ಕೇಕ್ ಎಂಬುದು ಪ್ರಪಂಚದ ಅತಿ ಪ್ರಸಿದ್ಧ ತಿನಿಸುಗಳಲ್ಲಿ ಒಂದು ಅನ್ನಿಸುತ್ತೆ. ಪಾಪದ ಬ್ರೆಡ್ಡಿನ ಶ್ರೀಮಂತ ದಾಯಾದಿಯಂತೆ ಕಾಣಿಸುವ ಈ ಕೇಕ್ ಎಂಬ ಮಾಯಾತಿನಿಸಿನ ರೂಪ-ರುಚಿ ವೈವಿಧ್ಯಗಳು ಹಲವು. 13 ನೇ ಶತಮಾನದ ಜರ್ಮನಿಕ್ ಮೂಲದ, ವೈಕಿಂಗ್ ಸಂದರ್ಭದ ನೋರ್ಸ್ ಭಾಷಾಬಳಗದ ಕಾಕಾ ಎಂಬ ಪದವು ಕೇಕ್ ಪದಕ್ಕೆ ಮೂಲವಂತೆ. ಚಿಕ್ಕಮಕ್ಕಳಿಗಂತೂ ಸರಿಯೇ ಸರಿ, ದೊಡ್ಡವರಲ್ಲೂ ಅನೇಕರಿಗೆ ಈ ತಿನಿಸು ಇಷ್ಟ
ಈ ಪ್ರಪಂಚಪ್ರಿಯ ತಿನಿಸಿನ ಕನ್ನಡ ನಾಮಧೇಯ ಏನು ಎಂದು ಯೋಚಿಸುತ್ತಿದ್ದೆ ನಾನು. ಸಾಮಾನ್ಯವಾಗಿ ಕೇಕ್, ಕೇಕು ಎಂಬ ಪದಗಳನ್ನೇ ಕನ್ನಡದಲ್ಲಿ ಬಳಸುತ್ತೇವಲ್ಲ. ಇನ್ನು ಯಾವುದಾದರೂ ಪದಗಳಿವೆಯೇ ಎಂದು ಗೂಗಲಮ್ಮನನ್ನು ಕೇಳಿದಾಗ ‘ದುಂಡುಸಿಹಿ’, ‘ತಿನಿಸುಬಿಲ್ಲೆ’ ಎಂಬ ಯಾಂತ್ರಿಕ ತರ್ಜುಮೆ ಪದಗಳು ಕಾಣಿಸಿದವು! ‘ರೊಟ್ಟಿ’ ಎಂಬ ಪದ ಕೂಡ ಕಂಡಿತು. ಆದರೆ ಇವುಗಳಲ್ಲಿ ಯಾವುದನ್ನು ಕೇಕ್ ಗೆ ನಾವು ಕನ್ನಡ ಸಂವಾದಿಯಾಗಿ, ಸಾರ್ವತ್ರಿಕವಾಗಿ ಬಳಸಲು ಸಾಧ್ಯ? ಎಂಬ ಪ್ರಶ್ನೆ ಕೂಡ ಹುಟ್ಟಿತು. ಬಹುಶಃ ಬಸ್ಸು, ಕಾರು, ಪೋಲೀಸು, ಪೆನ್ನು, ಹೋಟಲು – ತರಹದ ಉಕಾರಾಂತ್ಯ ಕನ್ನಡೀಕೃತ ಇಂಗ್ಲಿಷ್ ಪದಗಳಂತೆ ಕೇಕು ಎಂದೇ ಬಳಸುವುದೇ ಸಾಧುವಾದ ಆಯ್ಕೆ ಅನಿಸುತ್ತೆ. ಏನಂತೀರಿ? ಅಂದ ಹಾಗೆ ನಮ್ಮ ದೋಸೆಗೆ ಇಂಗ್ಲೀಷಿನವರು ಪ್ಯಾನ್ ಕೇಕ್ ಎಂದು ಹೆಸರಿಟ್ಟುಕೊಂಡು ಅದನ್ನೂ ಈ ಕೇಕೆಂಬ ಮನಮೋಹಕ ತಿನಿಸಿನ ಒಂದು ವಿಧವಾಗಿಸಿಬಿಟ್ಟಿದ್ದಾರಲ್ಲ…ಅಕಟಕಟಾ….!
Like us!
Follow us!