ಇದು ವಾಸ್ತವಿಕವಾಗಿ ನಡೆದ ಘಟನೆ. 12-07-2026ನೇ ಭಾನುವಾರ ನಮ್ಮ ಕುಟುಂಬ ಸ್ನೇಹಿತರಾದ ಶ್ರೀ ಶಂಕರ್ ಶಾಸ್ತ್ರಿಯವರು, ತಮ್ಮ ಮಗಳು ಶರ್ಮಿಳಾ, ( ನನ್ನ ಭರತನಾಟ್ಯ ಶಿಷ್ಯೆ) ಹತ್ತನೇ ತರಗತಿಯಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಸಂತೋಷಕ್ಕಾಗಿ, ವಿಜಯನಗರದ ಹತ್ತಿರದ ಪಿಎಫ್ ಬಡಾವಣೆಯಲ್ಲಿನ ತಮ್ಮ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ಏರ್ಪಡಿಸಿದ್ದರು‌. ಸಾಂಗವಾಗಿ ನಡೆದ ಪೂಜೆಯ ನಂತರ ಅವರು ಏರ್ಪಡಿಸಿದ್ದ ಭೋಜನದ ಸಮಯದಲ್ಲಿ ನಡೆದದ್ದು ಈಗ ನಾನು ವಿವರಿಸಲಿರುವ ಪದಪ್ರಾಪ್ತಿ ಘಟನೆ.

ಆ ಸಮಾರಂಭಕ್ಕೆ ಶಂಕರ್ ಶಾಸ್ತ್ರಿಯವರಿಗೆ ಪರಿಚಿತರಾದ ಒಬ್ಬ ಹಿರಿಯರು ಬಂದಿದ್ದರು. ಜೊತೆಗೆ ಇವರ ನೆಂಟರಾದ ಪಕ್ಷಿ ಛಾಯಾಗ್ರಹಣ ತಜ್ಞರು ಹಾಗೂ ಹವ್ಯಾಸಿ ಚಾರಣಿಗರಾದ ಶ್ರೀ ವಿಶ್ವನಾಥ್ ಎಂಬವರು ಸಹ ಬಂದಿದ್ದರು. ಅಲ್ಲೇ ಇದ್ದ ಒಬ್ಬರು  ಈ ಹಿರಿಯರನ್ನು “ವಿಶ್ವನಾಥ್ ಅವರ ಪರಿಚಯ ಆಯ್ತಾ ನಿಮ್ಗೆ? ತುಂಬ ವಿಶೇಷತೆ ಇದೆ ಇವ್ರಲ್ಲಿ” ಅಂದರು‌. ಅದಕ್ಕೆ ಆ ಹಿರಿಯರು “ಓಹೋ.. ಆಯ್ತು‌. ಈಗಾಗ್ಲೇ ಪರಿಚಯ ಆಯ್ತು.‌ ಪರಿಚಯ ಏನು…! ನಾನು ಅವರ ಜಲಶಿಲಾಂತರಾನೇ ಮಾಡ್ಬಿಟ್ಟೆ” ಅಂದರು. ನನ್ನ ಕನ್ನಡ ಕುತೂಹಲಿ ಕಿವಿಗೆ ಈ ‘ಜಲಶಿಲಾಂತರ’ ಅನ್ನುವ ಪದ ಬಿತ್ತು ನೋಡಿ, ಸರಿ ..ತಕ್ಷಣ ಅವರನ್ನ ಕೇಳಿದೆ “ಸರ್, ನೀವು ಅದೇನೋ ಪದ ಬಳಸಿದ್ರಲ್ಲಾ..ಜಲಶಿಲಾ…..ಏನದು? ” ಅಂದೆ‌‌. ಅದಕ್ಕೆ ಅವರು “ಓಹ್…ಅದಾ? ‘ಜಲಶಿಲಾಂತರ’ ಮೇಡಂ…ಸಾಮಾನ್ಯವಾಗಿ ಬಳಸೋ ಪದ ಅದು.‌ ಜಲಶಿಲಾಂತರ ಅಂದ್ರೆ ನೀರು, ಕಲ್ಲು ಯಾವುದನ್ನೂ ಬಿಡದೆ ಎಲ್ಲಾನೂ ಪೂರ್ತಿ ಹುಡುಕಿ ಒಂದು ಸಂಗತಿಯ ಎಲ್ಲ ವಿಚಾರಗಳನ್ನೂ ತಿಳ್ಕೊಳ್ಳೋದು. ನಮ್ಮ ಕಡೆ ಈ ಪದವನ್ನು ತುಂಬ ಬಳಸ್ತಾರೆ” ಅಂದರು. ಅಷ್ಟು ಅಪರೂಪದ ಪದವನ್ನು ಅವರು ಒಂದು ಸಾಮಾನ್ಯ ಬಳಕೆಯ ಪದ ಅಂದಾಗ ನನಗೆ ಬಹಳ ಅಚ್ಚರಿಯಾಯಿತು.  ಆ ಹಿರಿಯರು ಎಲ್ಲಿಯವರು ಎಂದು ವಿಚಾರಿಸಿದಾಗ ಅವರು ಎಡತೊರೆ( ಈಗಿನ ಕೃಷ್ಣರಾಜ ನಗರ)ಯವರು ಎಂದು ತಿಳಿಯಿತು. ಅಂದ ಹಾಗೆ ಎಡತೊರೆಯ ಈ ಪದಶ್ರೀಮಂತ ಹಿರಿಯರ ಹೆಸರು ಸಚ್ಚಿದಾನಂದ ಶಾಸ್ತ್ರಿ.‌ ಕನ್ನಡದ ಒಂದು ವಿಶಿಷ್ಟ ಪದವನ್ನು ಪರಿಚಯಿಸಿದ್ದಕ್ಕಾಗಿ ನನ್ನೊಳಗಿನ ಕನ್ನಡಪ್ರಿಯ ಮನಸ್ಸು ಅವರಿಗೆ.