ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Interstitial compound

ಇಂಟರ್ ಸ್ಟೀಷಿಯಲ್ ಕಾಂಪೌಂಡ್ – ವಸ್ತುಮಧ್ಯ ಸ್ಥಳಯುತ ಸಂಯುಕ್ತ – ಒಂದು ಲೋಹದ ಕಂಡಿಚೌಕಟ್ಟು ರಚನೆಯ ಮಧ್ಯಮಧ್ಯದಲ್ಲಿನ ಸ್ಥಳಗಳಲ್ಲಿ ಅಲೋಹವೊಂದರ ಅಣುಗಳು ಅಥವಾ ಪರಮಾಣುಗಳು ಬಂದು ನೆಲೆಸುವುದು. ಈ ವಸ್ತುಗಳು ಬಹಳಷ್ಟು ಸಂದರ್ಭಗಳಲ್ಲಿ ಲೋಹದ ಗುಣಗಳನ್ನು ತೋರುತ್ತವೆ‌. ಕಾರ್ಬೈಡ್, ಬೋರೈಡ್ ಮತ್ರು ಸಿಲಿಸೈಡ್ ಗಳು ಇದಕ್ಕೆ ಉದಾಹರಣೆ.

Intrinsic ( i – type) semiconductor

ಇಂಟ್ರಿನ್ಸಿಕ್ (ಐ – ಟೈಪ್ ) ಸೆಮಿಕಂಡಕ್ಟರ್ –  ಅಂತರ್ಗತ ಅರೆವಾಹಕ – ತಾಪಮಾನೀಯ ಸಮತೋಲನವಿದ್ದಾಗ ಎಲೆಕ್ಟ್ರಾನು ಮತ್ತು‌ ರಂಧ್ರಗಳ ಸಾಂದ್ರತೆಯು ಸಮನಾಗಿರುವ ಅರೆವಾಹಕ.

Inverse network

ಇನ್ವರ್ಸ್ ನೆಟ್ವರ್ಕ್ – ಉಲ್ಟಾ ವಿದ್ಯುತ್ ಜಾಲ‌ – ಒಂದು ವಿದ್ಯುತ್ ಜಾಲದಲ್ಲಿ ಅಡ್ಡಿಗಳ ಗುಣಲಬ್ಧವು ಅವುಗಳ ಆವರ್ತನಕ್ಕೆ ಸಂಬಂಧಪಡದೆ ಸ್ವತಂತ್ರವಾಗಿದ್ದಾಗ (ಅವುಗಳ ಹರಹಿನ ಒಳಗೆ)  ಅದನ್ನು ಉಲ್ಟಾ ವಿದ್ಯುತ್ ಜಾಲ ಎನ್ನುತ್ತಾರೆ.

Inverse Stark effect

ಇನ್ವರ್ಸ್ ಸ್ಟಾರ್ಕ್ ಎಫೆಕ್ಟ್ – ವಿಲೋಮ‌ ಸ್ಟಾರ್ಕ್ ಪರಿಣಾಮ – ಸ್ಟಾರ್ಕ್ ಪರಿಣಾಮ ( ಅಣು ಮುಂತಾದವುಗಳಿಂದ ಹೊರಸೂಸುವ ವಿಕಿರಣವು ಸೀಳಿಕೊಳ್ಳುವ ಪರಿಣಾಮ) ವನ್ನು ಹೀರಿಕೆಯ ರೇಖೆಗಳಲ್ಲಿ, ಸಂದರ್ಭಗಳಲ್ಲಿ ಗಮನಿಸುವುದನ್ನು ವಿಲೋಮ ಸ್ಟಾರ್ಕ್ ಪರಿಣಾಮ ಎನ್ನುತ್ತಾರೆ‌.‌

Inverse Zeeman effect

ಇನ್ವರ್ಸ್ ಝೀಮನ್ ಎಫೆಕ್ಟ್ – ವಿಲೋಮ ಝೀಮನ್ ಪರಿಣಾಮ‌ – ಹೀರಿಕೊಳ್ಳುವಿಕೆಯ‌ ವರ್ಣಪಟಲದಲ್ಲಿ‌ ಗಮನಿಸಲಾಗುವ ಝೀಮನ್ ಪರಿಣಾಮವನ್ನು ವಿಲೋಮ ಝೀಮನ್ ಪರಿಣಾಮ ಎನ್ನುತ್ತಾರೆ.

