ಅಯಾನೈಸೇಷನ್ – ವಿದ್ಯುದಣು ನಿರ್ಮಾಣ ಅಥವಾ ಅಯಾನೀಕರಣ – ವೇಗವಾಗಿ ಚಲಿಸುತ್ತಿರುವ ಕಣದಿಂದ ಡಿಕ್ಕಿ ಹೊಡೆಸಿ ಅಥವಾ ರಾಸಾಯನಿಕ ಕ್ರಿಯೆಗಳ ಮೂಲಕ ವಿದ್ಯುದಣುಗಳನ್ನು ನಿರ್ಮಿಸುವ ವಿಕಿರಣವನ್ನು ಉತ್ಪತ್ತಿ ಮಾಡಿ ಆ ಮೂಲಕ ವಿದ್ಯುದಣುಗಳನ್ನು ರೂಪಿಸುವುದು.
ಐಯಾನು – ವಿದ್ಯುದಣು ಅಥವಾ ಅಯಾನು – ವಿದ್ಯುದಂಶವುಳ್ಳ ಒಂದು ಕಣ. ಇದರಲ್ಲಿ ಒಂದು ಪರಮಾಣು ಅಥವಾ ಪರಮಾಣುಗಳ ಒಂದು ಗುಂಪು ಇದ್ದು, ಇವು ಒಂದೋ ಎಲೆಕ್ಟ್ರಾನುಗಳನ್ನು ಕಳೆದುಕೊಂಡಿರುತ್ತವೆ ಅಥವಾ ಪಡೆದುಕೊಂಡಿರುತ್ತವೆ.
ಇನ್ವರ್ಟಿಂಗ್ ಪ್ರಿಸಂ ( ಎರೆಕ್ಟಿಂಗ್ ಪ್ರಿಸಂ) – ತಲೆಕೆಳಗೆ ಮಾಡುವ ಪಟ್ಟಕ (ನೇರ ನಿಲ್ಲಿಸುವ ಪಟ್ಟಕ) – ದೃಶ್ಯವಿಜ್ಞಾನ ವ್ಯವಸ್ಥೆಯಲ್ಲಿ ಒಂದು ಬಿಂಬವನ್ನು ಅದರ ಆಕಾರ ಅಥವಾ ಗಾತ್ರವನ್ನು ಬದಲಾಯಿಸದೆ ತಲೆಕೆಳಗೆ ಮಾಡಲು ಬಳಸುವ ಪಟ್ಟಕ. ಆಂತರಿಕ ಪ್ರತಿಫಲನದಿಂದಾಗಿ ಈ ಪಟ್ಟಕವು ಈ ರೀತಿ ಕೆಲಸ ಮಾಡುತ್ತದೆ.
ಇನ್ವರ್ಸ್ ಝೀಮನ್ ಎಫೆಕ್ಟ್ – ವಿಲೋಮ ಝೀಮನ್ ಪರಿಣಾಮ – ಹೀರಿಕೊಳ್ಳುವಿಕೆಯ ವರ್ಣಪಟಲದಲ್ಲಿ ಗಮನಿಸಲಾಗುವ ಝೀಮನ್ ಪರಿಣಾಮವನ್ನು ವಿಲೋಮ ಝೀಮನ್ ಪರಿಣಾಮ ಎನ್ನುತ್ತಾರೆ.
ಇನ್ವರ್ಸ್ ಸ್ಟಾರ್ಕ್ ಎಫೆಕ್ಟ್ – ವಿಲೋಮ ಸ್ಟಾರ್ಕ್ ಪರಿಣಾಮ – ಸ್ಟಾರ್ಕ್ ಪರಿಣಾಮ ( ಅಣು ಮುಂತಾದವುಗಳಿಂದ ಹೊರಸೂಸುವ ವಿಕಿರಣವು ಸೀಳಿಕೊಳ್ಳುವ ಪರಿಣಾಮ) ವನ್ನು ಹೀರಿಕೆಯ ರೇಖೆಗಳಲ್ಲಿ, ಸಂದರ್ಭಗಳಲ್ಲಿ ಗಮನಿಸುವುದನ್ನು ವಿಲೋಮ ಸ್ಟಾರ್ಕ್ ಪರಿಣಾಮ ಎನ್ನುತ್ತಾರೆ.
