ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

D.C. (Direct Current)

ನೇರ ವಿದ್ಯುತ್ ಪ್ರವಾಹ – ಕೇವಲ ಒಂದು ದಿಕ್ಕಿನಲ್ಲಿ ಮಾತ್ರ ಹರಿಯುವ ವಿದ್ಯುತ್ ಪ್ರವಾಹ.

Dalton’s law

ಡಾಲ್ಟನ್ ರ ನಿಯಮ – ಅನಿಲಗಳ ಒಂದು‌ ಮಿಶ್ರಣದ ಒತ್ತಡವು ಆ ಮಿಶ್ರಣದಲ್ಲಿನ ಪ್ರತಿ ಬಿಡಿ ಅನಿಲದ ಒತ್ತಡಗಳ ಒಟ್ಟು ಮೊತ್ತವಾಗಿರುತ್ತದೆ  ಎಂದು ಸೂಚಿಸುವ ನಿಯಮವಿದು.

Damping

ಕ್ಷೀಣಗೊಳ್ಳುವಿಕೆ ಅಥವಾ ಕುಗ್ಗುವಿಕೆ – ತೂಗಾಡುತ್ತಿರುವ ಒಂದು ವ್ಯವಸ್ಥೆಯ ಶಕ್ತಿಯು ಕುಗ್ಗುತ್ತಾ ಬರುವುದರಿಂದ, ಅದರ ತೂಗಾಟ ಅಥವಾ ಆಂದೋಲನಗಳ ಅಲೆಯೆತ್ತರವು ಕಡಿಮೆಯಾಗುತ್ತಾ ‌ಬರುವುದು.‌ 

Data base

ದತ್ತಾಂಶ ಕಣಜ ಅಥವಾ ಮಾಹಿತಿ‌ ಕಣಜ – ಗಣಕ ಯಂತ್ರದಲ್ಲಿ ಸಂಕೇತ ನೀಡಿ ಸಂಗ್ರಹಿಸಬಹುದಾದ ಮತ್ತು ವಿವಿಧ ಶಿರೋನಾಮೆಗಳಡಿಯಲ್ಲಿ ಪಡೆದುಕೊಳ್ಳಬಹುದಾದ ಮಾಹಿತಿಯ ದೊಡ್ಡ ಸಂಗ್ರಹ.

Dating technique

ಕಾಲಗಣನೆಯ ತಂತ್ರವಿಧಾನ – ಕಲ್ಲು ಬಂಡೆಗಳು, ಉತ್ಖನನ(ಅಗೆತ) ಸ್ಥಳದ ವಸ್ತುಗಳು, ಪಳೆಯುಳಿಕೆಗಳೇ ಮುಂತಾವುಗಳ ಕಾಲವನ್ನು ನಿಗದಿ ಮಾಡುವ ಅಥವಾ ಕಂಡು ಹಿಡಿಯುವ ವಿಧಾನಗಳು

Daughter

ಮಗಳು – ಒಂದು  ಬೀಜಕೇಂದ್ರದ ವಿಭಜನೆಯಿಂದ ಹುಟ್ಟಿದ ಇನ್ನೊಂದು ಬೀಜಕೇಂದ್ರ.

Day

ದಿನ – ತನ್ನ ಅಕ್ಷದ ಮೇಲೆ ತಿರುಗುತ್ತಿರುವ ಭೂಮಿಯು ತನ್ನ ಒಂದು ಸುತ್ತು ಪೂರೈಸಲು ತೆಗೆದುಕೊಳ್ಳುವ ‌ಸಮಯ. 

De Broglie wave

ಡಿ ಬ್ರಾಗ್ಲಿ ಅಲೆ  – ಪ್ರೋಟಾನು ಅಥವಾ ಎಲೆಕ್ಟ್ರಾನಿನಂತಹ ಒಂದು‌ ಕಣಕ್ಕೆ ಸಂಬಂಧಿಸಿದ ಅಲೆ.‌1924 ರಲ್ಲಿ ಲೂಯಿಸ್ ಡಿ ಬ್ರಾಗ್ಲಿಯವರು ಇದರ ಪ್ರಸ್ತಾಪ ಮಾಡಿದರು.

Dead beat 

ಅತಿ ಕುಗ್ಗಿದ – ಗ್ಯಾಲ್ವನೋಮೀಟರಿನಂತಹ ಉಪಕರಣದಲ್ಲಿನ ಆಂದೋಲನಗಳು ಅತ್ಯಂತ ಕಡಿಮೆ ಸಮಯದಲ್ಲಿ ನಿಂತು ಹೋದಾಗ ಅದನ್ನು ಅತಿ ಕುಗ್ಗಿದ ಸ್ಥಿತಿಯದ್ದು ಎನ್ನುತ್ತಾರೆ.

Dead earth

ಭೂ ಸಂಪರ್ಕ – ವಿದ್ಯುಚ್ಛಕ್ತಿಗೆ ಸಂಬಂಧಿಸಿದಂತೆ ಬಳಸುವ ಪದವಿದು.  ಯಾವುದೇ ಒಂದು ವಾಹಕಕ್ಕೂ (ವಿದ್ಯುತ್ ಹರಿಯುತ್ತಿರುವ) ಭೂಮಿಗೂ ಕಡಿಮೆ ಪ್ರತಿರೋಧವುಳ್ಳ ಸಂಪರ್ಕ ಕಲ್ಪಿಸಿರುವ ಸನ್ನಿವೇಶ ಇದು‌.

Page 1 of 7

Kannada Sethu. All rights reserved.