ಕೊಡಗಿನ ಜನ ಪಂದಿಕರಿ‌ ಎಂಬ ಪದ ಬಳಸುವುದನ್ನು ನಾವು ಕೇಳುತ್ತೇವೆ ಅಲ್ವಾ? ಕೊಡವ ಭಾಷೆಯಲ್ಲಿ ಮಲಯಾಳಂ ಪದಗಳೂ ಇರ್ತವೆ. ಮಲಯಾಳಿಗಳು ಸಾರಿಗೆ/ಪಲ್ಯಕ್ಕೆ ಕರಿ ಎಂಬ ಪದವನ್ನು ಕೆಲವೊಮ್ಮೆ ಬಳಸ್ತಾರೆ. ಕಡಲ ಕರಿ, ಕೂಟುಕರಿ..ಹೀಗೆ. ಇನ್ನು ನಾವು ದರ್ಶಿನಿ ಹೋಟೆಲ್ ಗೆ ಹೋದರೆ ‘ರೋಟಿ-ಕರಿ’ ಎಂಬ ಪದ ಬಳಸುತ್ತೇವೆ‌.‌

ಅಂದ ಹಾಗೆ, ದಕ್ಷಿಣ  ಕನ್ನಡದ ಪ್ರದೇಶದಲ್ಲಿ ಉಪ್ಕರಿ ಎಂಬ ಪದ ಬಳಸ್ತಾರೆ. ಉಡುಪಿ ಕುಂದಾಪುರ ಶೈಲಿಯ ಅಡುಗೆಯಲ್ಲಿ ಅವಲಕ್ಕಿ ಉಪ್ಕರಿ ಬಹು ಪ್ರಸಿದ್ಧ. ತಾಜಾ ತೆಂಗಿನತುರಿಗೆ ಹಸಿಮೆಣಸು, ಒಗ್ಗರಣೆ,  ತೆಳು ಅವಲಕ್ಕಿ ಬೆರೆಸಿ ಮಾಡುವ ಒಂದು ಸುಲಭದ ರುಚಿಕರ ತಿಂಡಿ ಉಪ್ಕರಿ. ನೀರಿನ ಅಂಶ ಇರದ ಒಣಪಲ್ಯಕ್ಕೂ ದಕ್ಷಿಣ ಕನ್ನಡದ ಕಡೆ ಉಪ್ಕರಿ ಎಂಬ ಪದ ಬಳಕೆಯಲ್ಲಿದೆ.

ಪದದಲ್ಲಿರುವ ಕರಿ ಹಾಗೂ ನಾವು ಕನ್ನಡದಲ್ಲಿ ಕ್ರಿಯಾಪದವಾಗಿ ಬಳಸುವ ಕರಿ ( ಹಪ್ಪಳ ಕರಿ, ಅಪ್ಪನ್ನ ಕರಿ ಮಗು) ಗಳ ಅರ್ಥ ಎಷ್ಟು ಭಿನ್ನ ಅಲ್ಲವೆ ಎಂದು ನಾನು ಯೋಚಿಸುತ್ತೇನೆ.

ಅಚ್ಚರಿ ಎಂದರೆ ಕರಿ‌ ಎಂಬ ಪದ ತಮಿಳಿನಿಂದ ಇಂಗ್ಲಿಷ್ ಭಾಷೆಗೆ ಹೋಗಿದೆ. ತಮಿಳಿನಲ್ಲಿ ಕಾಯ್ಕರಿ, ಮರಕ್ಕರಿ, ಆಟುಕ್ಕರಿ, ಮೀನ್ಕರಿ ಎಂಬ ಪದಗಳಿವೆ. ಆದರೆ ನಮ್ಮ ವಸಾಹತುಕಾರರು, ಹಿಂದಿನ ಆ ಕಾಲದಲ್ಲಿ ಇಷ್ಟೆಲ್ಲ ವೈವಿಧ್ಯವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಎಂಬ ಕಾರಣಕ್ಕಾಗಿ, ಸಾರು, ಪಲ್ಯ ಮುಂತಾದ ಎಲ್ಲ ಮಸಾಲೆಯುತ, ಖಾರವಾದ ಖಾದ್ಯಗಳನ್ನೂ ಕರಿ ಎಂಬ ಒಂದೇ ಪದದಿಂದ ಗುರುತಿಸಿಕೊಂಡರಂತೆ.

ಅನ್ನದ ಜೊತೆ ನೆಂಚಿಕೊಳ್ಳುವ ಯಾವುದೇ ಸಾರು, ಪಲ್ಯದಂತಹ ವ್ಯಂಜನಕ್ಕೆ ಇಂಗ್ಲಿಷ್ ನಲ್ಲಿ ಕರಿ ಎನ್ನುವುದು ಅಭ್ಯಾಸ ಆಗಿಬಿಟ್ಟಿದೆ. “ಸ್ಟೇ ಅವೇ ಫ್ರಂ ಕರಿ, ಹರಿ ಅಂಡ್ ವರಿ” ( ಸಾರು, ಅವಸರ ಹಾಗೂ ಚಿಂತೆಗಳಿಂದ ದೂರವಿರಿ) ಎನ್ನುವುದು ಒಂದು ಪ್ರಸಿದ್ಧ ಇಂಗ್ಲಿಷ್ ಸೂಕ್ತಿ.

ಇನ್ನು ನಮ್ಮ‌ ಕರಿಬೇವು ಸೊಪ್ಪು‌. ಇದರಲ್ಲಿನ ಕರಿ ಯಾವುದು? ‘ಕರಿ’ ಗೆ ಹಾಕುವುದು ಎಂದು ಅರ್ಥವೋ ಅಥವಾ ಇನ್ಯಾವುದಾದರೂ ಅರ್ಥವೋ? ಇಲ್ಲಿ  ಅದು ಕಪ್ಪು ಬಣ್ಣ ಅನ್ನುವ ಅರ್ಥ ಹೊಂದಿರಲಾರದು.  ಬಹುಶಃ ಸಾರಿಗೆ ಹಾಕುವ ಬೇವಿನ ಎಲೆ ಎಂದೇ ಇದರ ಅರ್ಥವಿರಬಹುದು‌.‌ ಏಕೆಂದರೆ ತೆಲುಗು, ತಮಿಳು, ಮಲಯಾಳಂ ಮುಂತಾದ ಇತರ ದ್ರಾವಿಡ ಭಾಷೆಗಳಲ್ಲೂ ಈ ಸೊಪ್ಪಿನ ಹೆಸರಲ್ಲಿ ಕರಿ ಇದೆ.

ತಮಿಳು – ಕರಿವೆಪ್ಪಿಲೈ

ತೆಲುಗು – ಕರಿಪಾಕು/ಕರೆಪಾಕು

ಮಲಯಾಳಂ – ಕರಿವೆಪ್ಪಿಲ

ಒಟ್ಟಿನಲ್ಲಿ ತುಂಬ ಕುತೂಹಲ ಕೆರಳಿಸುವ ಪದ ಈ ‘ಕರಿ’. ಏನಂತೀರಿ?