ಫ್ರೆಸ್ನೆಲ್ ಲೆನ್ಸ್ – ಫ್ರೆಸ್ನೆಲ್ ಮಸೂರ – ಒಂದು ರೀತಿಯ ಮಸೂರ ಇದು. ಇದರ ಒಂದು ಮೇಲ್ಮೈಯನ್ನು ಮೆಟ್ಟಿಲು ಮೆಟ್ಟಿಲಾಗಿ ಕತ್ತರಿಸಿರುತ್ತಾರೆ. ಇದರಿಂದಾಗಿ ಈ ಮಸೂರದಿಂದ ಇನ್ನೂ ದಪ್ಪ, ಭಾರ ಹಾಗೂ ದುಬಾರಿಯಾದ ಸಾಂಪ್ರದಾಯಿಕ ಮಸೂರದ ಮೂಲಕ ಆಗುವಂತಹ ಬೆಳಕಿನ ವಕ್ರೀಭವನ ಉಂಟಾಗುತ್ತದೆ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಫ್ರಿಕ್ಷನ್ – ಘರ್ಷಣೆ ( ತಿಕ್ಕಾಟ) – ಸಂಪರ್ಕದಲ್ಲಿರುವ ಎರಡು ಮೇಲ್ಮೈಗಳ ಸಂಬಂಧಿತ ( ರಿಲೇಟಿವ್) ಚಲನೆಯನ್ನು ವಿರೋಧಿಸುವ ಬಲ.
ಫ್ರಿಂಜಸ್ – ಕಪ್ಪು ಬಿಳುಪು ಪಟ್ಟಿಗಳು – ಬೆಳಕಿನಲೆಯ ಹಬ್ಬುವಿಕೆ ಅಥವಾ ಅಡ್ಡ ಹಾಯುವಿಕೆಯಿಂದ ಉಂಟಾದ ಸಮಾನಾಂತರ ಕಪ್ಪು ಬಿಳುಪು ಪಟ್ಟಿಗಳು( ಪಟ್ಟಿಯಂತಹ ಪ್ರದೇಶಗಳು).
ಫ್ರಾತ್ ಪ್ಲೊಟೇಷನ್ – ನೊರೆಯ ತೇಲುವಿಕೆ – ಬೇಡದಿರುವ ಮಲಿನ ಪದಾರ್ಥಗಳಿಂದ ಲೋಹದ ಅದಿರನ್ನು ಬೇರ್ಪಡಿಸಲು ಕೈಗಾರಿಕೆಗಳಲ್ಲಿ ಬಳಸುವ ಒಂದು ವಿಧಾನ. ಇದರಲ್ಲಿ, ಒಟ್ಟು ಮಿಶ್ರಣವನ್ನು ಪುಡಿ ಮಾಡಿ ನೀರು, ಮತ್ತು, ನೊರೆ ಬರಿಸುವಂತಹ ಒಂದು ವಸ್ತುವನ್ನು ಸೇರಿಸಿ, ಇದರ ಮೂಲಕ ಗಾಳಿಯನ್ನು ನುಗ್ಗಿಸುತ್ತಾರೆ. ಬರುವಂತಹ ನೊರೆಗುಳ್ಳೆಗಳು ಲೋಹದ ಅದಿರಿನ ಕಣಗಳಿಗೆ ಅಂಟಿಕೊಂಡು ಅವುಗಳನ್ನು ಮೇಲೆ ತರುತ್ತವೆ. ಬೇಡದ ಮಲಿನ ಪದಾರ್ಥಗಳು ಕೆಳಗೇ ಉಳಿಯುತ್ತವೆ.
