ಅದು ಒಂದು ಕಾಲೇಜಿನ ಅಧ್ಯಾಪಕರ ಸಂಘವು ಆಯೋಜಿಸಿದ್ದ ಒಂದು ಕಾರ್ಯಕ್ರಮ.‌ ಆ ದಿನ ವಯೋನಿವೃತ್ತಿ ಹೊಂದಲಿದ್ದ ಅಧ್ಯಾಪಕಿಯೊಬ್ಬರ ಗೌರವಾರ್ಥ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭ. ಸಾಮಾನ್ಯವಾಗಿ ಇಂತಹ ಸಮಾರಂಭಕ್ಕೆ ನಿವೃತ್ತಿ ಹೊಂದುತ್ತಿರುವವರ ಕುಟುಂಬ ಸದಸ್ಯರನ್ನು ಸಹ ಆಹ್ವಾನಿಸಲಾಗಿರುತ್ತದೆ.‌ ಅಂತೆಯೇ, ಈ ಸಮಾರಂಭದಲ್ಲಿ, ಮೇಲೆ ಹೇಳಿದ ಅಧ್ಯಾಪಕಿಯ ಪತಿಗೆ ಆಹ್ವಾನ ನೀಡಲಾಗಿದ್ದು, ಅವರು ಉಪಸ್ಥಿತರಿದ್ದರು.

ಸಮಾರಂಭದ ನಿರೂಪಕರು ಭಾಷೆಯ ವಿಷಯದಲ್ಲಿ ಅಷ್ಟೇನೂ ಸೂಕ್ಷ್ಮತೆ ಹೊಂದಿರಲಿಲ್ಲವೆಂದು ತೋರುತ್ತೆ. ಆಕೆ ತಮ್ಮ ಸ್ವಾಗತ ನುಡಿಗಳಲ್ಲಿ ವೇದಿಕೆಯಲ್ಲಿ ಹಾಗೂ ಸಭೆಯಲ್ಲಿ ಇದ್ದವರನ್ನು ಸ್ವಾಗತಿಸುವ ಭರದಲ್ಲಿ ”ಇಂದು ವಯೋನಿವೃತ್ತಿ ಹೊಂದಲಿರುವ ಮೇಡಂ ಅವರ ಪತಿಗಳು ಸಹ ಇಲ್ಲಿ ಇದ್ದಾರೆ” ಎಂದುಬಿಟ್ಟರು!  ಬಹುಶಃ ಗೌರವಸೂಚಕವಾಗಿ ‘ಮೇಡಂ  ಅವರ ಮನೆಯವರು’, ‘ಪತಿರಾಯರು’  ‘ರಾಯರು’, ಅಥವಾ, ತುಸು ಹಳೆಯ ಕಾಲದ ಪ್ರಯೋಗವಾದ ‘ಯಜಮಾನ್ರು’ – ಇಂತಹ ಯಾವುದನ್ನಾದರೂ ಬಳಸಬೇಕು ಎಂಬ ಉದ್ದೇಶವು ಆ ನಿರೂಪಕಿಯ ಮನಸ್ಸಿನಲ್ಲಿ ಇತ್ತೇನೊ. ಆದರೆ, ತಾವು ಆ ಕ್ಷಣದಲ್ಲಿ ವೇದಿಕೆಯ ಮೇಲಿದ್ದ ಒತ್ತಡಕ್ಕೋ, ಅಥವಾ ಪೂರ್ವ ಸಿದ್ಧತೆಯ ಕೊರತೆಯಿಂದಲೋ ‘ಪತಿಗಳು’ ಎಂಬ ಪದ ಬಳಸಿಬಿಟ್ಟಿದ್ದರು ಆಕೆ. ತಕ್ಷಣ ತಮ್ಮ ತಪ್ಪನ್ನು ತಿದ್ದಿಕೊಂಡು ಕ್ಷಮೆ ಕೋರಿದರು ಅನ್ನಿ.‌ ಆದರೂ ಈ ಪ್ರಸಂಗವು ಸಭೆಯನ್ನು ಕೊಂಚ ಹೊತ್ತು ನಗೆಗಡಲಿನಲ್ಲಿ ತೇಲಿಸಿದ್ದು ನಿಜ! ಮಾತಾಡುವಾಗ ಏಕವಚನ, ಬಹುವಚನ ಪ್ರಯೋಗದಲ್ಲಿ ನಾವು ಎಂಬುದಕ್ಕೆ ಈ ಪ್ರಸಂಗ ಸಾಕ್ಷಿ.