ಒಮ್ಮೊಮ್ಮೆ ಹೊಸ ಕನ್ನಡ ಪದಗಳು ಅನಿರೀಕ್ಷಿತ ಸ್ಥಳಗಳಲ್ಲಿ ಸಿಕ್ಕಿಬಿಡುತ್ತವೆ. ಈಚೆಗೆ ಒಂದು ಸಲ, ರಾತ್ರಿ 9.00 ಗಂಟೆಯ ಸಮಯದಲ್ಲಿ ಹೆಬ್ಬಾಳದ ಕಡೆಯಿಂದ, ನಮ್ಮ ಮನೆ ಇರುವ ಹಂಪಿನಗರಕ್ಕೆ ಓಲಾ ಕ್ಯಾಬ್ ಹಿಡಿದು ಬರುತ್ತಿದ್ದೆ. ಆ ಗಾಡಿಯ ಚಾಲಕನು ಅಂದು ತುಂಬ ಮಾತಾಡುವ ಉಮೇದಿನಲ್ಲಿದ್ದ. ಇಡೀ ದಿನ ಕೆಲಸ ಮಾಡಿದ ಆಯಾಸದಿಂದಾಗಿ ಪ್ರತಿಯಗಿ ಮಾತಾಡುವ ಹುರುಪು ನನ್ನಲ್ಲಿ ಅಷ್ಟೇನೂ ಇರಲಿಲ್ಲ. ಆದರೂ ಸೌಜನ್ಯಕ್ಕೆಂದು ಅವನ ಮಾತುಗಳನ್ನು ಕೇಳಿಸಿಕೊಂಡು ಹೂಂಗುಟ್ಟುತ್ತಿದ್ದೆ. ತಾನು ಭಾಗವಹಿಸಿದ್ದ ಒಂದು ಭರ್ಜರಿ ಮದುವೆಯ ಬಗ್ಗೆ ಮಾತಾಡುತ್ತಿದ್ದನವನು.
ಮಳವಳ್ಳಿಯ ಕಡೆ ನಡೆದ ತನ್ನ ಬಂಧುಗಳ ಒಂದು ಮದುವೆಯ ಬಗ್ಗೆ ಹೇಳುತ್ತಾ “ನೆರವಿಗೂ ಬರ್ಬೇಕು ಅಂತ ಕರೆದಿದ್ರು. ಸೂಟು ಹಾಕ್ಕೊಂಡು, ಹೆಂಡ್ತಿಗೆ ಒಳ್ಳೇ ರೇಷ್ಮೆ ಸೀರೆ ಉಡಿಸ್ಕೊಂಡು ಹೋಗಿದ್ದೆ ಮೇಡಂ. ಏನು ಗೌರವ ಕೊಟ್ರೂ ಅಂತೀರಿ! ‘ಏನಪ್ಪಾ, ಬೆಂಗಳೂರಿಗೆ ಹೋದ್ಮೇಲೆ ಸೂಟುಬೂಟು ಹಾಕ್ಕೊಂಬಿಟ್ಟಿದೀಯ! ನಿನ್ನ ಖದರ್ರೇ ಖದರ್ರು ಈಗ’ ಅಂದ್ರು ಮೇಡಂ ನಮ್ಮ ನೆಂಟ್ರು. ಎಲ್ಹೋದ್ರೂ ಮರ್ಯಾದೆ ಮುಖ್ಯ. ಅಲ್ವಾ? ನಿಮ್ಮ ನೆಂಟರಿಷ್ಟರ ಕಡೆ ಮದುವೆಗಳಾದ್ರೆ ನೆರವಿಗೆ ಹೋಗಲ್ವಾ ನೀವು? ಹೋಗ್ತೀರಲ್ವಾ?” ಅಂದ. ನಾನು ಹಳಗನ್ನಡ ಕಾವ್ಯಗಳ ಸಂದರ್ಭದಲ್ಲಿ ‘ನೆರವಿ’ಯನ್ನು ಸಮೂಹ ಎಂಬ ಅರ್ಥದಲ್ಲಿ ಓದಿದ್ದೆನೇ ಹೊರತು, ಹೀಗೆ ದಿನಬಳಕೆಯ ಮಾತಿನಲ್ಲಿ ಅದನ್ನು ಬಳಸಿರಲಿಲ್ಲ, ಬೇರೆಯವರು ಬಳಸುವುದನ್ನು ಕೇಳಿಯೂ ಇರಲಿಲ್ಲ. ಹಾಗಾಗಿ “ನೆರವಿ ಅಂದ್ರೆ ಏನು?” ಎಂದು ನಾನು ಆ ಚಾಲಕನನ್ನು ಕೇಳಿದೆ. “ಬೀಗರೌತಣ. ಅದೇ. ಮದುವೆಯ ಮಾರ್ನೇ ದಿನ ಗಂಡಿನ್ ಕಡೆಯೋರು ಹೆಣ್ಣಿನ ಕಡೆಯೋರಿಗೆ ಕೊಡ್ತಾರಲ್ಲ ಆ ಊಟ. ಬೀಗರೂಟ ಮೇಡಂ” ಅಂದ. ‘ಓ…ಹೌದಾ’ ಅಂದೆ. ಅಷ್ಟರಲ್ಲಿ ನನ್ನ ಮನೆ ಬಂತು, ಗಾಡಿಯಿಂದ ಇಳಿದೆ. ಮನೆಯ ಮೆಟ್ಟಿಲು ಹತ್ತುತ್ತಿದ್ದಾಗ ‘ನೆರವಿ! ಅರೆ! ಎಷ್ಟು ಚಂದದ ಪದ ಅಲ್ವಾ ಇದು!’ ಅನ್ನಿಸಿತು. ಹೊಸ ಪದ ಹೇಳಿಕೊಟ್ಟ ಚಾಲಕನಿಗೆ ಮನಸ್ಸು ಧನ್ಯವಾದ ಅರ್ಪಿಸಿತು. ಮನೆಯೊಳಗೆ ಬಂದವಳೇ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ತೆರೆದು ‘ನೆರವಿ’ ಪದದ ಅರ್ಥ ನೋಡಿದೆ. ಕನ್ನಡ ಭಾಷೆಯಲ್ಲಿನ ಒಂದು ನಾಮಪದ ಇದು. ಗುಂಪು, ಸಮೂಹ, ರಾಶಿ, ಮೊತ್ತ, ದಟ್ಟೈಸುವಿಕೆ, ದಟ್ಟಣೆ, ಆಧಿಕ್ಯ, ಅತಿಶಯತೆ, ಬೀಗರೂಟ – ಇಷ್ಟು ಅರ್ಥಗಳಿವೆ ಈ ಮೂರಕ್ಷರದ ಪದಕ್ಕೆ! ನಮ್ಮ ಕನ್ನಡ ಭಾಷೆ ಅದ್ಭುತ ಅಲ್ವಾ….!
Like us!
Follow us!