ಸಂಚಾರಿ ದೂರವಾಣಿಯನ್ನು ಬಳಸದೆ ಇರುವವರು ತೀರಾ ಅಪರೂಪ ಎನ್ನುವ ಕಾಲ ಇದು. ಈ ದೂರವಾಣಿಯ ಮಾತು ಬಂದಾಗಲೆಲ್ಲ ನಾವು ಬಳಸುವ ಒಂದು ಪದ ಅಂದರೆ ಸಿಮ್.
“ನಿಮ್ಮ ಸಿಮ್ ಯಾವುದು? ಏರ್ಟೆಲ್ಲಾ, ಜಿಯೋನಾ, ಬಿಎಸ್ಎನ್ನೆಲ್ಲಾ?”
“ಫೋನು ಕಳ್ದು ಹೋಯ್ತಾ? ಬಿಡಿ, ಕಳ್ಳ ಬೇರೆ ಸಿಮ್ ಹಾಕಿರ್ತಾನೆ”
“ನಂಗೆ ಇದೇ ನಂಬರ್ ಗೆ ಬೇರೆ ಸಿಮ್ ಸಿಗುತ್ತಾ?”
“ನಿಮ್ಮ ಫೋನ್ ನಲ್ಲಿ ಒಂದು ಸಿಮ್ ಇದೆಯಾ? ಎರಡಾ?”
……. ಹೀಗೆ ನಾವು ಈ ಸಿಮ್ ಪದವನ್ನು ಬಳಸುತ್ತಲೇ ಇರುತ್ತೇವೆ. ಅಲ್ಲವೆ?
ಈ ಸಿಮ್ ಪದ ಕೇಳಿದಾಗೆಲ್ಲ “ಏನಿದು? ಇದರ ಪೂರ್ಣ ರೂಪ ಏನು? ಕನ್ನಡದಲ್ಲಿ ಇದಕ್ಕೆ ಯಾವುದಾದರೂ ಹೆಸರಿದೆಯಾ?” ಹೀಗೆ ನಾನು ಆಲೋಚಿಸುತ್ತಿದ್ದೆ. ಸಿಮ್ ಪದದ ಪೂರ್ಣರೂಪ “Subscribers Identity Module”. ಇದರ ಸಂಕ್ಷಿಪ್ತ ರೂಪ – ಪ್ರತಿ ಪದದ ಮೊದಲಕ್ಷರಗಳನ್ನು ತೆಗೆದುಕೊಂಡು SIM ಎಂಬ ಪದವನ್ನು ಮಾಡಲಾಗಿದೆ.
ಇದನ್ನು ಕನ್ನಡದಲ್ಲಿ ಅನುವಾದಿಸಿಕೊಂಡರೆ ” ಚಂದಾದಾರರ ಗುರುತಿನ ಘಟಕ “. ಇದರ ಮೊದಲಕ್ಷರಗಳನ್ನು ಇಟ್ಟುಕೊಂಡರೆ ಚಂ.ಗು.ಘ. ಅರ್ಥಾತ್ ಚಂಗುಘ. ಆದರೆ ಚಂಗುಘ ಎಂಬ ಪದ ಬಳಕೆಗೆ ಬರುವುದು ಕಷ್ಟ. ಏಕೆಂದರೆ, ಸಿಮ್ ಎಂಬುದು ನಮ್ಮ ‘ಸಂಚಾರಿ ದೂರವಾಣಿಯೊಳಗೆ ಇರುವಂತಹ ಲೋಹದ ಒಂದು ಪುಟ್ಟ ಆಯಾತಾಕಾರದ ಬಿಲ್ಲೆ’ ಎಂಬುದನ್ನು ನೆನಪಿಸಿಕೊಳ್ಳುವುದು ಬಿಟ್ಟರೆ, ಬಹಳಷ್ಟು ಜನರು ಇದರ ಹೆಸರಿನ ಭಾಷೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರುವುದಿಲ್ಲ. ಸಿಮ್ ಎಂಬುದು ಆ ಬಿಲ್ಲೆಯ ಹುಟ್ಟು ಹೆಸರು ಎಂಬಂತೆ ನಾವೆಲ್ಲಾ ಆರಾಮಾಗಿ ಸಿಮ್, ಸಿಮ್ ಎಂದು ಹೇಳಿಕೊಂಡು ಇದ್ದೇವೆ.
ಕನ್ನಡದಲ್ಲಿ ಸಿಮ್ ಗೆ ‘ಚಂದದಾರರ ಗುರುತಿನ ಘಟಕ’ ಎಂದು ಬಳಸುತ್ತೇವೋ ಇಲ್ಲವೋ, ಆದರೆ ಈ ಪದವನ್ನು ತಿಳಿದುಕೊಂಡಿರುವುದರಲ್ಲಿ ತಪ್ಪಿಲ್ಲ. ಅಲ್ಲವೆ? ಯಾವುದೇ ಹೊಸ ಅನ್ವೇಷಣೆಗಾದರೂ ಕನ್ನಡ ಪದ ಹುಡುಕಿಕೊಳ್ಳುವುದಂತೂ ಕನ್ನಡ ಪ್ರಿಯರಿಗೆ ಒಂದು ಖುಷಿ. ಏನಂತೀರಿ?
Like us!
Follow us!