ಇನ್ವರ್ಸ್ ನೆಟ್ವರ್ಕ್ – ಉಲ್ಟಾ ವಿದ್ಯುತ್ ಜಾಲ – ಒಂದು ವಿದ್ಯುತ್ ಜಾಲದಲ್ಲಿ ಅಡ್ಡಿಗಳ ಗುಣಲಬ್ಧವು ಅವುಗಳ ಆವರ್ತನಕ್ಕೆ ಸಂಬಂಧಪಡದೆ ಸ್ವತಂತ್ರವಾಗಿದ್ದಾಗ (ಅವುಗಳ ಹರಹಿನ ಒಳಗೆ) ಅದನ್ನು ಉಲ್ಟಾ ವಿದ್ಯುತ್ ಜಾಲ ಎನ್ನುತ್ತಾರೆ.
ಇಂಟ್ರಿನ್ಸಿಕ್ (ಐ – ಟೈಪ್ ) ಸೆಮಿಕಂಡಕ್ಟರ್ – ಅಂತರ್ಗತ ಅರೆವಾಹಕ – ತಾಪಮಾನೀಯ ಸಮತೋಲನವಿದ್ದಾಗ ಎಲೆಕ್ಟ್ರಾನು ಮತ್ತು ರಂಧ್ರಗಳ ಸಾಂದ್ರತೆಯು ಸಮನಾಗಿರುವ ಅರೆವಾಹಕ.
ಇಂಟರ್ ಸ್ಟೀಷಿಯಲ್ ಕಾಂಪೌಂಡ್ – ವಸ್ತುಮಧ್ಯ ಸ್ಥಳಯುತ ಸಂಯುಕ್ತ – ಒಂದು ಲೋಹದ ಕಂಡಿಚೌಕಟ್ಟು ರಚನೆಯ ಮಧ್ಯಮಧ್ಯದಲ್ಲಿನ ಸ್ಥಳಗಳಲ್ಲಿ ಅಲೋಹವೊಂದರ ಅಣುಗಳು ಅಥವಾ ಪರಮಾಣುಗಳು ಬಂದು ನೆಲೆಸುವುದು. ಈ ವಸ್ತುಗಳು ಬಹಳಷ್ಟು ಸಂದರ್ಭಗಳಲ್ಲಿ ಲೋಹದ ಗುಣಗಳನ್ನು ತೋರುತ್ತವೆ. ಕಾರ್ಬೈಡ್, ಬೋರೈಡ್ ಮತ್ರು ಸಿಲಿಸೈಡ್ ಗಳು ಇದಕ್ಕೆ ಉದಾಹರಣೆ.
ಇಂಟರ್ ಸ್ಟೀಷಿಯಲ್ – ವಸ್ತು ಮಧ್ಯಸ್ಥಳ – ವಸ್ತುಗಳ ಅಥವಾ ಕಟ್ಟೋಣಗಳ ಮಧ್ಯೆ ಇರುವ ಸ್ಥಳ (ಉದಾಹರಣೆಗೆ ಹರಳುಗಳ ಮಧ್ಯೆ).
ಇಂಟರ್ ಸ್ಟೆಲ್ಲಾರ್ ಸ್ಪೇಸ್ – ಅಂತರ್ ನಕ್ಷತ್ರ ಸ್ಥಳಾವಕಾಶ – ನಕ್ಷತ್ರಗಳ ನಡುವೆ ಇರುವಂತಹ ಸ್ಥಳಾವಕಾಶ. ಇದರಲ್ಲಿ ಆಕಾಶಗಂಗೆಗಳ ಒಟ್ಟು ದ್ರವ್ಯರಾಶಿಯ ಬಹು ಶೇಕಡಾ ಭಾಗವಿರುತ್ತದೆ. ಇದರಿಂದಲೇ ಹೊಸ ನಕ್ಷತ್ರಗಳು ರೂಪುಗೊಳ್ಳುವುದು. ಮೂಲತಃ ಈ ವಸ್ತವು ಜಲಜನಕವೇ.
Like us!
Follow us!