ಕನ್ನಡ ತರಗತಿಗಳಲ್ಲಿ ಓದಿಸುವುದು, ವಿದ್ಯಾರ್ಥಿಗಳ ಉಚ್ಚಾರ ತಿದ್ದುವುದು – ಇವು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತಗಳ ತರಗತಿಗಳಲ್ಲಿ ಬಹಳ ಸಾಮಾನ್ಯ ಸಂಗತಿ. ಆದರೆ ಪದವಿ ಹಂತದಲ್ಲಿ ಈ ರೀತಿಯ ಶಿಕ್ಷಣ ಚಟುವಟಿಕೆ ತುಸು ಕಡಿಮೆ. ವಿದ್ಯಾರ್ಥಿಗಳು ಪದವಿ ಹಂತಕ್ಕೆ ಬರುವ ಹೊತ್ತಿಗೆ, ‘ಸರಿಯಾದ ಉಚ್ಚಾರದೊಂದಿಗೆ ಕನ್ನಡ ಭಾಷೆಯನ್ನು ಓದುವುದನ್ನು ಕಲಿತಿರುತ್ತಾರೆ’ ಎಂಬ ಗೃಹೀತದೊಂದಿಗೆ ನಾವು ಅಧ್ಯಾಪಕರು ಪಾಠ ಮಾಡುತ್ತಿರುತ್ತೇವೆ. ಓದಿದ ಭಾಗದ ವಿಚಾರ-ವಿಮರ್ಶೆ, ವಿಶ್ಲೇಷಣೆ, ಪಾಠವನ್ನು ಜೀವನಕ್ಕೆ ಹಾಗೂ ಜೀವನವನ್ನು ಪಾಠಕ್ಕೆ ಅನ್ವಯಿಸಿ ಕಲಿಯುವ ಉನ್ನತ ಮಟ್ಟದ ಬೌದ್ಧಿಕ ಹಾಗೂ ಭಾನಾತ್ಮಕ ಕೌಶಲ್ಯ – ಇವು ಪದವಿ ವಿದ್ಯಾರ್ಥಿಗಳಲ್ಲಿ ಇರಬೇಕು ಎಂಬ ನಿರೀಕ್ಷೆ ಇರುತ್ತದೆ. ಆದರೆ, ವಾಸ್ತವಿಕ ಸನ್ನಿವೇಶದಲ್ಲಿ ತರಗತಿಗಳಲ್ಲಿ ಆಗುವ ಅನುಭವವೇ ಬೇರೆ!
ಕಥೆ, ಕಾದಂಬರಿ, ವಿಚಾರ ಪ್ರಬಂಧ, ಲಲಿತ ಪ್ರಬಂಧ, ಪ್ರವಾಸ ಕಥನ ಮುಂತಾದ ಗದ್ಯ ಭಾಗಗಳು ಪಠ್ಯವಾಗಿದ್ದಾಗ ವಿದ್ಯಾರ್ಥಿನಿಯರನ್ನು ಸಕ್ರಿಯವಾಗಿ ತೊಡಗಿಸಲು ನಾನು ಅವರನ್ನು ಎದ್ದು ನಿಲ್ಲಿಸಿ ಓದಿಸುವುದು, ಸುಲಭವಾದ ಪಾಠಗಳಿದ್ದಾಗ ಅವರನ್ನು ಆ ಭಾಗವನ್ನು ವಿವರಿಸಲು ಹೇಳುವುದು ಇಂತಹ ಅಧ್ಯಾಪನ ಚಟುವಟಿಕೆಗಳನ್ನು, ನಾನು ನನ್ನ ಬಿಎಸ್ಸಿ – ಬಿಸಿಎ ಪದವಿಯ ಕನ್ನಡ ತರಗತಿಗಳಲ್ಲಿ ಮಾಡುತ್ತಿರುತ್ತೇನೆ. ಇದೇ ರೀತಿಯಲ್ಲಿ ಈಚೆಗೆ, ಒಂದು ಗಂಭೀರವಾದ ವಿಚಾರ ಪ್ರಬಂಧವನ್ನು ವಿದ್ಯಾರ್ಥಿನಿಯೊಬ್ಬಳಿಂದ ಗಟ್ಟಿಯಾಗಿ ಓದಿಸುತ್ತಿದ್ದಾಗ, ಆ ಪಾಠದಲ್ಲಿದ್ದ “ಭೀಕರ ಪರಿಣಾಮಗಳಾಗುತ್ತವೆ” ಎಂಬ ಪದಪ್ರಯೋಗವನ್ನು ಅವಳು “ಭಿಕಾರಿ ಪರಿಣಾಮಗಳಾಗುತ್ತವೆ” ಎಂದು ಓದಿದಳು! ಭೀಕರ ಹಾಗೂ ಭಿಕಾರಿ ಎರಡೂ ಪದಗಳು ತುಸು ವ್ಯತ್ಯಾಸವಿರುವ ಸಮಾನ ಅಕ್ಷರಗಳನ್ನು ಹೊಂದಿದ್ದರಿಂದ ಹಾಗೂ ಅವಳಿಗೆ ‘ಭೀಕರ’ ಪದಕ್ಕಿಂತ ‘ಭಿಕಾರಿ’ ಪದ ಪರಿಚಿತವಿದ್ದಿರಬಹುದಾದ್ದರಿಂದ ಹೀಗಾಗಿರಬಹುದೆಂದು ನಾನು ಊಹಿಸಿ, ಕರಿಹಲಗೆಯ ಮೇಲೆ ಎರಡೂ ಪದಗಳನ್ನು ಬರೆದು ತೋರಿಸಿ, ಅವಳ ಉಚ್ಚಾರವನ್ನು ಆ ಸಂದರ್ಭದಲ್ಲಿ ಸರಿಪಡಿಸಿದೆ. ಆದರೂ ಉನ್ನತ ಶಿಕ್ಷಣದಲ್ಲಿ ಕನ್ನಡ ಭಾಷೆಯ ಮೂಲ ಸಂಗತಿಗಳ ಬಗೆಗೆ ವಿದ್ಯಾರ್ಥಿಗಳಲ್ಲಿರುವ ಅಜ್ಞಾನ ಹಾಗೂ ನಿರ್ಲಕ್ಷ್ಯಗಳು ನನ್ನನ್ನು ಚಿಂತೆಗೆ ಹಚ್ಚಿದ್ದು ಸುಳ್ಳಲ್ಲ.
Like us!
Follow us!