ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Isotherm

ಐಸೋಥರ್ಮ್ – ಸಮತಾಪರೇಖೆ – ಸಮ ಉಷ್ಣತೆಯುಳ್ಳ ಬಿಂದುಗಳು ಸೇರುತ್ತಾ ಹೋಗುವ ಒಂದು ರೇಖೆ ಅಥವಾ ರೇಖಾಚಿತ್ರ.

Isothermal process

ಐಸೋಥರ್ಮಲ್ ಪ್ರೋಸೆಸ್ – ಸಮತಾಪ ಅಥವಾ ಸಮೋಷ್ಣ ಪ್ರಕ್ರಿಯೆ – ತನ್ನ ಉದ್ದಕ್ಕೂ ಉಷ್ಣತೆಯು ಸ್ಥಿರವಾಗಿರುವಂತಹ ಪ್ರಕ್ರಿಯೆ. ಇದರಲ್ಲಿ ವ್ಯವಸ್ಥೆಯು, ಬದಲಾವಣೆಯುದ್ದಕ್ಕೂ ತನ್ನ ಸುತ್ತಮುತ್ತಲ ಪರಿಸರದೊಂದಿಗೆ ಸಮತೋಲನದಲ್ಲಿರುತ್ತದೆ.

Isothermal transformation

ಐಸೋಥರ್ಮಲ್ ಟ್ರ್ಯಾನ್ಸ್ಫಾರ್ಮೇಷನ್ – ಸಮೋಷ್ಣ ಪರಿವರ್ತನೆ – ಉಷ್ಣಚಲನಾ ಶಾಸ್ತ್ರದಲ್ಲಿ ಸರ್ವೇಸಾಮಾನ್ಯವಾಗಿ ಬಳಸುವ ಪದ. ಸ್ಥಿರವಾದ ಉಷ್ಣತೆಯಲ್ಲಿ ಒಂದು ವಸ್ತುವಿನಲ್ಲಿ ಉಂಟಾಗುವ ಬದಲಾವಣೆಯನ್ನು ಇದು ಹೇಳುತ್ತದೆ.

Isotones

ಐಸೋಟೋನ್ಸ್ – ಸಮಸಾರಿಗಳು ಅಥವಾ ಸಮಕೇಂದ್ರೀಯಗಳು – ಒಂದೇ ಸಂಖ್ಯೆಯ ನ್ಯೂಟ್ರಾನುಗಳನ್ನು ಆದರೆ ಬೇರೆ ಬೇರೆ ಸಂಖ್ಯೆಯ ಪ್ರೋಟಾನುಗಳನ್ನು ಹೊಂದಿರುವ ಬೀಜಕೇಂದ್ರಗಳು (ನ್ಯೂಕ್ಲೈಡುಗಳು).

Isotope separation

ಐಸೋಟೋಪ್ ಸೆಪರೇಷನ್ – ಸಮಸ್ಥಾನಿಗಳ ಪ್ರತ್ಯೇಕೀಕರಣ – ಒಂದು ವಸ್ತುವಿನ ಸಮಸ್ಥಾನಿಗಳನ್ನು ಅವುಗಳ ಭೌತಿಕ ಗುಣಲಕ್ಷಣಗಳಲ್ಲಿರುವ ತುಸು ವ್ಯತ್ಯಾಸದ ಆಧಾರದ ಮೇಲೆ ಪ್ರತ್ಯೇಕಗೊಳಿಸುವುದು. ಇದನ್ನು ಮಾಡಲು ಬೇರೆ ಬೇರೆ ವಿಧಾನಗಳನ್ನು ಅನುಸರಿಸುತ್ತಾರೆ.