Inverting prism ( Erecting prism)

ಇನ್ವರ್ಟಿಂಗ್ ಪ್ರಿಸಂ ( ಎರೆಕ್ಟಿಂಗ್ ಪ್ರಿಸಂ) – ತಲೆಕೆಳಗೆ ಮಾಡುವ ಪಟ್ಟಕ (ನೇರ ನಿಲ್ಲಿಸುವ ಪಟ್ಟಕ) – ದೃಶ್ಯವಿಜ್ಞಾನ ವ್ಯವಸ್ಥೆಯಲ್ಲಿ ಒಂದು ಬಿಂಬವನ್ನು  ಅದರ ಆಕಾರ ಅಥವಾ ಗಾತ್ರವನ್ನು ಬದಲಾಯಿಸದೆ ತಲೆಕೆಳಗೆ ಮಾಡಲು ಬಳಸುವ ಪಟ್ಟಕ. ಆಂತರಿಕ ಪ್ರತಿಫಲನದಿಂದಾಗಿ ಈ ಪಟ್ಟಕವು ಈ ರೀತಿ ಕೆಲಸ ಮಾಡುತ್ತದೆ. 

Ion

ಐಯಾನು – ವಿದ್ಯುದಣು ಅಥವಾ ಅಯಾನು – ವಿದ್ಯುದಂಶವುಳ್ಳ ಒಂದು ಕಣ‌. ಇದರಲ್ಲಿ ಒಂದು ಪರಮಾಣು ಅಥವಾ ಪರಮಾಣುಗಳ ಒಂದು ಗುಂಪು ಇದ್ದು, ಇವು ಒಂದೋ ಎಲೆಕ್ಟ್ರಾನುಗಳನ್ನು ಕಳೆದುಕೊಂಡಿರುತ್ತವೆ ಅಥವಾ ಪಡೆದುಕೊಂಡಿರುತ್ತವೆ.‌

Ion density

ಅಯಾನ್ ಡೆನ್ಸಿಟಿ‌ – ವಿದ್ಯುದಣು ಸಾಂದ್ರತೆ – ಒಂದು ಘಟಕ ಅಳತೆಯ ಪರಿಮಾಣದಲ್ಲಿ ಲಭ್ಯವಿರುವಂತಹ ವಿದ್ಯುದಣುಗಳ ಅಥವಾ ಅಯಾನುಗಳ ಸಾಂದ್ರತೆ. ಇದನ್ನು ಸಾಮಾನ್ಯವಾಗಿ ವಿದ್ಯುದಣು ಸಾರತೆ ಎನ್ನುತ್ತಾರೆ.

Ion engine

ಅಯಾನ್ ಇಂಜಿನ್ – ವಿದ್ಯುದಣು ಚಾಲಕ ಯಂತ್ರ – ವಿದ್ಯುದಣುಗಳ ಪುಂಜವನ್ಬು ಬಳಸಿಕೊಂಡು ಬಾಹ್ಯಾಕಾಶ ನೌಕೆಗಳನ್ನು ಮೇಲಕ್ಕೆ ಚಿಮ್ಮಿಸುವ ಒಂದು ಚಾಲಕ ಯಂತ್ರ‌( ಇಂಜಿನ್).

Ion irradiation

ಅಯಾನ್ ಇರ್ರೇಡಿಯೇಷನ್ – ವಿದ್ಯುದಣು ವಿಕಿರಣೀಕರಣ – ತುಂಬ ಶಕ್ತಿಯುತವಾದ ವಿದ್ಯುದಣುಗಳ ಮಳೆಯನ್ನು ಒಂದು ವಸ್ತುವಿನ ಮೇಲೆ ಸುರಿಸುವುದು.  

Page 8 of 10

Kannada Sethu. All rights reserved.