ಈಚೆಗೆ ನನಗೊಮ್ಮೆ ಮುಂಬೈಯಿಂದ ಗೋವಾಗೆ ಕೊಂಕಣ ರೈಲುಮಾರ್ಗದಲ್ಲಿ ಹೋಗುವ ‘ಮಾಂಡೊವಿ ಎಕ್ಸ್ ಪ್ರೆಸ್’ ಎಂಬ ಹೆಸರಿನ ರೈಲಿನಲ್ಲಿ ಪ್ರಯಾಣ ಮಾಡುವ ಅವಕಾಶ ಒದಗಿತ್ತು. ಬೆಟ್ಟಗಳು, ನದಿಗಳು, ಹಸಿರಾದ ಕಣಿವೆಗಳು, ಎತ್ತರದ ಸೇತುವೆಗಳು ಹಾಗೂ ಅನೇಕ ಸುರಂಗಗಳಿಂದ ಕೂಡಿದ ನಯನ ಮನೋಹರ ರೈಲು ಮಾರ್ಗ ಅದು. ಈ ಕಾರಣದಿಂದಾಗಿ ಹಗಲಿನಲ್ಲಿ ಈ ರೈಲಿನಲ್ಲಿ ಪಯಣಿಸುವುದು ಒಂದು ಸಂತಸದ ವಿಷಯ. ಇದರ ಜೊತೆಗೆ ಇನ್ನೊಂದು ಉಲ್ಲಾಸಕರ ವಿಷಯವೆಂದರೆ ಈ ರೈಲಿನಲ್ಲಿ ಬಗೆಬಗೆಯ ಬಹು ರುಚಿಕರವಾದ ತಾಜಾ ತಿಂಡಿಗಳು ಕೈಗೆಟಕುವ ಬೆಲೆಯಲ್ಲಿ ದಿನವಿಡೀ ದೊರೆಯುತ್ತವೆ. ಸಮೋಸಾ, ವಡಾ ಪಾವ್, ಉಪ್ಪಿಟ್ಟು- ಶಿರಾ, ದೋಸೆ, ಟೊಮ್ಯಾಟೊ ಸೂಪ್, ಗುಲಾಬ್ ಜಾಮೂನು, ಕಾಂದಾ (ಈರುಳ್ಳಿ) ಬಜಿ, ಮೇಥಿ ಬಜಿ, ಸ್ಯಾಂಡ್ ವಿಚ್, ಫಿಂಗರ್ ಚಿಪ್ಸ್, ಲಾಲಿಪಾಪ್, ಹೋಳು ಮಾಡಿದ ತಾಜಾ ಹಣ್ಣುಗಳು…..ಹೀಗೆ ತಿಂಡಿ- ತಿನಿಸು, ಪಾನೀಯಗಳ ಸಾಲುಸಾಲೇ ಬರುತ್ತಿರುತ್ತದೆ. ಕಾಫಿ-ಟೀ ಅಂತೂ ಅದೆಷ್ಟು ಸಲ ಬರುತ್ತವೋ ಲೆಕ್ಕವೇ ಇಲ್ಲ. ಭೋಜನಪ್ರಿಯರಿಗಂತೂ ಈ ರೈಲುಪ್ರಯಾಣ ಅಂದರೆ ಹಬ್ಬ! ಅದಕ್ಕೇ ನೋಡಿ ಈ ರೈಲಿಗೆ ‘ಫುಡ್ ಕ್ವೀನ್’ (‘ತಿಂಡಿ ರಾಣಿ’ ಅನ್ನೋಣವೇ ನಾವು ಕನ್ನಡದಲ್ಲಿ?) ಎಂದು ಬಿರುದು ಕೊಟ್ಟಿದ್ದಾರೆ!!
ಸರಿ. ನಾವು ಪ್ರಯಾಣಿಸುತ್ತಿದ್ದಾಗ ಈ ತಿಂಡಿಗಳ ಸಾಲು ಸಾಲು ಬರುತ್ತಿದ್ದಂತೆ, ಒಂದು ಸಲ “ಮೆಂದು ವಡಾ …ಮೆಂದು ವಡಾ….ಲೀಜಿಯೇ ಗರ್ಮಾಗರಂ ಮೆಂದು ವಡಾ…” ಎಂದು ತಿನಿಸು ಮಾರಾಟಗಾರನೊಬ್ಬ ಕೂಗಿಕೊಂಡು ಹೋಗುತ್ತಿದ್ದ. ನನಗೆ ‘ಇದು ಯಾವ ತಿಂಡಿಯಪ್ಪಾ!’ ಎಂಬ ಕುತೂಹಲ ಮೂಡಿತು. ಅನೇಕ ಜನ ಅದನ್ನು ಕೊಂಡು ತಿನ್ನುತ್ತಿದ್ದರು. ನೋಡಿದರೆ ಅದು ನಮ್ಮ ಉದ್ದಿನ ವಡೆ! ಅದನ್ನು ಮೊಸರಿನಲ್ಲಿ ಹಾಕಿದ್ದರಿಂದ ಅದು ಮೊಸರೊಡೆ ಅಥವಾ ತೈರೊಡೆ. ಈಚೆಗೆ ಇದನ್ನು ಜನರು ಮೆದು ವಡಾ ಎಂದು ಸಹ ಕರೆಯಲು ಪ್ರಾರಂಭಿಸಿದ್ದಾರೆ. ಆ ಮಾರಾಟಗಾರನಿಗೆ ಮೆದು ಎಂಬ ಕನ್ನಡ ಪದ ಪರಿಚಿತವಿರಲಿಲ್ಲ ಅನ್ನಿಸುತ್ತೆ, ಅವನು ಮೆಂದು ವಡಾ, ಮೆಂದು ವಡಾ ಎಂದು ತನಗೆ ತಿಳಿದಂತೆ ಕೂಗುತ್ತಿದ್ದ! ಈ ತಪ್ಪು ಉಚ್ಚಾರ ಅವನೊಬ್ಬನಿಗೇ ಸೀಮಿತವಾಗುತ್ತದೋ ಅಥವಾ ಅನೇಕ ಜನ ಬಳಸಿ ಬಳಸಿ ಈ ಹೆಸರು ಆ ವಡೆಗೇ ಬಂದುಬಿಡುತ್ತದೋ ನೋಡಬೇಕು! ಭಾಷೆ ‘ತಪ್ಪು – ಸರಿಗಳ ‘ ಕಲ್ಲುಮಣ್ಣುಗಳನ್ನು ತನ್ನೊಳಗೆ ಸೇರಿಸಿಕೊಂಡೇ ಹರಿಯುವ ನದಿಯಲ್ಲವೆ?
Like us!
Follow us!