ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Geothermal energy

ಜಿಯೋಥರ್ಮಲ್ ಎನರ್ಜಿ – ಭೂಉಷ್ಣ ಶಕ್ತಿ‌ – ಭೂಗರ್ಭದಲ್ಲಿರುವ ಉಷ್ಣತೆ. ಇದನ್ನು ಶಕ್ತಿಯ ಆಕರವಾಗಿ‌ ಬಳಸಬಹುದು. ಜ್ವಾಲಾಮುಖಿಗಳು, ಬಿಸಿನೀರಿನ ಬುಗ್ಗೆಗಳು, ಚಿಮ್ಮುತ್ತಿರುವ ಬಿಸಿನೀರಿನ ಒರತೆಗಳು, ಬಿಸಿ ನೀರಿನ‌ ಗುಂಡಿಗಳು ಈ ಶಕ್ತಿಯ ಆಕರಗಳಾಗಿರುತ್ತವೆ.

German silver (Nickel silver)‌

ಜರ್ಮನ್ ಸಿಲ್ವರ್ ( ನಿಕ್ಕಲ್ ಸಿಲ್ವರ್)  – ಜರ್ಮನಿ ಬೆಳ್ಳಿ ( ತವರ ಬೆಳ್ಳಿ) – ತಾಮ್ರ, ಸತು ಮತ್ತು ತವರಗಳ ( ತುಂಬ ಸಲ 5: 2: 2 ಅನುಪಾತದಲ್ಲಿ ) ಒಂದು ಮಿಶ್ರಲೋಹ. ಇದು ಬೆಳ್ಳಿಯಂತೆಯೇ ಕಾಣಿಸುತ್ತದೆ. ಅಗ್ಗದ ಒಡವೆ, ಅಡಿಗೆ ಪಾತ್ರೆಗಳನ್ನು ಮಾಡಲು ಇದನ್ನು ಬಳಸುತ್ತಾರೆ, ಮತ್ತು ಬೆಳ್ಳಿ ಲೇಪನವಿರುವ ತಂತಿಗಳ ಆಧಾರಲೋಹವಾಗಿ‌ ಬಳಸುತ್ತಾರೆ.

Getter 

ಗೆಟ್ಟರ್ – ಗ್ರಾಹಕ ವಸ್ತು – ಗಾಳಿಯನ್ನು ಹೊರದಬ್ಬಿ ನಿರ್ವಾತವನ್ನು ಉಂಟು ಮಾಡಿದ ಮೇಲೆ ಉಳಿಕೆ ಅನಿಲಗಳನ್ನು ಹೊರತೆಗೆಯುವುದಕ್ಕೋಸ್ಕರ 

ಬಳಸುವ ರಾಸಾಯನಿಕ ವಸ್ತು.

Ghost 

ಘೋಸ್ಟ್ – ಭೂತಬಿಂಬ – ಬೇಕಾದ ಬಿಂಬದ ಪಕ್ಕ ಮೂಡುವ ಒಂದು ಮಸುಕಾದ ಬಿಂಬ.

Glass 

ಗ್ಲಾಸ್ – ಗಾಜು – ತನ್ನೊಳಗೆ ಅನಿಯಮಿತವಾದ ಪರಮಾಣು ಜೋಡಣೆಯನ್ನು‌ ಹೊಂದಿರುವಂತಹ ಒಂದು ಘನವಸ್ತು. ಗಾಜುಗಳಲ್ಲಿರುವ ಪರಮಾಣುಗಳು ಚೆಲ್ಲಾಪಿಲ್ಲಿಯಾಗಿರುವುದರಿಂದ ಈ ವಸ್ತುಗಳು ಹರಳುರೂಪದಲ್ಲಿರುವುದಿಲ್ಲ, ತುಸು ತಾಪ ಕೊಟ್ಟರೆ ಸಾಕು, ಇವು ಮೃದುಗೊಳ್ಳುತ್ತವೆ‌. ಹೀಗಾಗಿ ಇವುಗಳನ್ನು ಬಹಳ ತಂಪಾಗಿಸಿದ ದ್ರವಗಳೆಂದು ಸಹ ಪರಿಗಣಿಸಬಹುದು!

Glass resistor

ಗಾಜಿನ ಪ್ರತಿರೋಧಕ – ಒಂದು ಗಾಜಿನ ಕೊಳವೆ ಹಾಗೂ ಹಾಗೂ ತನ್ನ  ಮೇಲ್ಮೈಯಲ್ಲಿ ಚೂಪುತುದಿಯುಳ್ಳ ಇಂಗಾಲದ ಪತಿರೋಧಕವನ್ನು ಹೊಂದಿರುವ ಒಂದು ವಿದ್ಯುತ್ ಪ್ರತಿರೋಧಕ.

Glass wool

ಗ್ಲಾಸ್ ಊಲ್ – ಗಾಜಿನ ಉಣ್ಣೆ – ತುಂಬಾ ನಾಜೂಕಾದ ಗಾಜಿನ ದಾರಗಳಿಂದ ಆದ ವಸ್ತು. ಇದು ಹತ್ತಿಯ ತರಹವೇ ಇರುತ್ತದೆ. ಇದನ್ನು ಸೋಸುವಿಕೆಯಲ್ಲಿ, ಹಾನಿಕಾರಕ ದ್ರವಗಳನ್ನು ಹೀರಿಕೊಳ್ಳಬೇಕಾದ ಸನ್ನಿವೇಶಗಳಲ್ಲಿ ಮತ್ತು ಉಷ್ಣ ನಿರೋಧನೆಯಲ್ಲಿ ಬಳಸುತ್ತಾರೆ.

Gluvon 

ಗ್ಲೂವೋನ್ – ಗ್ಲೂವೋನು – ಪ್ರೋಟಾನು ಮತ್ತು ನ್ಯೂಟ್ರಾನುಗಳೊಳಗಿನ ಕ್ವಾರ್ಕುಗಳು ಎಂಬ ಅತಿ ಚಿಕ್ಕ ಕಣಗಳ ನಡುವೆ ವಿನಿಮಯವಾಗಿ ಅವುಗಳನ್ನು ಬೆಸೆಯುವ ಕಾಲ್ಪನಿಕ ಕಣಗಳು.

Gold leaf electroscope

ಗೋಲ್ಡ್ ಲೀಫ್ ಎಲೆಕ್ಟ್ರೋಸ್ಕೋಪ್ – ಚಿನ್ನದೆಲೆಯ ವಿದ್ಯುದ್ದರ್ಶಕ – ನಿಜವಾದ ಚಿನ್ನದಿಂದ ಮಾಡಿದ ಅತಿ ತೆಳ್ಳಗಿನ ಎಲೆಯಾಕಾರದ ಎರಡು ಚಿನ್ನದ ರೇಕುಗಳನ್ನು ಹೊಂದಿದ್ದು, ವಿದ್ಯುತ್ ಹರಿವನ್ನು ಅಥವಾ ವಿಸರ್ಜನೆಯನ್ನು ಪತ್ತೆ ಹಚ್ಚಲು ಬಳಸುವ ಒಂದು ಉಪಕರಣ.

Goniometer 

ಗೋನಿಯೋಮೀಟರ್ – ಕೋನಮಾಪಕ – (ಹರಳುಗಳ) ಕೋನಗಳನ್ನು ಅಳೆಯುವ ಉಪಕರಣ.

Page 4 of 8

Kannada Sethu. All rights reserved.