Isotopes

ಐಸೋಟೋಪ್ಸ್ – ಸಮಸ್ಥಾನಿಗಳು –  ಒಂದೇ ಪರಮಾಣು ಸಂಖ್ಯೆಯಿದ್ದು ಬೇರೆ ಬೇರೆ ದ್ರವ್ಯರಾಶಿ ಸಂಖ್ಯೆಗಳುಳ್ಳ ಒಂದು ವಸ್ತುವಿನ ಪರಮಾಣುಗಳು. ಇಂತಹ ಪ್ರಭೇದಗಳ ಪ್ರೋಟಾನು ಸಂಖ್ಯೆಯು ಸಮವಾಗಿದ್ದು, ನ್ಯೂಟ್ರಾನುಗಳ ಸಂಖ್ಯೆ ಭಿನ್ನವಾಗಿರುತ್ತದೆ. ಇವುಗಳಿಗೆ ಸಮಾನ ರಾಸಾಯನಿಕ ಗುಣಲಕ್ಷಣಗಳು ಹಾಗೂ ಭಿನ್ನವಾದ ಭೌತಿಕ ಗುಣಲಕ್ಷಣಗಳಿರುತ್ತವೆ.

Isotopic number( neutron excess)

ಐಸೋಟೋಪಿಕ್ ನಂಬರ್ –  ನ್ಯೂಟ್ರಾನ್ ಎಕ್ಸೆಸ್ – ಸಮಸ್ಥಾನಿ ಸಂಖ್ಯೆ (ನ್ಯೂಟ್ರಾನ್ ಆಧಿಕ್ಯ) – ಒಂದು ಸಮಸ್ಥಾನಿಯಲ್ಲಿ ಪ್ರೋಟಾನುಗಳ ಸಂಖ್ಯೆಗೂ ನ್ಯೂಟ್ರಾನುಗಳ ಸಂಖ್ಯೆಗೂ ಇರುವ ವ್ಯತ್ಯಾಸ‌.

Isotopic( Iso/Isobaric) spin

ಐಸೀಟೋಪಿಕ್( ಐಸೋ/ ಐಸೋಬಾರಿಕ್) ಸ್ಪಿನ್ – ಸಮಸ್ಥಾನೀ(ಸಮ/ಸಮಭಾರಿ) ಗಿರಕಿ – ಒಂದು ರೀತಿಯ ಮೂಲಭೂತ ಕಣಗಳಾದ ಹೇಡ್ರಾನುಗಳಿಗೆ ನೀಡುವಂತಹ ಒಂದು ಶಕ್ತಿಪೊಟ್ಟಣ ( ಕ್ವಾಂಟಂ) ಸಂಖ್ಯೆ. ಬಹಳಷ್ಟು ರೀತಿಗಳಲ್ಲಿ ಸಮನಾಗಿದ್ದು, ವಿದ್ಯುತ್ ಕಾಂತೀಯ ಗುಣಲಕ್ಷಣಗಳಲ್ಲಿ ಮಾತ್ರ ಭಿನ್ನವಾಗುವ ಕಣಗಳ ಒಂದು ಕಟ್ಟಿನ ಸದಸ್ಯರನ್ನು ಗುರುತಿಸಲು ಈ ಪದವನ್ನು ಬಳಸಲಾಗುತ್ತದೆ.

Isotropic

ಐಸೋಟ್ರೋಪಿಕ್ – ಸಮವರ್ತಿ – ಒಂದು ಮಾಧ್ಯಮದ ಗುಣಲಕ್ಷಣಗಳು ಎಲ್ಲ ದಿಕ್ಕುಗಳಲ್ಲೂ ಅವವೇ ಆಗಿದ್ದರೆ, ಅಂದರೆ, ಆ ಭೌತಿಕ ಗುಣಲಕ್ಷಣಗಳಿಗೂ ಅದರ ದಿಕ್ಕಿಗೂ ಸಂಬಂಧವಿಲ್ಲ ಎನ್ನುವುದಾದರೆ ಅದನ್ನು ಸಮವರ್ತಿ ಎನ್ನುತ್ತಾರೆ.

Page 11 of 11

Kannada Sethu. All rights reserved.