ಗ್ರೌಂಡ್ ಫಾಲ್ಟ್ – ಭೂಸ್ಪರ್ಶ ದೋಷ – ಒಂದು ವಾಹಕಕ್ಕೆ ಅಚಾನಕ್ಕಾಗಿ ಭೂಸ್ಪರ್ಶ ಉಂಟಾಗುವ ಕ್ರಿಯೆ.
ಗ್ರೌಂಡಿಂಗ್ ಆರ್ ಅರ್ತಿಂಗ್ – ಭೂಸ್ಪರ್ಶ ಮಾಡಿಸುವಿಕೆ – ಒಂದು ವಿದ್ಯುತ್ ವಾಹಕವನ್ನು ಭೂಮಿಗೆ ಜೋಡಿಸುವುದು.
ಗ್ರಿಡ್ ಬಯಾಸ್ – ತಂತಿಜಾಲ ವಿದ್ಯುತ್ ಸಾಮರ್ಥ್ಯ - ಸಾಮಾನ್ಯವಾಗಿ ಋಣಾತ್ಮಕವಾದ, ಏಕಪ್ರಕಾರವಾದ ವಿದ್ಯುತ್ ಅಂತಃಸಾಮರ್ಥ್ಯವನ್ನು ಉಷ್ಣವಿದ್ಯುತ್ ಕವಾಟದ ತಡೆತಂತಿಜಾಲಕ್ಕೆ ನೀಡುವುದು. ಈ ತಂತಿಜಾಲ ವಿದ್ಯುದಂಶವು ಯಾವ ಮೌಲ್ಯ ಹೊಂದಿರುತ್ತದೆಂದರೆ, ಸ್ಥಿರವಾಗಿರದ ವಿದ್ಯುತ್ತನ್ನು ಹಾಯಿಸಿದಾಗಲೂ ಕವಾಟವು ವಿದ್ಯುತ್ತನ್ನು ಕತ್ತರಿಸುವುದೂ ಇಲ್ಲ ಮತ್ತು (ಅಸ್ಥಿರತೆಯನ್ನು) ಪ್ರವಹಿಸಲು ಬಿಡುವುದೂ ಇಲ್ಲ.
ಗ್ರಿಡ್ – ಜಾಲ, ಹೆಣಿಗೆ, ಸರಳು ತಡೆ –
ಅ. ಉಷ್ಣ ವಿದ್ಯುದಂಶ ಕವಾಟದಲ್ಲಿ ಧನ ವಿದ್ಯುದ್ವಾರ ಮತ್ತು ಋಣ ವಿದ್ಯುದ್ವಾರಗಳ ನಡುವೆ ಇಡಲ್ಪಟ್ಟ ಒಂದು ತಂತಿಜಾಲ ಇದು. ಇದನ್ನು ಬಳಸುವ ಉದ್ದೇಶ ಅಂದರೆ ಮುಖ್ಯವಾಗಿ ವಿದ್ಯುತ್ತಿನ ಬಲವನ್ನು ಹೆಚ್ಚಿಸುವುದು ಅಥವಾ ಅದನ್ನು ಮಾರ್ಪಡಿಸುವುದು.
ಆ. ತುಂಬ ಹೆಚ್ಚಿನ ವಿದ್ಯುತ್ ಸಾಮರ್ಥ್ಯ (400 kV ತನಕ) ವನ್ನು ರಾಷ್ಟ್ರಮಟ್ಟದಲ್ಲಿ ವಿತರಣೆ ಮಾಡುವ ವ್ಯವಸ್ಥೆ.
ಗ್ರೆಂಝ್ ರೇ – ಗ್ರೆಂಝ್ ಅಥವಾ ಅಂಚಿನ ಕಿರಣ – ಕ್ಷ-ಕಿರಣಗಳ ಉದ್ದ ತರಂಗಾಂತರ ಪ್ರದೇಶದಲ್ಲಿ ಉತ್ಪತ್ತಿಯಾಗುವ ಒಂದು ರೀತಿಯ ಕಿರಣಗಳಿವು. 1 ರಿಂದ 10 ಆಂಗ್ ಸ್ಟ್ರಾಮ್ ತರಂಗಾಂತರವನ್ನು ಹೊಂದಿರುತ್ತವೆ. ಇವುಗಳ ಜೀವಶಾಸ್ತ್ರೀಯ ಪರಿಣಾಮವು ಅತಿನೇರಳೆ ಕಿರಣಗಳು ಹಾಗೂ ಸಾಂಪ್ರದಾಯಿಕ ಕ್ಷ-ಕಿರಣಗಳು – ಈ ಎರಡರ ನಡುವಿನ ಪ್ರದೇಶದ ಗುಣಗಳನ್ನು ಹೊಂದಿದ್ದರಿಂದ ಇವುಗಳನ್ನು ಗ್ರೆಂಝ್ (ಜರ್ಮನ್ ಭಾಷೆಯಲ್ಲಿ ಗ್ರೆಂಝ್ ಎಂದರೆ ಅಂಚು ಎಂದು ಅರ್ಥ) ಕಿರಣ ಅಥವಾ ಅಂಚಿನ ಕಿರಣ ಎಂದು ಕರೆಯುತ್ತಾರೆ. ಗುಸ್ತಾವ್ ಪೀಟರ್ ಬಕ್ಕಿ (1880-1963) ಎಂಬ ಜರ್ಮನ್- ಅಮೇರಿಕಾ ಕ್ಷ-ಕಿರಣ ತಜ್ಞರು ಇವುಗಳನ್ನು ಕಂಡುಹಿಡಿದ ಕಾರಣ ಇವುಗಳನ್ನು ಬಕ್ಕಿ ಕಿರಣಗಳು ಎಂದು ಸಹ ಕರೆಯುತ್ತಾರೆ.
