ಗ್ರ್ಯಾವಿಟಿ – ಗುರುತ್ವ – ದ್ರವ್ಯರಾಶಿಯನ್ನು ಹೊಂದಿರುವ ಹಾಗೂ ಭೂಮಿಯ ಗುರುತ್ವಾಕರ್ಷಣ ಕ್ಷೇತ್ರದ ಒಳಗೆ ಇರುವಂತಹ ವಸ್ತುವಿನ ಮೇಲೆ ವರ್ತಿಸುವ ಬಲವೊಂದಕ್ಕೆ ಸಂಬಂಧಿಸಿದ ವಿಷಯ ಇದು. ಒಂದು ವಸ್ತುವಿನ ತೂಕವು ಆ ವಸ್ತುವಿನ ಮೇಲೆ ವರ್ತಿಸುತ್ತಿರುವ ಬಲಕ್ಕೆ ಸಮವಾಗಿರುತ್ತದೆ.
ಗ್ರ್ಯಾವಿಟಾನ್ – ಗ್ರ್ಯಾವಿಟಾನು – ಗುರುತ್ವಾಕರ್ಷಣ ಅಂತರ್ ಕ್ರಿಯೆಗಳಲ್ಲಿ ವಿನಿಮಯವಾಗುವ ಒಂದು ಕಾಲ್ಪನಿಕ ಕಣ ಅಥವಾ ಶಕ್ತಿಯ ಕ್ವಾಂಟಂ(ಪೊಟ್ಟಣ).
ಗ್ರ್ಯಾವಿಟೇಷನಲ್ ವೇವ್ಸ್ – ಗುರುತ್ವೀಯ ಅಲೆಗಳು ಅಥವಾ ಗುರುತ್ವ ಅಲೆಗಳು – ಗುರುತ್ವ ಕ್ಷೇತ್ರವೊಂದರಿಂದ ಪ್ರಸಾರಗೊಂಡ ಅಲೆಗಳು. ಸಂಬಂಧಿಕತೆ ಅಥವಾ ಸಾಪೇಕ್ಷತೆಯ ಸಾಮಾನ್ಯ ಸಿದ್ಧಾಂತದ ಪ್ರಕಾರ ವೇಗೋತ್ಕರ್ಷಗೊಳ್ಳುತ್ತಿರುವ ದ್ರವ್ಯರಾಶಿಯು ಗುರುತ್ವ ಅಲೆಗಳನ್ನು ಹೊರಸೂಸುತ್ತದೆ ಮತ್ತು ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಇವುಗಳನ್ನು ಕಂಡು ಹಿಡಿಯಲು ತುಂಬ ಪ್ರಯತ್ನ ಮಾಡಲಾಗಿದೆ.
ಗ್ರ್ಯಾವಿಟೇಷನಲ್ ಶಿಫ್ಟ್ – ಗುರುತ್ವೀಯ ಸ್ಥಾನಾಂತರ – ಇದು ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಒಂದು ಪದ. ಒಂದು ಆಕರದಿಂದ ಅದರಲ್ಲೂ ಮುಖ್ಯವಾಗಿ ಬೃಹತ್ ನಕ್ಷತ್ರಗಳ ಮೇಲ್ಮೈ ಯಿಂದ ಹೊರಸೂಸಿದ ಬೆಳಕು, ಹೆಚ್ಚು ಉದ್ದವುಳ್ಳ ವಿದ್ಯುತ್ಕಾಂತೀಯ ತರಂಗಾಂತರಗಳ ಕಡೆಗೆ ಸ್ಥಾನಂತರಗೊಳ್ಳುವ ವಿದ್ಯಮಾನವಿದು. ಇದನ್ನು ಡಾಪ್ಲರ್ ಪರಿಣಾಮದಿಂದ ವಿವರಿಸಬಹುದು.
ಗ್ರ್ಯಾವಿಟೇಷನಲ್ ಮಾಸ್ – ವಸ್ತುವೊಂದರ ದ್ರವ್ಯರಾಶಿಯನ್ನು ನಿರ್ಧರಿಸುವ ಎರಡು ರೀತಿಗಳಲ್ಲಿ ಇದು ಒಂದು. ಈ ದ್ರವ್ಯರಾಶಿಯು ಒಂದು ವಸ್ತುವಿನ ಗುರುತ್ವಾಕರ್ಷಣೆಯು ಬೇರೆ ವಸ್ತುಗಳ ಮಟ್ಟಿಗೆ ಎಷ್ಟಿದೆ ಎಂಬುದನ್ನು ನಿರ್ಧಾರ ಮಾಡುತ್ತದೆ (ಇನ್ನೊಂದು ದ್ರವ್ಯರಾಶಿಯೆಂದರೆ ಜಡತ್ವದ ದ್ರವ್ಯರಾಶಿ – ಚಲನೆಯನ್ನು ಪ್ರತಿರೋಧಿಸುವ ವಸ್ತುಗುಣ).
