ದೇವಿ ಹಾಕಿಸುವುದು – ಕನ್ನಡ ಭಾಷೆಯ ಒಂದು ವಿಶಿಷ್ಟ ಪದಪ್ರಯೋಗ ಇದು.
ಆಧುನಿಕ ವಿಜ್ಞಾನದ ಆವಿಷ್ಕಾರಕ್ಕಿಂತ ಮುಂಚೆ ಮೈತುಂಬ ಗುಳ್ಳೆಗಳು ಏಳುವ ವಿವಿಧ ರೀತಿಯ ಸಿಡುಬಿನ ಕಾಯಿಲೆಗಳು ಬಂದರೆ, ಅದಕ್ಕೆ ಕಾರಣ ಗ್ರಾಮದೇವತೆಯ ಕೋಪ ಎಂಬ ಭಾವನೆಯು ನಮ್ಮ ಹಳ್ಳಿಗರಲ್ಲಿತ್ತು. ಅದಕ್ಕಾಗಿಯೇ ನೋಡಿ ಈ ಕಾಯಿಲೆಗೆ ‘ಅಮ್ಮ ಬಂದಿದೆ, ಅಮ್ಮ ಆಗಿದೆ’ ಎಂದೇ ಹೇಳುತ್ತಿದ್ದರು. Small pox ಎಂಬ ಸಿಡುಬಿಗಂತೂ ‘ದೇವಮ್ಮ ಕಾಯಿಲೆ’ ಎಂಬ ಹೆಸರೇ ಇತ್ತು!
ಮುಂದೆ, 1796ರಲ್ಲಿ, ಇಂಗ್ಲೆಂಡ್ ದೇಶದ ವಿಜ್ಞಾನಿ ಎಡ್ವರ್ಡ್ ಜನ್ನರ್ ಅವರು ಸಿಡುಬು ರೋಗಕ್ಕೆ ಲಸಿಕೆ ಕಂಡು ಹಿಡಿದಾಗ, ಸಿಡುಬಿನ ಕೆಲವು ದುರ್ಬಲ ರೋಗಾಣುಗಳನ್ನೇ ಆರೋಗ್ಯವಂತ ದೇಹಕ್ಕೆ ಚುಚ್ಚುಮದ್ದಿನ ಮೂಲಕ ಹಾಕಿ, ಆ ದೇಹದಲ್ಲಿ ಸಿಡುಬಿನ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಬೆಳೆಸುವ ಕಾರ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ, ಸಿಡುಬು ಹಾಕಿಸುವುದು ಎಂಬ ಪದಕ್ಕೆ ಬದಲಾಗಿ ‘ದೇವಿ ಹಾಕಿಸುವುದು’ ಎಂಬ ಪದ ಬಳಕೆಗೆ ಬಂತು!! ಜಾನಪದ ನಂಬಿಕೆ ಹಾಗೂ ವಿಜ್ಞಾನವು ಎಷ್ಟು ಅನೂಹ್ಯ ರೀತಿಯಲ್ಲಿ ಸೇರಿವೆಯಲ್ಲವೆ ಈ ನುಡಿಗಟ್ಟಿನಲ್ಲಿ! ಕನ್ನಡ ಭಾಷೆಯು ಬೆಳೆದು ಬಂದ ಒಂದು ಮೈಲಿಗಲ್ಲನ್ನು ಈ ಪದ ಸೂಚಿಸುತ್ತದೆ ಎಂದರೆ ತಪ್ಪಾಗಲಾರದು.
Like us!
Follow us!