ಕನ್ನಡನಾಡಿನ ಮಕ್ಕಳು ಕನ್ನಡ ಭಾಷೆಯನ್ನು ಮಾತಾಡಲು ಕಲಿಯುವ ಮೂರು ಜಾಗಗಳು ಅಂದರೆ ತಮ್ಮ ಮನೆ, ತಮ್ಮ ಶಾಲೆ-ಕಾಲೇಜು ಹಾಗೂ ತಮ್ಮನ್ನು ತಲುಪುವ ವಿವಿಧ ಮಾಧ್ಯಮಗಳು. ಈ ಹಿನ್ನೆಲೆಯಲ್ಲಿ ನೋಡಿದಾಗ ಶಾಲೆ-ಕಾಲೇಜುಗಳಲ್ಲಿನ ಅಧ್ಯಾಪಕರು ಮಾತಾಡುವ ಕನ್ನಡ ಭಾಷೆಯ ರೀತಿ-ರೂಪಗಳು ಬಹಳ ಮುಖ್ಯ. ಅವು ಎಳೆಯ ವಯಸ್ಸಿನ ವಿದ್ಯಾರ್ಥಿಗಳ ಮೇಲೆ ತುಂಬ ಪರಿಣಾಮ ಬೀರುತ್ತವೆ.
ಈ ವಿಷಯದಲ್ಲಿ, ಒಬ್ಬ ಕಾಲೇಜು ಕನ್ನಡ ಅಧ್ಯಾಪಕಿಯಾಗಿ ಸುಮಾರು ಮೂವತ್ತು ವರ್ಷ ಕೆಲಸ ಮಾಡಿರುವ ನನ್ನ ಅನಿಸಿಕೆ ಹೀಗಿದೆ. ‘ಕನ್ನಡ ಅಧ್ಯಾಪಕರ ಕನ್ನಡ ಗರಿಷ್ಠ ಕನ್ನಡ ಹಾಗೂ ಸುಲಭ ಕನ್ನಡ ಆಗಿರಬೇಕು’. ಹಾಗೆಂದರೇನು? ತುಸು ವಿವರಿಸುತ್ತೇನೆ.
ಗರಿಷ್ಠ ಕನ್ನಡ ಅಂದರೆ ಎಲ್ಲೆಲ್ಲಿ ಕನ್ನಡ ಪದಗಳು ಲಭ್ಯ ಇದೆಯೋ ಅಲ್ಲಿ ಕನ್ನಡ ಪದಗಳನ್ನೇ ಬಳಸುವಂಥದ್ದು. ಉದಾಹರಣೆಗೆ, ಸಮಯ, ಗಂಟೆ, ತರಗತಿ, ಪರೀಕ್ಷೆ, ಕಿರುಪರೀಕ್ಷೆ, ನಿಯೋಜಿತ ಕಾರ್ಯ, ವೇಳಾಪಟ್ಟಿ, ಪ್ರಶ್ನೆ, ಉತ್ತರ, ಹಾಜರಿ, ಕಷ್ಟ, ಸುಲಭ ….. ಇಂತಹ ಪದಗಳನ್ನು ಕನ್ನಡ ಅಧ್ಯಾಪಕರು ಆರಾಮವಾಗಿ ಬಳಸಬಹುದು. ಆದರೆ ನಗರ ಪ್ರದೇಶಗಳಲ್ಲಿನ ವಿದ್ಯಾಸಂಸ್ಥೆಗಳಲ್ಲಿ ಎಷ್ಟು ಜನ ಅಧ್ಯಾಪಕರು ಪ್ರಜ್ಞಾಪೂರ್ವಕವಾಗಿ ಇಂತಹ ‘ಕನ್ನಡ’ ಪದಗಳನ್ನು ಬಳಸುತ್ತಾರೆ ಎಂದರೆ ಉತ್ತರ ನಿರಾಶಾದಾಯಕ. ಕ್ಲಾಸ್, ಪಿರೇಡ್, ಟೈಂಟೇಬಲ್, ಎಟೆಂಡೆನ್ಸ್, ಟೆಸ್ಟ್, ಅಸೈನ್ ಮೆಂಟ್, ಈಸಿ …… ಇಂತಹ ಆಂಗ್ಲ ಪದಗಳನ್ನೇ ಬಳಸುವುದು ವಾಡಿಕೆ. ನಿಜ, ವಸಾಹತುಶಾಹಿ ಅನುಭವ – ಅದರ ಪ್ರಭಾವ, ಆಧುನಿಕತೆ, ಮಾಧ್ಯಮಗಳ ಪರಿಣಾಮ – ಇವೆಲ್ಲವುಗಳಿಂದ ಕನ್ನಡ ಭಾಷೆಯ ಆಡುನುಡಿಗೆ ಅದರಲ್ಲೂ ನಗರ ಪ್ರದೇಶಗಳ ಕನ್ನಡಕ್ಕೆ ನುಸುಳಿ ಬಂದಿರುವ ಆಂಗ್ಲ ಪದಗಳ ಸಂಖ್ಯೆ ಹೆಚ್ಚಾಗಿರಬಹುದು. ಆದರೆ ಗರಿಷ್ಠ ಕನ್ನಡ ಬಳಸುವುದು ಕನ್ನಡ ಅಧ್ಯಾಪಕರ ಕರ್ತವ್ಯ ಅಲ್ಲವೆ? ಕನ್ನಡ ಅಧ್ಯಾಪಕರು ಗರಿಷ್ಠ ಕನ್ನಡ ಬಳಸದಿದ್ದರೆ ಇನ್ನು ಯಾರು ಬಳಸುತ್ತಾರೆ?
