ಇನ್ಕಾಂಡೆಸೆನ್ಸ್- ಪ್ರಜ್ವಲ ಬೆಳಕು – ತುಂಬ ಹೆಚ್ಚು ತಾಪಮಾನ ಹೊಂದಿರುವ ಮೇಲ್ಮೈಯಿಂದ ಸೂಸುವಂತಹ ಬೆಳಕು. ನಾವು ಮನೆಗಳಲ್ಲಿ ಬಳಸುವ, ಟಂಗ್ಸ್ಟನ್ ತಂತುವನ್ನು ಹೊಂದಿರುವ ವಿದ್ಯುತ್ ದೀಪವು ಇದಕ್ಕೆ ಉದಾಹರಣೆಯಾಗಿದೆ.
ಇಂಪಲ್ಸ್ ( ಇಂಪಲ್ಸಿವ್ ಫೋರ್ಸ್) – ಹಠಾತ್ತಾದ ಕ್ರಿಯೆ (ಹಠಾತ್ತಾಗಿ ವರ್ತಿಸುವ ಬಲ) – ಢಿಕ್ಕಿ ಹೊಡೆದಾಗ ಆಗುವಂತೆ ತುಂಬ ಕಡಿಮೆ ಕಾಲದಲ್ಲಿ ವರ್ತಿಸುವ ಬಲ.
ಇಂಪೀರಿಯಲ್ ಯೂನಿಟ್ಸ್ – ರಾಜಪ್ರಭುತ್ವದ ಮೂಲಮಾನಗಳು – ಗಜ ( ಯಾರ್ಡ್) ಮತ್ತು ಪೌಂಡ್ ಗಳ ಮೇಲೆ ಆಧಾರಿತವಾದ ಅಳತೆಯ ವ್ಯವಸ್ಥೆ. IPS – ಇಂಚು – ಪೌಂಡ್ – ಸೆಕೆಂಡ್ ವ್ಯವಸ್ಥೆಯು ಈ ರಾಜಪ್ರಭುತ್ವದ ಮೂಲಮಾನಗಳ ಮೇಲೆ ಆಧಾರಿತವಾದ ಅಳತೆ ವ್ಯವಸ್ಥೆಯಾಗಿದೆ.
ಇಂಪೀಡೆನ್ಸ್ ಬ್ರಿಡ್ಜ್ – ಅಡ್ಡಿಯ ಸೇತುವೆ – ವ್ಹೀಟ್ ಸ್ಟೋನ್ ವಿದ್ಯುನ್ಮಂಡಲಕ್ಕೆ ತುಂಬ ಹೋಲಿಕೆ ಇರುವ ಒಂದು ವಿದ್ಯುತ್ ಉಪಕರಣ. ಇದನ್ನು ಅಡ್ಡಿಗಳನ್ನು ತುಲನೆ ಮಾಡಲು ಬಳಸಲಾಗುತ್ತದೆ.
ಇಂಪೀಡೆನ್ಸ್ ( ಸಿಂಬಲ್ Z) – ಅಡ್ಡಿ ( ಸಂಕೇತ Z) – ವಿದ್ಯುನ್ಮಂಡಲವೊಂದು ಪರ್ಯಾಯ ವಿದ್ಯುತ್ ಗೆ ಒಡ್ಡುವ ಪ್ರತಿರೋಧದ ಅಳತೆ.
ಇಮ್ಮರ್ಶನ್ ಆಬ್ಜೆಕ್ಟಿವ್ – ಮುಳುಗಿಸಿಟ್ಟ ಮಸೂರ – ಸೂಕ್ಷ್ಮದರ್ಶಕದಲ್ಲಿ ಇರುವಂತಹ ಹೆಚ್ಚಿನ ಸಾಮರ್ಥ್ಯವುಳ್ಳ ಒಂದು ರೀತಿಯ ವಸ್ತುಮಸೂರ ಇದು. ( ವಸ್ತು ಮಸೂರ = ನೋಡುತ್ತಿರುವ ವಸ್ತುವಿಗೆ ಅತ್ಯಂತ ಹತ್ತಿರ ಇರುವ ಮಸೂರ).