಾತ್ರೆ – ಪೂರ್ವಕಾಲದ ಒಂದು ರೀತಿಯ ವಿದ್ಯುತ್ ಸಂಗ್ರಾಹಕ. ಇದನ್ನು ಡಚ್ ಲ್ಯಾಂಡಿನ ಲೇಡನ್ ಎಂಬ ಸ್ಥಳದಲ್ಲಿ 1745ರಲ್ಲಿ ನಿರ್ಮಿಸಿದ್ದರು. ಇದರಲ್ಲಿ ಒಂದು ಗಾಜಿನ ಪಾತ್ರೆಯ ಹೊರ ಮೇಲ್ಮೈಗೆ ಒಂದು ಲೋಹದ ತೆಳುಹಾಳೆಯನ್ನು ಹೊದಿಸಿರುತ್ತಿದ್ದು, ಒಳ ಮೇಲ್ಮೈಗೂ ಇಂಥದೇ ಹಾಳೆಯನ್ನು ಹಾಕಿ ಮುಚ್ಚಿರುತ್ತಿದ್ದರು. ಒಳ ಮೇಲ್ಮೈ ಹೊದಿಕೆಯ ಲೋಹವನ್ನು ಮುಕ್ತವಾಗಿ ತೂಗಾಡುತ್ತಿದ್ದ ಸರಪಣಿಯೊಂದು ಸ್ಪರ್ಶಿಸುತ್ತಿತ್ತು.
ಲಿವರ್ – ಮೀಟುಗೋಲು ಅಥವಾ ಸನ್ನೆಗೋಲು – ಭದ್ರವಾಗಿ ನೆಲೆಯೂರಿಸಿದ ಒಂದು ಆಧಾರದ ಸುತ್ತ ತಿರುಗಿಸಲು ಸಾಧ್ಯವಿರುವ ಒಂದು ಗಟ್ಟಿ ಕೋಲು. ಇದರಿಂದ ಭಾರಗಳನ್ನು ಎತ್ತುವುದು ಸುಲಭವಾಗುತ್ತದೆ.
ಲೆಥಾರ್ಜಿ – ನಿಶ್ಯಕ್ತಿ – ನಿರ್ದಿಷ್ಟ ಪ್ರಮಾಣೀಕೃತ ಶಕ್ತಿ ಹಾಗೂ ಒಂದು ನ್ಯೂಟ್ರಾನಿನ ಶಕ್ತಿ(E)ಯ ಅನುಪಾತದ ಋಣಾತ್ಮಕ ಸಹಜ ಕ್ರಮವಿಧಿ ( ಕ್ರಮವಿಧಿ = logarithm). ಸಾಮಾನ್ಯ ಪದಗಳಲ್ಲಿ ಹೇಳಬೇಕೆಂದರೆ ನಿಶ್ಯಕ್ತಿ ಅಂದರೆ ಶಕ್ತಿಯ ತೀವ್ರ ಕೊರತೆಯ ಸ್ಥಿತಿ.
Like us!
Follow us!