ಕಾರ್, ಕ್ಲಚ್, ಬ್ರೇಕ್, ಆಕ್ಸಿಲಿರೇಟರ್, ಗೇರ್, ಸ್ಟೀರಿಂಗ್…..
ಓಹೋಹೋಹೋ…..ಇಂಗ್ಲಿಷ್ ಪದಗಳ ಸಾಲುಸಾಲು!
‘ಕಾರು ಎಂಬ ನಾಲ್ಕು ಚಕ್ರದ ಅತಿ ಜನಪ್ರಿಯ ಮೋಟಾರುಗಾಡಿಗೆ ಅರ್ಥಾತ್ ನಮ್ಮ ಸಮಾಜದ ಶ್ರೀಮಂತಿಕೆ ಹಾಗೂ ಆರಾಮಜೀವನದ ಒಂದು ಪ್ರಬಲ ಸಂಕೇತಕ್ಕೆ ಸಂಬಂಧಿಸಿದಂತೆ, ಕನ್ನಡ ಪದಗಳು ಇದ್ದಾವಾ?’ ಎಂಬ ಪ್ರಶ್ನೆ ನನ್ನನ್ನು ಕಾಡಿತು. ಕಾರ್ ಎಂಬ ಇಂಗ್ಲಿಷ್ ಪದದಿಂದ ಪ್ರಾರಂಭಿಸಿ ಮೇಲೆ ಹೇಳಿದ ಎಲ್ಲ ಪದಗಳಿಗೂ ನಾವು ‘ಉ’ ಸ್ವರ ಸೇರಿಸಿ ಕಾರು, ಕ್ಲಚ್ಚು, ಬ್ರೇಕು, ಆಕ್ಸಿಲಿರೇಟರು, ಸ್ಟೀರಿಂಗು …ಹೀಗೆ ಬಳಸುವುದನ್ನು ಅಭ್ಯಾಸ ಮಾಡಿಕೊಂಡಿದ್ದೇವೆ ಅಲ್ವಾ..
ಪ್ರಪಂಚದಲ್ಲಿ ಮೊಟ್ಟ ಮೊದಲ ಕಾರನ್ನು ತಯಾರಿಸಿದ್ದು ಜರ್ಮನಿಯ ಇಂಜಿನಿಯರ್ ಆಗಿದ್ದ ಕಾರ್ಲ್ ಬೆಂಝ್ ಅಂತೆ(1886). ಆಗ ಅದಕ್ಕೆ ಇದ್ದದ್ದು ಮೂರು ಚಕ್ರಗಳು! ಇನ್ನು, ಇಂಗ್ಲಿಷ್ ಭಾಷೆಯ ‘ಕಾರ್’ ಪದದ ಮೂಲ ಲ್ಯಾಟಿನ್ ಭಾಷೆಯ ಕ್ಯಾರೋಸ್. ಇದರ ಅರ್ಥ ಎರಡು ಚಕ್ರದ ಮೇಲೆ ಓಡುವ ಗಾಡಿ ಎಂದು. ಕಾರ್ಟ್, ಕ್ಯಾರಿಯೇಜ್, ಕ್ಯಾರವಾನ್…..ಈ ಎಲ್ಲ ಪದಗಳೂ ಒಂದೇ ಮೂಲದಿಂದ ಜನಿಸಿದಂಥವು!
ಅಂದ ಹಾಗೆ, ನಮ್ಮ ದೇಶದಲ್ಲಿ ಕಾರು ಕೊಂಡ ಮೊದಲ ಭಾರತೀಯರೆಂದರೆ ಪ್ರಖ್ಯಾತ ಉದ್ಯಮಿ ಜೆಮ್ ಶಡ್ಜಿ ಟಾಟಾ ಅಂತೆ(1898). ಕರ್ನಾಟಕದ ಮೊದಲ ಕಾರು ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರದ್ದಂತೆ( 1908). ಒಂದಂತೂ ನಿಜ. ಇದು ಅಂದರೆ ಕಾರು, ಬ್ರಿಟಿಷರು ನಮ್ಮನ್ನು ಆಳುತ್ತಿದ್ದಾಗ ನಮ್ಮ ದೇಶಕ್ಕೆ ಬಂದ ಯಂತ್ರವಾದ್ದರಿಂದ ನಾವು ಕಾರ್ ಪದವನ್ನು ಕಾರು ಎಂಬಷ್ಟಕ್ಕೆ ಮಾತ್ರ ಕನ್ನಡೀಕರಿಸಿಕೊಳ್ಳುವಲ್ಲಿ ತೃಪ್ತರಾದೆವು ಅನ್ನಿಸುತ್ತೆ.
ಅಂದ ಹಾಗೆ ಹುಡುಕಿದರೆ ನಮಗೆ ಕೆಳಗಿನ ಕಾರುಸಂಬಂಧೀ ಪದಗಳು ಸಿಗುತ್ತವೆ.
ಕಾರು – ಮೋಟಾರು ಗಾಡಿ
ಕ್ಲಚ್ – ಹಿಡಿತ
ಆಕ್ಸಿಲಿರೇಟರ್ – ವೇಗವರ್ಧಕ
ಸ್ಟೀರಿಂಗ್ ವ್ಹೀಲ್ – ಚುಕ್ಕಾಣಿ ಚಕ್ರ
ಗೇರ್ – ಹಲ್ಲುಗಾಲಿ
ಈ ಪದಗಳನ್ನು ನಾವು ದೈನಂದಿನ ಜೀವನದಲ್ಲಿ ಬಳಸುತ್ತೇವೋ ಇಲ್ಲವೋ ಎಂಬುದಕ್ಕಿಂತ ಮುಖ್ಯ ವಿಷಯ ಅಂದರೆ, ಇವು ಕನ್ನಡದಲ್ಲಿ ಲಭ್ಯವಿದ್ದಾವೆ ಎಂಬ ವಿಷಯವನ್ನು ತಿಳಿದುಕೊಂಡು ಖುಷಿ ಪಡುವುದು. ಏನಂತೀರಿ ಕನ್ನಡ ಬಂಧುಗಳೇ?
Like us!
Follow us!