ಗ್ರ್ಯಾವಿಟೇಷನಲ್ ಫೋರ್ಸ್ – ಗುರುತ್ವಾಕರ್ಷಣ ಬಲ – ನಾಲ್ಕು ಮೂಲಭೂತ ಬಲಗಳಲ್ಲಿ ಒಂದು. ಈ ಬಲವು ಎಲ್ಲ ವಸ್ತುಗಳನ್ನೂ ಪ್ರಭಾವಿಸುತ್ತದೆ ಮತ್ತು ಒಂದು ಅನಂತ ಶ್ರೇಣಿ ಹಾಗೂ ವಿಸ್ತಾರಗಳಲ್ಲಿ ವರ್ತಿಸುತ್ತದೆ.
ಗ್ರ್ಯಾವಿಟೇಷನಲ್ ಫೀಲ್ಡ್ – ಗುರುತ್ವ ಕ್ಷೇತ್ರ – ಬೃಹತ್ ಗಾತ್ರವುಳ್ಳ ಒಂದು ವಸ್ತುವಿನ ಸುತ್ತಲಿನ ಪ್ರದೇಶ ಇದು. ಈ ಪ್ರದೇಶದಲ್ಲಿ ಬೇರೆ ವಸ್ತುಗಳು ಆಕರ್ಷಣೆಯನ್ನು ಅನುಭವಿಸುತ್ತವೆ.
ಗ್ರ್ಯಾವಿಟೇಷನ್ – ಗುರುತ್ವ – ನ್ಯೂಟನ್ ಅವರು ಗುರುತ್ವ ನಿಯಮವನ್ನು ಪ್ರತಿಪಾದಿಸಿದ್ದಾರೆ. ಎರಡು ದ್ರವ್ಯರಾಶಿಗಳ ನಡುವಿನ ಗುರುತ್ವಾಕರ್ಷಣೆಯ ಬಲವು ಅವುಗಳಲ್ಲಿನ ಪ್ರತಿಯೊಂದು ದ್ರವ್ಯರಾಶಿಯ ಪ್ರಮಾಣಕ್ಕೆ ಸಮಾನುಪಾತದಲ್ಲಿ ಹಾಗೂ ಅವುಗಳ ನಡುವಿನ ದೂರದ ವರ್ಗಕ್ಕೆ ವಿಲೋಮ ಅನುಪಾತದಲ್ಲಿ ಇರುತ್ತದೆ.
ಗ್ರೇಟಿಂಗ್ – ಪಟ್ಟಿ ಪಟ್ಟಿ ಗಾಜು – ತುಂಬ ಹತ್ತಿರ ಹತ್ತಿರ ಇರುವ ಸಮಾನಂತರ ರೇಖೆಗಳನ್ನು ಪಟ್ಟಿ ಪಟ್ಟಿಯಾಗಿ ಕೊರೆಯಲ್ಪಟ್ಟ ಒಂದು ಗಾಜಿನ ಫಲಕ. ಬೆಳಕಿನ ವರ್ಣಪಟಲವನ್ನು ಉತ್ಪತ್ತಿ ಮಾಡಲು ಹಾಗೂ ಅದರಲ್ಲಿರುವ ತರಂಗಾಂತರಗಳನ್ನು ಅಧ್ಯಯನ ಮಾಡಲು ಇದನ್ನು ಬಳಸುತ್ತಾರೆ.
ಗ್ರಾಂ ವ್ಹೈಟ್ – ಗ್ರಾಂ ವ್ಹೈಟ್ – ಇದು ಬಲದ ಒಂದು ಮೂಲಮಾನ. ಏಕಘಟಕ ದ್ರವ್ಯರಾಶಿಯು ಭೂಮಿಯ ಆಕರ್ಷಣೆಯಿಂದಾಗಿ ಅನುಭವಿಸುವ ಬಲವನ್ನು ಇದು ಸೂಚಿಸುತ್ತದೆ.