ಪ್ರತ್ಯೇಕಿಸುವ ಯಂತ್ರ – ಬೇರೆ ಬೇರೆ ಸಾಂದ್ರತೆಯುಳ್ಳ ಘನವಸ್ತುವಿನ ಅಥವಾ ದ್ರವವಸ್ತುವಿನ ಕಣಗಳನ್ನು ಒಂದು ಕೊಳವೆಯಲ್ಲಿ ಅಡ್ಡಡ್ಡಕ್ಕೆ ತಿರುಗಿಸಿ, ಅವುಗಳನ್ನು ಪ್ರತ್ಯೇಕಿಸುವ ಒಂದು ಉಪಕರಣ. ಹೆಚ್ಚು ಸಾಂದ್ರರೆಯುಳ್ಳ ಕಣಗಳು ಹೆಚ್ಚಿನ ತ್ರಿಜ್ಯದಲ್ಲಿ ಸುತ್ತಿ ಕೊಳವೆಯುದ್ದಕ್ಕೂ ಚಲಿಸುತ್ತವೆ, ಮತ್ತು ಇವು ಕಡಿಮೆ ಸಾಂದ್ರತೆಯುಳ್ಳ ಕಣಗಳನ್ನು ಇನ್ನೊಂದು ತುದಿಗೆ ದೂಡುತ್ತವೆ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಕೇಂದ್ರಗಮನಿ ಬಲ – ಒಂದು ವಸ್ತುವಿನ ಮೇಲೆ ವರ್ತಿಸಿ ಅದನ್ನು ವೃತ್ತಾಕಾರಾದಲ್ಲಿ ಸುತ್ತುವಂತೆ ಮಾಡುವ ಬಲ. ಇದು ವೃತ್ತಕೇಂದ್ರದ ದಿಕ್ಕಿನಲ್ಲಿ ವರ್ತಿಸುತ್ತದೆ.
ಮಧ್ಯಬಿಂದು ಸಮಕಟ್ಟು – ಒಂದು ಬಿಂದುವಿಗೆ ಸಂಬಂಧ ಪಟ್ಟಂತೆ ಸಮಕಟ್ಟನ್ನು ಹೊಂದಿರುವುದು. ಮಧ್ಯಬಿಂದು ಸಮಕಟ್ಟುಳ್ಳ ಹರಳುಗಳಲ್ಲಿ ಅವುಗಳ ಮೇಲ್ಮೈಗಳು ಸಮಾನಾಂತರ ಜೋಡಿಗಳಾಗಿ ಕಾಣಸಿಗುತ್ತವೆ.
ದ್ರವ್ಯರಾಶಿ ಕೇಂದ್ರಬಿಂದು ಅಥವಾ ದ್ರವ್ಯಕೇಂದ್ರ – ಒಂಧು ಸಮರೂಪೀ ಘನವಸ್ತುವಿನ ದ್ರವ್ಯರಾಶಿಯ ಕೇಂದ್ರಬಿಂದು.
ಲೋಹಪಿಂಗಾಣಿ – ಲೋಹ ಮತ್ತು ಪಿಂಗಾಣಿಗಳು ಒಟ್ಟು ಸೇರಿದಂತಹ ಒಂದು ವಸ್ತುವನ್ನು ಸೂಚಿಸುತ್ತದೆ. ಹೆಚ್ಚಿನ ಉಷ್ಣತೆ, ತುಕ್ಕು. ಉಜ್ಜುವಿಕೆ ಮುಂತಾದವುಗಳಿಗೆ ಜಗ್ಗದ ಅತ್ಯಂತ ಕಠಿಣ ವಸ್ತು ಇದು.
ಸಿ.ಜಿ.ಎಸ್. ಮೂಲಮಾನ ಪದ್ಧತಿ – ಸೆಂಟಿಮೀಟರ್, ಗ್ರಾಂ, ಮತ್ತು ಸೆಕೆಂಡುಗಳನ್ನು ಮೂಲಭೂತ ಮೂಲಮಾನವಾಗಿ ಉಳ್ಳ ಒಂದು ಮೂಲಮಾನ ವ್ಯವಸ್ಥೆ.
ಸರಣಿ ಕ್ರಿಯೆ – ಪರಮಾಣು ಬೀಜಕೇಂದ್ರದ ಸೀಳಿಕೆಗಳಲ್ಲಿ, ಕೆಲವು ಭಾರವಾದ ಬೀಜಕೇಂದ್ರಗಳು ನ್ಯೂಟ್ರಾನುಗಳನ್ನು ಹೀರಿಕೊಂಡು ಕಡಿಮೆ ಭಾರದ ಬೀಜಕೇಂದ್ರಗಳಾಗಿ ಒಡೆದುಕೊಳ್ಳುತ್ತವೆ. ಈ ಕ್ರಿಯೆಯಲ್ಲಿ ಮತ್ತೆ ಬಿಡುಗಡೆಯಾಗುವ ನ್ಯೂಟ್ರಾನುಗಳು ಉಳಿದ ಭಾರವಾದ ಬೀಜಕೇಂದ್ರಗಳ ಸೀಳಿಕೆಗೆ ಕಾರಣವಾಗುತ್ತವೆ. ಹೀಗಾಗಿ ಸೀಳಿಕೆಗಳ ಸರಣಿಯೇ ಉಂಟಾಗಿಬಿಡುತ್ತದೆ. ಇದನ್ನು ಸರಣಿಕ್ರಿಯೆ ಎಂದು ಕರೆಯುತ್ತಾರೆ.
ಚಾಲ್ಡ್ನಿ ತಗಡುಗಳು – ಘನವಸ್ತುಗಳಲ್ಲಿನ ಕಂಪನಗಳನ್ನು ಪತ್ತೆ ಮಾಡಲು ಬಳಸುವ ಒಂದು ರೀತಿಯ ತಗಡುಗಳು.
ವಾಹಿನಿ – ಪ್ರಸಾರ ಕ್ರಿಯೆಯಲ್ಲಿ ವಿದ್ಯುತ್ ಅಲೆಗಳ ಪ್ರಸರಣಕ್ಕಾಗಿ ಅಥವಾ ಸ್ವೀಕಾರಕ್ಕಾಗಿ ಬಳಸುವ ನಿರ್ದಿಷ್ಟ ಆವರ್ತನಗಳ ಒಂದು ಕಟ್ಟು ಅಥವಾ ಒಂದು ನಿರ್ದಿಷ್ಟ ದಾರಿ.
ಇದ್ದಲು – ಮರವನ್ನು ಅಥವಾ ಇನ್ಯಾವುದಾದರೂ ಸಾವಯವ ವಸ್ತುವನ್ನು ಗಾಳಿಯ ಗೈರುಹಾಜರಿಯಲ್ಲಿ ಸುಟ್ಟಾಗ ಉಂಟಾಗುವಂತಹ ಇಂಗಾಲದ ಒಂದು ರೂಪ. ಇದಕ್ಕೆ ನಿಶ್ಚಿತ ಆಕಾರವಿರುವುದಿಲ್ಲ.