ನಾವು ಕನ್ನಡ ಅಧ್ಯಾಪಕರು ಕೆಲವು ಸಲ ತರಗತಿಗಳಲ್ಲಿ ಅಚ್ಚರಿಗೊಳಿಸುವ ಸನ್ನಿವೇಶಗಳಿಗೆ ಎದುರಾಗುತ್ತೇವೆ. ನನ್ನ ಇಂತಹ ಒಂದು ಅನುಭವವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಈಚೆಗೆ ಒಂದು ಪದವಿ ತರಗತಿಯಲ್ಲಿ ಸೃಜನಶೀಲ ಬರವಣಿಗೆ ಎಂಬ ಪ್ರಾಯೋಗಿಕ ಕನ್ನಡ ತರಗತಿಯ ಭಾಗವಾಗಿ “ಇಂದಿನಿಂದ ಹತ್ತು ವರ್ಷಗಳ ನಂತರ ತಾನು ಯಾವ ಉದ್ಯೋಗದಲ್ಲಿ ಇರುತ್ತೇನೆ? ಆಗ ತನ್ನ ಸ್ಥಿತಿ- ಸ್ಥಾನಮಾನ ಹೇಗಿರುತ್ತೆ?” ಎಂಬುದನ್ನು ಪ್ರತಿ ವಿದ್ಯಾರ್ಥಿನಿಯೂ ಕಲ್ಪಿಸಿಕೊಂಡು ಬರೆಯಬೇಕು ಎಂಬ ಕೆಲಸವನ್ನು ನೀಡಿದ್ದೆ. ‘ವಿದ್ಯಾರ್ಥಿನಿಯರ ಕಲ್ಪನಾ ಶಕ್ತಿ, ಸೃಜನಶೀಲ ಬರವಣಿಗೆಯ ಕೌಶಲ್ಯ ಹೆಚ್ಚಲಿ, ಮುಂದೆ ಲೇಖಕಿಯರಾಗುವವರಿಗೆ ಇದು ಒಂದು ತರಬೇತಿ ಸ್ಥಳವಾಗಲಿ’ ಎಂಬ ಉದ್ದೇಶದಿಂದ ಈ ತರಗತಿ ಚಟುವಟಿಕೆಯನ್ನು ನಮ್ಮ ವಿಭಾಗವು ಹಮ್ಮಿಕೊಂಡದ್ದು.
ಸರಿ. ವಿದ್ಯಾರ್ಥಿನಿಯರಿಗೆ ಬರೆಯಲು 15 ನಿಮಿಷ ಸಮಯ ಕೊಟ್ಟು, ಆನಂತರ ಅವರು ಏನು ಬರೆದಿದ್ದಾರೆ ಎಂದು ಓದಿಸಲಾರಂಭಿಸಿದೆ. ಒಬ್ಬ ವಿದ್ಯಾರ್ಥಿನಿ ತಾನು ಬರೆದದ್ದನ್ನು ಓದಲೆಂದು ತರಗತಿ- ವೇದಿಕೆಗೆ ಬಂದವಳು, ಓದುತ್ತಾ, “ಇನ್ನು ಹತ್ತು ವರ್ಷಗಳ ನಂತರ ನಾನು ನನ್ನದೇ ಆದ ಒಂದು ಶಾಲೆ-ಕಾಲೇಜನ್ನು ಮತ್ತು ಗೋವಾಲಯವನ್ನು ತೆರೆದಿರುತ್ತೇನೆ” ಎಂದಳು. ಅವಳು ಬಳಸಿದ ‘ಗೋವಾಲಯ’ ಎಂಬ ಪದವನ್ನು ಕೇಳಿ ನನಗೆ ಅಚ್ಚರಿಯಾಯಿತು. ‘ಗೋವುಗಳನ್ನು ಸಾಕುವ, ಅವುಗಳಿಗೆ ರಕ್ಷಣೆ ನೀಡುವ ತಾಣ’ ಅಂದರೆ ‘ಗೋಶಾಲೆ’ಗೆ ಅವಳು ‘ಗೋವಾಲಯ'(!) ಎಂಬ ಪದ ಬಳಸಿದ್ದಳೆಂದು ತೋರುತ್ತದೆ. ‘ದೇವಾಲಯ’ ಎಂಬ ಪರಿಚಿತ ಪದವನ್ನು ನೆನೆದು ‘ಗೋವಾಲಯ’ ಎಂಬ ಅಪರಿಚಿತ ಪದವನ್ನು ಬಳಸಿರಬೇಕು ಈ ವಿದ್ಯಾರ್ಥಿನಿ ಅನ್ನಿಸಿತು. ಮನುಷ್ಯರು ತಮಗೆ ಗೊತ್ತಿರುವ ಪದಗಳ ಆಯ್ಕೆ ಮತ್ತು ನೂತನ ಸಂಯೋಜನೆಯಿಂದ ಹೊಸ ಹೊಸ ಪದಗಳನ್ನು ಎಷ್ಟು ಚೆನ್ನಾಗಿ ಸೃಷ್ಟಿಸುತ್ತಾರಲ್ಲ! ಕವಿಗಳೂ ಇದನ್ನೇ ಮಾಡುತ್ತಾರಲ್ಲವೆ?
Like us!
Follow us!