ಫೀಲ್ಡ್ ಲೆನ್ಸ್ – ಕ್ಷೇತ್ರ ಮಸೂರ – ಬೆಳಕುವಿಜ್ಞಾನದ ಒಂದು ಉಪಕರಣದಲ್ಲಿನ ಮಸೂರಸಂಯೋಜನೆಗಳಲ್ಲಿ, ಕಣ್ಣಿನಿಂದ ಗರಿಷ್ಠ ದೂರದಲ್ಲಿರುವ ಮಸೂರ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಫೀಲ್ಡ್ ಮ್ಯಾಗ್ನೆಟ್ – ಕ್ಷೇತ್ರ ಅಯಸ್ಕಾಂತ – ಒಂದು ವಿದ್ಯುತ್ ಉಪಕರಣದಲ್ಲಿ ಕಾಂತಕ್ಷೇತ್ರವನ್ನು ನೀಡುವಂತಹ ಅಯಸ್ಕಾಂತ. ಕೆಲವು ಚಿಕ್ಕ ವಿದ್ಯುಜ್ಜನಕ ಅಥವಾ ವಿದ್ಯುದುತ್ಪಾದಕ ಯಂತ್ರಗಳಲ್ಲಿ ಇದು ಶಾಶ್ವತ ಅಯಸ್ಕಾಂತವಾಗಿರುತ್ತದೆ, ಆದರೆ ಬಹುತೇಕ ಯಂತ್ರಗಳಲ್ಲಿ ಇದೊಂದು ವಿದ್ಯುತ್ ಕಾಂತವಾಗಿರುತ್ತದೆ.
ಫಿಲಮೆಂಟ್ – ತಂತು (ದಾರದಂತಿರುವ ತಂತಿ) – ತುಂಬ ಹೆಚ್ಚಿನ ಕುದಿಬಿಂದು ಹೊಂದಿರುವ ಟಂಗ್ ಸ್ಟನ್ ಅಥವಾ ಬೇರೆ ಲೋಹದ, ದಾರದಷ್ಟು ತೆಳುವಾಗಿರುವ ತಂತಿ. ಇದನ್ನು ಪ್ರಕಾಶ ಬೀರುವಂತಹ ವಿದ್ಯುತ್ ದೀಪಗಳಲ್ಲಿ ಮತ್ತು ಉಷ್ಣಅಯಾನು ಕವಾಟಗಳಲ್ಲಿ ಬಳಸುತ್ತಾರೆ.
ಫಿಲ್ಟರ್- ಸೋಸುಕ – ಇದು ಒಂದು ಉಪಕರಣ ಅಥವಾ ವಿದ್ಯುನ್ಮಂಡಲ ; ಇದು ಕೆಲವು ನಿರ್ದಿಷ್ಟ ಆವರ್ತನಗಳನ್ನು ಮಾತ್ರ ಒಳಗೆ ಸರಿಯಲು ಬಿಟ್ಟು ಇನ್ನುಳಿದ ಆವರ್ತನಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ.
ಫೈನ್ ಸ್ಟ್ರಕ್ಚರ್ – ವರ್ಣಪಟಲವೊಂದರ ಗೆರೆ ಅಥವಾ ಪಟ್ಟಿಯಲ್ಲಿರುವಂತಹ, ಹೆಚ್ಚಿನ ವಿಂಗಡಿಸುವಿಕೆಯಲ್ಲಿ ಗೋಚರವಾಗುವ, ತುಂಬ ಹತ್ತಿರ ಹತ್ತಿರ ಇರುವ ಗೆರೆಗಳು. ಎಲೆಕ್ಟ್ರಾನು ಗಿರಕಿ ಅಥವಾ ಅಣುಗಳ ಕಂಪನಯುತ ಚಲನೆಯಿಂದಾಗಿ ಇಂತಹ ನಾಜೂಕು ರಚನೆಗಳು ಉಂಟಾಗುತ್ತವೆ.
ಫಿಸ್ಸೈಲ್ ಮೇಟೀರಿಯಲ್ – ವಿದಳನ ವಸ್ತು – ಬೀಜ ಕೇಂದ್ರ ವಿದಳನ ( ಒಡೆಯುವ) ಕ್ರಿಯೆಗೆ ಒಳಗಾಗುವ ವಸ್ತು ಅಥವಾ ಸಾಮಗ್ರಿ. ಕೆಲವು ಸಲ ಈ ಕ್ರಿಯೆಯು ವಿದಳನ ವಸ್ತುವಿನಲ್ಲಿ ತನ್ನಂತಾನೇ ನಡೆಯುತ್ತದೆ. ಆದರೆ ಸಾಮಾನ್ಯವಾಗಿ ನ್ಯೂಟ್ರಾನ್‌ಗಳಿಂದ ವಿಕರಣೀಕರಿಸಿದಾಗ ಈ ವಿದಳನ ನಡೆಯುತ್ತದೆ.
ಫಿಶನ್ ಪ್ರಾಡಕ್ಟ್ಸ್ – ವಿದಳನ ಉತ್ಪನ್ನಗಳು – ಅಣುಬೀಜ ವಿದಳನದಿಂದ ಉತ್ಪತ್ತಿಯಾದ ಸ್ಥಿರ ಮತ್ತು ಅಸ್ಥಿರ ಸಮರೂಪಿಗಳು.
ಫಿಶನ್ ರಿಯಾಕ್ಟರ್ – ವಿದಳನ ಪರಮಾಣು ಸ್ಥಾವರ – ಬೀಜಕೇಂದ್ರದ ವಿದಳನದಿಂದ ಉತ್ಪತ್ತಿಯಾಗುವ ಶಕ್ತಿಯನ್ನು ಉಪಯುಕ್ತ ಶಕ್ತಿಯಾಗಿ ಬಳಸಲು ಅನುವು ಮಾಡಿಕೊಡುವ ಒಂದು ಉಪಕರಣ.
ಫಿಶನ್ ಟ್ರ್ಯಾಕ್ ಡೇಟಿಂಗ್ – ವಿದಳನ ಜಾಡು ಕಾಲನಿಗದಿ – ಗಾಜುಗಳು ಮತ್ತು ಇತರ ಖನಿಜಗಳು ಹೊಂದಿರುವ ಯುರೇನಿಯಂ ಮೂಲವಸ್ತುವು ತಂತಾನೇ ವಿದಳನಗೊಳ್ಳುವುದರಿಂದ ಉಂಟಾದ ಚೂರುಗಳು ಈ ಘನವಸ್ತುಗಳಲ್ಲಿ ಜಾಡುಗಳನ್ನು ಮಾಡಿರುತ್ತವೆ. ಈ ಜಾಡುಗಳನ್ನು ಅವಲಂಬಿಸಿ ಈ ಘನವಸ್ತುಗಳ ಕಾಲವನ್ನು ಅಳೆಯುವ ವಿಧಾನವೇ ‘ವಿದಳನ ಜಾಡು ಕಾಲನಿಗದಿ’.
ಫಿಶನ್ – ವಿದಳನ( ಒಡೆಯುವಿಕೆ) – ಪರಮಾಣು ಬೀಜಕೇಂದ್ರವು ಎರಡು ಅಥವಾ ಅದಕ್ಕಿಂತ ಹೆಚ್ಚು ಚೂರುಗಳಾಗಿ ಒಡೆದುಕೊಳ್ಳುವುದು (ವಿದಳನಗೊಳ್ಳುವುದು).