ಈಗಿನ ಹುಡುಗಿಯರು, ಮಹಿಳೆಯರು ಜೀನ್ಸು ಪ್ಯಾಂಟು/ಲಂಗ/ ಅಂಗಿ ತೊಟ್ಟಾಗ ಅದರ ಮೇಲೆ ‘ಶ್ರಗ್’ ಎಂಬ ಸಡಿಲವಾದ, ಗುಂಡಿರಹಿತ ಕೋಟ್ ನಂತೆ ತೋರುವ, ಸಾಮಾನ್ಯವಾಗಿ ತೆಳುವಾದ ಬಟ್ಟೆಯಲ್ಲಿ ಹೊಲಿದಿರುವ, ತೋಳುಗಳಿರುವ, ಒಂದು ಮೇಲಂಗಿಯನ್ನು ತೊಡುವುದನ್ನು ನಾವು ಗಮನಿಸುತ್ತೇವಲ್ಲ, ಅದನ್ನು ಇಂಗ್ಲಿಷ್ ನಲ್ಲಿ Shrug ಎನ್ನುತ್ತಾರೆ. ಆ ಭಾಷೆಯಲ್ಲಿ ಶ್ರಗ್ ಎಂಬ ಪದಕ್ಕೆ “ಔದಾಸೀನ್ಯ, ಅಸಹಾಯಕತೆ, ತಿರಸ್ಕಾರ, ಕೋಪ ಮೊದಲಾದವುಗಳನ್ನು ಸೂಚಿಸುವುದಕ್ಕಾಗಿ ಭುಜ ಎಗರಿಸು, ಹೆಗಲು ಹಾರಿಸು” ಎಂಬ ಅರ್ಥವು, ಅದು ಕ್ರಿಯಾಪದ ಆದಾಗ ಬರುತ್ತೆ. ಇನ್ನು, ಅದು ನಾಮಪದ ಆದಾಗಲೂ (ಭುಜದ) ಹಾರಿಕೆ ಎಂಬ ಅರ್ಥವೇ ಬರುತ್ತೆ. ಈ ನಡುವೆ ಹೀಗೇ, ಉಡುಪುಗಳ ಬಗ್ಗೆ ಸಾಂದರ್ಭಿಕವಾಗಿ ಮಾತಾಡುತ್ತಿದ್ದಾಗ ನನ್ನ ಯುವ ಸಹೋದ್ಯೋಗಿಯೊಬ್ಬರು “ಮೇಡಂ, ಶ್ರಗ್ ಗೆ ಕನ್ನಡದಲ್ಲಿ ಏನಂತಾರೆ?” ಎಂದು ನನ್ನನ್ನು ಕೇಳಿದರು. ನನಗೆ ಆ ತಕ್ಷಣ ಉತ್ತರಿಸಲು ತಿಳಿಯಲಿಲ್ಲ, ಏಕೆಂದರೆ ಎಂದೂ ನಾನು ಆ ಮೇಲಂಗಿಯ ಕನ್ನಡ ಸಂವಾದಿ ಪದದ ಬಗ್ಗೆ ಯೋಚಿಸಿರಲಿಲ್ಲ. “ಯೋಚನೆ ಮಾಡಿ ಹೇಳ್ತೀನಿ” ಅಂದೆ.
ಗೂಗಲಮ್ಮನನ್ನು ಕೇಳಿದಾಗ ಆಕೆ ‘ಇದು ತೊಟ್ಟ ಅಂಗಿಯ ಮೇಲೆ ತೊಡುವ ಒಂದು ಸಡಿಲ ಅರ್ಧ ಕೋಟು, ಬಹುಶಃ ಸ್ಪೇನ್ ದೇಶದ ‘ಬೋಲೆರೊ ಜ್ಯಾಕೆಟ್’ ನಿಂದ (1850 ರ ಕಾಲದ್ದು) ಸ್ಫೂರ್ತಿ ಪಡೆದಿರಬೇಕು’ ಎಂಬ ವಿವರಣೆ ಕೊಟ್ಟಳು. ಹಾಗೇ ಆಲೋಚನೆ ಮಾಡಿದಾಗ ಅನ್ನಿಸ್ತು – ಈ ಮೇಲಂಗಿಗೆ ‘ಭುಜಗವಸು’ ಎಂಬ ಕನ್ನಡ ಪದವನ್ನು ಬಳಸಬಹುದೇನೋ ಅಂತ. Mask ಗೆ ಮುಖಗವಸು ಅಂತಾರಲ್ಲ, ಹಾಗೆ. ಅದು ಬಾಯಿ ಭಾಗವನ್ನು ಮುಚ್ಚಿದಂತೆ ಇದು ಭುಜಕ್ಕೆ ಹೊದಿಕೆ ಆಗುತ್ತದೆ. ‘ಭುಜಗವಸು’ ಪದದ ಬಗ್ಗೆ ನಿಮಗೆ ಏನನ್ಸುತ್ತೆ? ಹೇಳ್ತೀರಲ್ಲ….
Like us!
Follow us!