ಮ್ಯಾಗ್ನೆಟಿಕ್ ಬಾಟಲ್ – ಕಾಂತೀಯ ಸೀಸೆ – ವಿದ್ಯುದಂಶ ಹೊತ್ತಿರುವ ಕಣಗಳನ್ನು ಹದ್ದುಬಸ್ತಿನಲ್ಲಿಡಲು( ನಿರ್ಬಂಧದಲ್ಲಿಡಲು) ಸಹಾಯ ಮಾಡುವ ವ್ಯವಸ್ಥೆ ಇದು. ಇದನ್ನು ಅಣುಬೀಜಕೇಂದ್ರದ ಬೆಸುಗೆಯ ಸಂದರ್ಭದಲ್ಲಿ ಪ್ಲಾಸ್ಮಾವನ್ನು ನಿರ್ಬಂಧದಲ್ಲಿಡಲು ಬಳಸುತ್ತಾರೆ. ಮೂಲತಃ ಒಂದು ಅಸಮಗುಣೀ ಕಾಂತಕ್ಷೇತ್ರ ಇದು.
ಮ್ಯಾಗ್ನೆಟಿಕ್ ಬ್ಯಾಲೆನ್ಸ್ – ಕಾಂತೀಯ ತ್ರಾಸು (ಕಾಂತೀಯ ತಕ್ಕಡಿ) – ಅಯಸ್ಕಾಂತ ಧ್ರುವಗಳ ನಡುವಿನ ಆಕರ್ಷಣೆ ಅಥವಾ ವಿಕರ್ಷಣೆಯನ್ನು ನೇರವಾಗಿ ಅಳೆಯಲು ಬಳಸುವಂತಹ ಉಪಕರಣ.
ಮ್ಯಾಗ್ನೆಟಿಕ್ ಅನಿಸೋಟ್ರೋಫಿ – ಕಾಂತೀಯ ಅಸಮವರ್ತನೆ – ಕೆಲವು ವಸ್ತುಗಳ ಕಾಂತೀಯ ಗುಣಗಳು ಯಾವ ದಿಕ್ಕಿನಲ್ಲಿ ಅವುಗಳನ್ನು ಅಳೆಯುತ್ತೇವೆ ಎಂಬುದನ್ನು ಅವಲಂಬಿಸಿರುತ್ತವೆ. ಈ ಗುಣವನ್ನು ಕಾಂತೀಯ ಅಸಮವರ್ತನೆ ಎನ್ನುತ್ತಾರೆ.
ಮ್ಯಾಗ್ನೆಟಿಕ್ ಆಂಪ್ಲಿಫೈಯರ್ – ಕಾಂತೀಯ ಬಲವರ್ಧಕ- ಇದೊಂದು ರೀತಿಯ ವಿದ್ಯುತ್ ಬಲವರ್ಧಕ. ಇದನ್ನು ಹೇಗೆ ವ್ಯವಸ್ಥೆಗೊಳಿಸಿರುತ್ತಾರೆ ಎಂದರೆ, ನಿಯಂತ್ರಿಸುವ ನೇರ ವಿದ್ಯುತ್ತನ್ನು ಸಣ್ಣ ಪ್ರಮಾಣದಲ್ಲಿ ನೀಡಿದಾಗ ಇದಕ್ಕೆ ಜೋಡಿಸಿದಂತಹ ವಿದ್ಯುನ್ಮಂಡಲದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳು ಉಂಟಾಗುತ್ತವೆ.
ಮ್ಯಾಗ್ನೆಟ್ – ಅಯಸ್ಕಾಂತ – ಕಾಂತ ಗುಣವುಳ್ಳ ವಸ್ತುವಿನ ತುಂಡು. ಇದನ್ನು ಅಯಸ್ಕಾಂತ ಕ್ಷೇತ್ರದಲ್ಲಿಟ್ಟು ಅಯಸ್ಕಾಂತವಾಗಿಸಿರುತ್ತಾರೆ. ಇದು ಒಂದು ಬಿಲ್ಲೆಯ ಆಕಾರದಲ್ಲಿ ಅಥವಾ ಒಂದು ಕುದುರೆ ಲಾಳದ ಆಕಾರದಲ್ಲಿ ಇರುತ್ತದೆ.
ಮ್ಯಾಗ್ನಡರ್- ಮ್ಯಾಗ್ನಡರ್ – ಶಾಶ್ವತ ಅಯಸ್ಕಾಂತಗಳನ್ನು ತಯಾರು ಮಾಡಲು ಬಳಸುವ ಒಂದು ಪಿಂಗಾಣಿ ವಸ್ತುವಿನ ವ್ಯಾಪಾರೀ ಹೆಸರು. ಇದು ಮುದ್ದೆಯಾಗಿಸಿದ ಕಬ್ಬಿಣದ ಆಕ್ಸೈಡು ಮತ್ತು ಬೇರಿಯಂ ಆಕ್ಸೈಡುಗಳನ್ನು ಹೊಂದಿರುತ್ತದೆ.
ಮ್ಯಾಗ್ನ್ – ಮ್ಯಾಗ್ನ್ – ಈ ಪದವನ್ನು ವಿದ್ಯುತ್ಕಾಂತೀಯ ಶಾಸ್ತ್ರದಲ್ಲಿ ಬಳಸುತ್ತಾರೆ. ಒಂದು ಮಾಧ್ಯಮದ ಪರಮ ಪ್ರವೇಶಸಾಧ್ಯತೆಯನ್ನು ಅಳೆಯುವಂತಹ ಮೂಲಮಾನ ಇದು. ಅಂದರೆ, ಎಷ್ಟರ ಮಟ್ಟಿಗೆ ವಸ್ತುವೊಂದು ಕಾಂತವಾಗಬಹುದು ಎಂಬ ಅಳತೆಯ ನೆಲೆ.
1 ಮ್ಯಾಗ್ನ್ = 1 ಮೀಟರ್ ಗೆ 1 ಹೆನ್ರಿ.
ಮ್ಯಾಜಿಕ್ ನಂಬರ್ಸ್ – ಮಾಂತ್ರಿಕ ಸಂಖ್ಯೆಗಳು – ಪರಮಾಣುವಿನ ಬೀಜಕೇಂದ್ರದಲ್ಲಿ ತುಂಬ ಸ್ಥಿರವಾದ ರಚನೆಗಳನ್ನು ಉತ್ಪತ್ತಿ ಮಾಡುವ ಪ್ರೋಟಾನು ಅಥವಾ ನ್ಯೂಟ್ರಾನು ಸಂಖ್ಯೆಗಳಿವು.
Like us!
Follow us!