ಗ್ರೆಗೋರಿಯನ್ ಟೆಲಿಸ್ಕೋಪ್ – ಗ್ರೆಗೋರಿ ದೂರದರ್ಶಕ – ಹಿಂದಿನ ಕಾಲದ ( 17 ನೇ ಶತಮಾನದ) ಒಂದು ದೂರದರ್ಶಕ ಇದು. ಸ್ಕಾಟ್ಲೆಂಡ್ ನಲ್ಲಿ ತಯಾರಾದದ್ದು. ತಗ್ಗುಗಾಜಿನ ಕನ್ನಡಿ ಮತ್ತು ಉಬ್ಬುಗಾಜಿನ ಕನ್ನಡಿಗಳನ್ನು, ಬೆಳಕು ತನ್ನ ಮೇಲೆಯೇ ಮಡಿಸಿಕೊಳ್ಳುವಂತೆ ಇಟ್ಟು ರೂಪಿಸಿದ ಒಂದು ವ್ಯವಸ್ಥೆ.
ಗ್ರೀನ್ ಹೌಸ್ ಎಫೆಕ್ಟ್ – ಹಸುರು ಮನೆ ಪರಿಣಾಮ – ಭೂಮಿಯ ಮೇಲ್ಮೈಯು ಸೂರ್ಯನ ಬೆಳಕಿನ ಬಹುಭಾಗವನ್ನು ಹೀರಿಕೊಂಡಾಗ, ಈ ಬೆಳಕನ್ನು ಇಂಗಾಲದ ಡೈಆಕ್ಸೈಡ್, ನೀರು ಮತ್ತು ಮೋಡಗಳು ಹೀರಿಕೊಂಡು ಮತ್ತೆ ಭೂಮಿಗೆ ಹೊರಸೂಸುತ್ತವೆ. ಇದರಿಂದಾಗಿ ಭೂಮಿಯ ಉಷ್ಣತೆ ಹೆಚ್ಚಾಗುತ್ತದೆ. ಇಲ್ಲಿ ಭೂಮಿಯು ಗಿಡಗಳನ್ನು ಬೆಳೆಸುವ ಹಸುರುಮನೆಯಂತೆ ವರ್ತಿಸುವುದರಿಂದ ಇದನ್ನು ‘ಹಸುರುಮನೆ ಪರಿಣಾಮ’ ಎನ್ನುತ್ತಾರೆ.
ಗ್ರೇಟ್ ಸರ್ಕಲ್ – ಮಹಾ ವೃತ್ತ – ಒಂದು ಗೋಳದ ಮೇಲಿದ್ದು, ಅದರ ಕೇಂದ್ರವನ್ನು ಹಾದುಹೋಗುವಂತಹ ಮೇಲ್ಮೈಗುಂಟ ಉಂಟಾಗುವ ಯಾವುದಾದರೂ ಒಂದು ವೃತ್ತ. ಭೂಮಧ್ಯರೇಖೆ ಹಾಗೂ ರೇಖಾಂಶಗಳೆಲ್ಲವೂ ಭೂಮಿಯ ಮೇಲ್ಮೈಯಲ್ಲಿರುವ ಮಹಾವೃತ್ತಗಳಾಗಿವೆ.
ಗ್ರೇ, ಸಿಂಬಲ್ Gy – ಗ್ರೇ ಸಂಕೇತ Gy – ಒಂದು ಜೀವಂತ ಅಂಗಾಂಶದೊಳಗೆ ವಿದ್ಯುದಂಶಕಾರಕ( ಅಯಾನೀಕರಣಗೊಳಿಸುವ) ವಿಕಿರಣವು ಹಾದು ಹೋಗುವಾಗ, ಏಕಘಟಕ ದ್ರವ್ಯರಾಶಿಯು ಹೀರಿಕೊಳ್ಳುವ ಒಂದು ಸಲದಳತೆಯ ಶಕ್ತಿಯ, ಎಸ್ಐ ಮೂಲಮಾನವಿದು.
ಗ್ರ್ಯಾವಿಟಿ ವೆಕ್ಟರ್ – ಗುರುತ್ವ ದಿಶಾಯುತ – ಒಂದು ದತ್ತ ಬಿಂದುವಿನಲ್ಲಿ ಏಕಘಟಕ ದ್ರವ್ಯರಾಶಿಗೂ ಅದರ ಮೇಲೆ ವರ್ತಿಸುತ್ತಿರುವ ಬಲಕ್ಕೂ ಇರುವ ಅನುಪಾತ.