ಫ್ಯುಯೆಲ್ – ಇಂಧನ – ಒಂದು ಕುಲುಮೆಯಲ್ಲಿ ಅಥವಾ ತಾಪಯಂತ್ರದಲ್ಲಿ ಉತ್ಕರ್ಷಣೆಗೆ ( oxidation) ಒಳಗಾಗಿ ಅಥವಾ ಬೇರೆ ಯಾವುದಾದರೂ ರೀತಿಯಲ್ಲಿ ಪರಿವರ್ತನೆಗೊಂಡು ಉಪಯುಕ್ತವಾದ ತಾಪ ಅಥವಾ ಶಕ್ತಿಯನ್ನು ಬಿಡುಗಡೆ ಮಾಡುವ ವಸ್ತು.
ಫ್ಯುಯೆಲ್ ಸೆಲ್ – ಇಂಧನ ಕೋಶ – ಇಂಧನವು ನೇರವಾಗಿ ವಿದ್ಯುಚ್ಛಕ್ತಿಯಾಗಿ ಪರಿವರ್ತನೆ ಗೊಳ್ಳುವ ಒಂದು ಕೋಶ.
ಫುಲ್ ವೇವ್ ರೆಕ್ಟಿಫೈಯರ್ – ಪೂರ್ಣ ಅಲೆ ಪರಿವರ್ತಕ – ಪರ್ಯಾಯ ವಿದ್ಯುತ್ತಿನ ಋಣಾತ್ಮಕ ಅರ್ಧ ಅಲೆಯನ್ನು ಧನಾತ್ಮಕ ಅರ್ಧ ಅಲೆಯಾಗಿ ಪರಿವರ್ತಿಸುವ ಒಂದು ಪರಿವರ್ತಕ. ಇದರಿಂದಾಗಿ ಆಂದೋಲನದ ಎರಡೂ ಅರ್ಧಗಳು ಕೂಡಿ ಏಕದಿಕ್ಕಿನ ವಿದ್ಯುತ್ತನ್ನು ನೀಡುವುದಕ್ಕೆ ಸಹಾಯವಾಗುತ್ತದೆ.
ಫಂಕ್ಷನ್ – ಗಣಿತ ಕ್ರಿಯೆ – ಒಂದು ಚರಾಂಕವನ್ನು ಇನ್ನೊಂದು ಚರಾಂಕ ಅಥವಾ ಇನ್ನು ಕೆಲವು ಬೇರೆ ಚರಾಂಕಗಳೊಂದಿಗೆ ಜೋಡಿಸುವ ಯಾವುದಾದರೂ ಗಣಿತ ಕ್ರಿಯೆ ಅಥವಾ ಕಾರ್ಯವಿಧಾನ.
ಫಂಡಮೆಂಟಲ್ ಕಾನ್ಸ್ಟೆಂಟ್ಸ್ (ಯೂನಿವರ್ಸಲ್ ಕಾನ್ಸ್ಟೆಂಟ್ಸ್) – ಮೂಲಭೂತ ಸ್ಥಿರಾಂಕಗಳು ( ಸಾರ್ವತ್ರಿಕ ಸ್ಥಿರಾಂಕಗಳು) – ಯಾವುದೇ ಗೊತ್ತಾದ ಸನ್ನಿವೇಶದಲ್ಲಿಯಾದರೂ ಎಂದೂ ಬದಲಾಗದೆಯೇ ಉಳಿಯುವ ಪರಿಮಾಣಗಳು. ಉದಾಹರಣೆಗೆ ನಿರ್ವಾತ ಪ್ರದೇಶದಲ್ಲಿ ಬೆಳಕಿನ ವೇಗ ಮತ್ತು ಎಲೆಕ್ಟ್ರಾನಿನ ವಿದ್ಯುದಂಶ.
ಫಂಡಮೆಂಟಲ್ ಫ್ರೀಕ್ವೆನ್ಸಿ – ಮೂಲಭೂತ ಕಂಪನ – ಒಂದು ವಸ್ತುವು ಕಂಪಿಸಬಲ್ಲ ಅತ್ಯಂತ ಸರಳ ರೀತಿ ಇದು. ಈ ಕಂಪನದ ಆವರ್ತನವೇ ಮೂಲಭೂತ ಆವರ್ತನ.