ಗೊತ್ತು. ಹೀಗೆಂದ ತಕ್ಷಣ ಕೆಲವು ಮೂಲೆಗಳಿಂದ ಪ್ರತಿಭಟನೆಯ ಒಂದು ಕೂಗು ಏಳುತ್ತದೆ – “ಅಯ್ಯೋ ಹೋಗ್ರಿ! ಆಡುಮಾತು ಸಿಂಪಲ್ ಆಗಿ ಅರ್ಥ ಆಗ್ಬೇಕು. ಅದು ಬಿಟ್ಟು ಆರಕ್ಷಕ, ಆಡಳಿತಾತತ್ಮಕ, ಅಭಿಯಂತರ ಅಂತೆಲ್ಲ ಗ್ರಾಂಥಿಕ ಪದಗಳನ್ನು ಬಳಸ್ಕೊಂಡು ಕನ್ನಡಾನ ಇದ್ದಿದ್ದೂ ಕಷ್ಟ ಮಾಡಕ್ಕಾಗುತ್ತಾ? ಹೀಗ್ ಮಾಡಿದ್ರೆ ಇಂಗ್ಲಿಷ್ ಮೀಡಿಯಂನಿಂದ ಬಂದ ಮಕ್ಳು ಕನ್ನಡ ಅಂದ್ರೆ ಹೆದರ್ಕೊಂಡು ಓಡಿ ಹೋಗ್ತಾರೆ ಅಷ್ಟೆ”.
ಇದಕ್ಕೆ ಉತ್ತರ ಅಂದರೆ ನಾವು, ಕನ್ನಡ ಅಧ್ಯಾಪಕರು ಬಳಸಬೇಕಿರುವುದು ಕಷ್ಟ ಕನ್ನಡ ಅಲ್ಲ, ಸುಲಭ ಕನ್ನಡ. ನಾವು ಮಹಾವಿದ್ಯಾಲಯ, ಆರಕ್ಷಕರು, ಅಧೀಕ್ಷಕರು ಇಂತಹ ಶ್ರುತಿಕಷ್ಟ (ಉಚ್ಚರಿಸಲು ಹಾಗೂ ಕೇಳಿಸಿಕೊಂಡು ಅರ್ಥ ಮಾಡಿಕೊಳ್ಳಲು ಕಷ್ಟ ಅನ್ನಿಸುವ) ಪದಗಳನ್ನು ಬಳಸಲೇಬೇಕೆಂದಿಲ್ಲ. ಕೆಲವು ಪದಗಳು ಮೂಲತಃ ಇಂಗ್ಲಿಷ್-ಹಿಂದಿ ಮುಂತಾದ ಬೇರೆ ಭಾಷೆಗಳ ಪದಗಳಾದರೂ, ಕನ್ನಡದ ಜಾಯಮಾನಕ್ಕೆ ತಕ್ಕಂತೆ ಉಕಾರಾಂತ್ಯವನ್ನು ಪಡೆದುಕೊಂಡು ಕನ್ನಡದ್ದೇ ಆಗಿಬಿಟ್ಟಿವೆ. ಉದಾಹರಣೆಗೆ, ಪೆನ್ನು, ಪೋಲೀಸು, ಕಾಲೇಜು, ಹೋಟಲು, ಬಸ್ಸು, ಮಾಮೂಲು, ಪಸಂದು ….. ಇಂತಹ ಕೆಲವು ಪದಗಳು. ಇವನ್ನು ಹಾಗೇ ಬಳಸಿದರೆ ಕನ್ನಡ ಬಡವಾಗುವುದಿಲ್ಲ. ಆದರೆ ರಾತ್ರಿಗೆ ನೈಟ್, ಸಂಜೆಗೆ ಈವ್ನಿಂಗ್ ಬೆಳಿಗ್ಗೆಗೆ ಮಾರ್ನಿಂಗ್, ಪರೀಕ್ಷೆಗೆ ಎಕ್ಸಾಂ ನಂತಹ ಅರ್ಧಾಕ್ಷರಾಂತ್ಯ ಪದಗಳನ್ನು ಬಳಸಿದರೆ ಕನ್ನಡ ಸೊರಗುವುದಿಲ್ಲವೆ? ಈ ಬಗ್ಗೆ ಕನ್ನಡ ಅಧ್ಯಾಪಕರು ಆಲೋಚಿಸಬೇಕು ಅನ್ನಿಸುತ್ತೆ.
ಹೌದು. ಒಪ್ಪೋಣ. ‘ಭಾಷೆ ಅನ್ನುವುದು ನಿಂತ ನೀರಲ್ಲ. ಬೇರೆ ಭಾಷೆಯ ಪದಗಳನ್ನು ತನ್ನೊಳಗೆ ಬಿಟ್ಟುಕೊಳ್ಳದ “ಶುದ್ಧ ಭಾಷೆ”ಗಳಿಲ್ಲ, ಭಾಷೆಗಳಲ್ಲಿ ನುಡಿ ಬೆರಕೆ ಇದ್ದೇ ಇರುತ್ತದೆ’ ಎಂದು ಭಾಷಾ ಶಾಸ್ತ್ರಜ್ಞರು ಎಂಬ ತಿಳುವಳಿಕೆಯನ್ನು ಕೊಟ್ಟಿದ್ದಾರೆ. ಇಲ್ಲಿ ನಾವು ಮಾತಾಡುತ್ತಿರುವುದು ‘ಸಂಪೂರ್ಣ ಕನ್ನಡ’ದ ಬಗ್ಗೆ ಅಲ್ಲ, ಗರಿಷ್ಠ ಹಾಗೂ ಸುಲಭ ಕನ್ನಡದ ಬಗ್ಗೆ.
‘ಕನ್ನಡ ಭಾಷೆಯನ್ನು ಬಿಟ್ಟು ಇನ್ನು ಯಾವುದನ್ನೂ ಬಳಸುವುದಿಲ್ಲ’ ಎಂಬ ಛಲ ತೊಟ್ಟು ‘ಕಬ್ಬಿಗರ ಕಾವ’ವನ್ನು ಸಂಪೂರ್ಣವಾಗಿ ತದ್ಭವ (ಸಂಸ್ಕೃತಸಮ ಕನ್ನಡ ಪದಗಳು) ಗಳನ್ನು ಬಳಸಿದ ಆಂಡಯ್ಯನ ಉಗ್ರವ್ರತವನ್ನು ನಾವು ಹಿಡಿಯಬೇಕಿಲ್ಲವಾದರೂ, ಗರಿಷ್ಠ ಕನ್ನಡ ಹಾಗೂ ಸುಲಭ ಕನ್ನಡವನ್ನು ಬಳಸಲು ಅಡ್ಡಿ ಇಲ್ಲ.
ನಾವು ಕನ್ನಡ ಅಧ್ಯಾಪಕರು, ಕನ್ನಡ ಪದಗಳ ಸೊಗಸು, ಶ್ರೀಮಂತಿಕೆಗಳನ್ನು ಎಳೆಯರಿಗೆ ಪರಿಚಯಿಸದಿದ್ದರೆ ಇನ್ಯಾರು ಪರಿಚಯಿಸುತ್ತಾರೆ?
ಏನೆನ್ನುವಿರಿ … ಕನ್ನಡ ಅಧ್ಯಾಪಕ ಮಿತ್ರರೇ?
Like us!
Follow us!