ನನ್ನ ಸಾಹಿತ್ಯ ಜೀವನದ ಮರೆಯಲಾಗದ ನೆನಪುಗಳಲ್ಲಿ ಒಂದು ಎಂದರೆ, ಕವಿ ಪುತಿನ ( ಪುರೋಹಿತ ತಿರುನಾರಾಯಣಯ್ಯಂಗಾರ್ ನರಸಿಂಹಾಚಾರ್ – ಕನ್ನಡ ನವೋದಯ ಸಂದರ್ಭದ ಹಿರಿಯ ಕವಿ ಹಾಗೂ ನಾಟಕಕಾರ – ಜೀವಿತ ಕಾಲ : 1905-1998 ) ಅವರನ್ನು ಮುಖತಃ ಭೇಟಿ ಮಾಡಿದ್ದು.
1991 ನೇ ವರ್ಷ ಅದು. ನಾನು ಬೆಂಗಳೂರಿನ ಬಸವೇಶ್ವರ ನಗರದ ‘ವಿದ್ಯಾವರ್ಧಕ ಸಂಘ’ ಕಾಲೇಜಿನಲ್ಲಿ ಬಿ.ಎಸ್ಸಿ. ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯ. ರಸಾಯನಶಾಸ್ತ್ರ ಹಾಗೂ ಕನ್ನಡ ಸಾಹಿತ್ಯ ಎರಡರಲ್ಲೂ ಪರಿಣತಿ ಇದ್ದ, ಇಂದು ವ್ಯಕ್ತಿತ್ವ ಬೆಳವಣಿಗೆ ವಿಷಯದ ತಜ್ಞರು ಎಂದೆನಿಸಿರುವ ಡಾ.ಗುರುರಾಜ ಕರ್ಜಗಿಯವರು, ಆಗ ನಮ್ಮ ಪ್ರಾಂಶುಪಾಲರಾಗಿದ್ದರು. ವಿದ್ಯಾರ್ಥಿಗಳಲ್ಲಿನ ಸಾಹಿತ್ಯ ಹಾಗೂ ಕಲೆಗಳ ಆಸಕ್ತಿಯನ್ನು ಪ್ರೀತಿಯಿಂದ ಪೊರೆಯುತ್ತಿದ್ದ ಡಾ.ಮಂಗಳಾ ಪ್ರಿಯದರ್ಶಿನಿ, ಡಾ.ಪಿ.ಎಸ್.ಗೀತಾ ಹಾಗೂ ಶ್ರೀಮತಿ ಶಾಂತಾ ನಾಗರಾಜ್ ನಮ್ಮ ಕನ್ನಡ ಅಧ್ಯಾಪಕಿಯರಾಗಿದ್ದರು. ಹಾಗೂ ಸಂಗೀತ ವಿದುಷಿ ಟಿ.ಎಸ್.ಸತ್ಯವತಿಯವರು ನಮ್ಮ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕಿಯಾಗಿದ್ದರು. ಈ ಶಿಷ್ಯವತ್ಸಲರೆಲ್ಲರೂ ಸೇರಿ ಒಂದು ದಿನ ನಮ್ಮನ್ನು ( 8-10 ಜನ ವಿದ್ಯಾರ್ಥಿನಿಯರು) ಬೆಂಗಳೂರಿನ ಜಯನಗರದಲ್ಲಿದ್ದ ಪುತಿನ ಕವಿಗಳ ಮನೆಗೆ ಕರೆದುಕೊಂಡು ಹೋದರು.
ಎಳೆಹರೆಯದ ನಮಗೋ! ಆವರೆಗೆ ಪುಸ್ತಕಗಳಲ್ಲಿ ಮಾತ್ರ ಓದಿದ್ದ ಕವಿಯನ್ನು ನೇರವಾಗಿ ಭೇಟಿ ಮಾಡುವ ಖುಷಿ, ಬೆರಗು! ಬಿಳಿಯ ಪಂಚೆ, ಬಿಳಿಯ ಜುಬ್ಬಾ, ಖಾದಿ ಟೋಪಿ, ಅಪ್ಪಟ ಅಯ್ಯಂಗಾರಿ ನಾಮ ಹಾಗೂ ಪ್ರಶಾಂತ ಮುಗುಳ್ನಗುವಿನ ಆ ಹಿರಿಯರನ್ನು ನೋಡಿ ನಾವು ಮೂಕವಿಸ್ಮಿತರಾದೆವು. ಸುಮಾರು 86 ವರ್ಷ ಆಗಿದ್ದ ಆ ವಯೋವೃದ್ಧರನ್ನು ನಾವು ಹದಿನೆಂಟು-ಹತ್ತೊಂಬತ್ತು ವರ್ಷದ ಎಳಸುಗಳು ಭೇಟಿ ಮಾಡಿದ್ದೆವು! ‘ಮಾತಾಡಿ, ಪ್ರಶ್ನೆ ಕೇಳಿ’ ಎಂದು ನಮ್ಮ ಅಧ್ಯಾಪಕರು ನಮ್ಮನ್ನು ಮೆಲ್ಲಗೆ ಎಚ್ಚರಿಸಿದಾಗ, ಸಾವರಿಸಿಕೊಂಡು ನಾನು ಒಂದು ಪ್ರಶ್ನೆ ಕೇಳಿದ್ದೆ. “ಸರ್, ನಿಮ್ಮ ದೃಷ್ಟಿಯಲ್ಲಿ ದೇವರು ಎಂದರೇನು?”. ತಮ್ಮದೇ ವಿಚಾರಪೂರ್ಣವಾದ ವಿಶಿಷ್ಟ ರೀತಿಯಲ್ಲಿ ಆಸ್ತಿಕರಾಗಿದ್ದ ಕವಿಯನ್ನು, ಇದೇ ಪ್ರಶ್ನೆ ಕೇಳಬೇಕು ಅನ್ನಿಸಿ ಕೇಳಿದ್ದು ನಾನು. ಆ ಹಿರಿಯರು ಕ್ಷಣಕಾಲ ಯೋಚಿಸಿ ಹೇಳಿದ್ದರು : “ದೇವರು ಅಂದ್ರೆ? ನನ್ನ ದೃಷ್ಟಿಯಲ್ಲಿ ಸ್ವಚ್ಛ ತೆಯೇ ದೇವರು ಮಗು. ಪ್ರಾಮಾಣಿಕತೆಯೇ ದೇವರು, ಒಳ್ಖೆಯತನವೇ ದೇವರು”……..
ಅಂದರೆ ಮನುಷ್ಯರಲ್ಲಿನ ಒಳ್ಳೆಯ ಮೌಲ್ಯಗಳನ್ನು ದೇವರು ಎನ್ನುವ ನವೋದಯ ಕಾಲದ ಆದರ್ಶ ಆ ಹಿರಿಯ ಕವಿಯಲ್ಲಿ ಸ್ಪಷ್ಟವಾಗಿ ಕಾಣಿಸಿತ್ತು.
ಈ ಕವಿಭೇಟಿ ಮತ್ತು ‘ಸ್ವಚ್ಛತೆಯೇ ದೇವರು ಮಗು’ ಎಂಬ ಆ ಮಾತು ನಾನು ಎಂದೂ ಮರೆಯಲಾಗದ ಒಂದು ಸವಿನೆನಪು.
Like us!
Follow us!