ನಮ್ಮ ಕುಟುಂಬಕ್ಕೆ ವಿಶ್ವನಾಥ್ ಎಂಬ ಒಬ್ಬ ಪರಿಚಿತರಿದ್ದಾರೆ. ಈ ಹಿಂದೆ, ‘ಜಲಶಿಲಾಂತರ’ ಪದದ ಬಗ್ಗೆ ಇದೇ ಜಾಲಪುಟದಲ್ಲಿ ಕನ್ನಡ ಪ್ರಸಂಗ ಬರೆಯುವಾಗ ಅವರ ಪ್ರಸ್ತಾಪ ಮಾಡಿದ್ದೆ ನಾನು. ಪಕ್ಷಿ ಛಾಯಾಹ್ರಾಹಕರು ಮತ್ತು ವನ್ಯಪ್ರದೇಶ ಚಾರಾಣಾಸಕ್ತರು ಎಂದು  ಅವರನ್ನು ಪರಿಚಯಿಸಿದ್ದೆ‌.‌ ಅವರು ಬ್ಯಾಂಕೊಂದರಲ್ಲಿ‌ ಕೆಲಸ ಮಾಡಿ ಕೆಲವು ವರ್ಷಗಳ ಹಿಂದೆ ನಿವೃತ್ತರಾದವರು.

ಒಮ್ಮೆ ವಿಶ್ವನಾಥ್ ಅವರು, ‌‌‌‍‌‌ತಾವು‍ ಹಿಂದೊಮ್ಮೆ, ವರ್ಗಾವಣೆಯ ಕಾರಣದಿಂದ ರಾಯಚೂರಿನಲ್ಲಿ ಕೆಲಸ ಮಾಡಲಾರಂಭಿಸಿದಾಗ, ತಮಗೆ ಆದ ಒಂದು ಅನುಭವವನ್ನು, ಸಮಾರಂಭಕ್ಕಾಗಿ ಸೇರಿದ್ದ ಜನರೊಡನೆ ಹಾಗೆಯೇ ಸುಮ್ಮನೆ (ಸಾಂದರ್ಭಿಕವಾಗಿ) ಹಂಚಿಕೊಂಡರು.‌ ಆ ಅನುಭವ ಹೀಗಿದೆ.

ರಾಯಚೂರಿಗೆ ಹೋದ ಹೊಸದರಲ್ಲಿ ತರಕಾರಿ ತರಲೆಂದು ವಿಶ್ವನಾಥರು ಆ ಊರಿನ ತರಕಾರಿ ಅಂಗಡಿಯೊಂದಕ್ಕೆ ಹೋದರಂತೆ.‌ ಅಲ್ಲಿ  ತರಕಾರಿ ಮಾರುತ್ತಿದ್ದಾಕೆಗೆ “ಅಮ್ಮ, ಕೆಲವು ತರಕಾರಿ ಬೇಕಿತ್ತು‌. ಆರಿಸ್ಕೋತೀನಿ” ಅಂದರಂತೆ.‌ ಆಗ ಆಕೆ “ತರ್ಕಾರಿ ಇಲ್ಲರೀ ಸಾಹೇಬರಾ” ಅಂದಳಂತೆ. ಎದುರಿಗೇ ತರಕಾರಿಗಳ ರಾಶಿ ಹಾಕಿಕೊಂಡಿದ್ದು ‘ತರ್ಕಾರಿ ಇಲ್ಲ’ ಅಂತಾಳಲ್ಲ ಇವಳು! ಎಂದು ಅಸಮಾಧಾನಗೊಂಡು “ಯಾಕಮ್ಮಾ! ಇಲ್ಲೇ ಇಷ್ಟೊಂದು‌ ತರ್ಕಾರಿ ಇದೆ! ಇಲ್ಲ ಅಂತೀಯಲ್ಲ!” ಅಂದರಂತೆ. ಆಕೆ ಇವರ ಕೈ ಸಂಜ್ಞೆ ಗಮನಿಸಿ ” ಅಯ್ಯೋ, ಇವು ಕಾಯಿಪಲ್ಲೆ ರೀ. ಇದಕ್ಕೇನೇನ್ರೀ ನೀವು ತರಕಾರಿ ಅಂದಿದ್ದು? ಸರಿ ತಗೋರಿ” ಅಂದಳಂತೆ!! 

‘ಓಹೋ…ಈ ಊರಲ್ಲಿ  ತರಕಾರಿಗೆ ಕಾಯಿಪಲ್ಲೆ ಅಂತಾರಾ..’ ಎಂದು‌ ಯೋಚಿಸುತ್ತಾ ವಿಶ್ವನಾಥರು ತಮಗೆ ಬೇಕಾಗಿದ್ದ ತರಕಾರಿ ಆರಿಸಿಕೊಂಡು ನೂರು ರೂಪಾಯಿ ನೋಟು ಕೊಟ್ಟು “ಸರಿ. ಎಷ್ಟಾಯಿತೋ ತಗೊಂಡು ಚಿಲ್ರೆ ಕೊಡಮ್ಮ” ಅಂದರಂತೆ. ಅದಕ್ಕೆ ಆಕೆ “ಚಿಲ್ರೆ ರೊಕ್ಕ ಇಲ್ಲಾರಿ.‌ ಹಿಂದಗಡೀಂದ ಬರ್ರಿ” ಅಂದಳಂತೆ. ಇವರಿಗೆ ಸಿಟ್ಟು ಬಂದು “ನಾನ್ಯಾಕೆ ಹಿಂದುಗಡೆಯಿಂದ ಬರ್ಬೇಕು? ಇಲ್ಲೇ ಕೊಡಮ್ಮಾ ಚಿಲ್ರೆ” ಎಂದು ಥಟ್ಟನೆ ಪಟಾಕಿ ಸಿಡಿದಂತೆ ಹೇಳಿದರಂತೆ. ‌ಸದ್ಯ, ಅಷ್ಟು ಹೊತ್ತಿಗೆ ಅಲ್ಲಿಗೆ ಬಂದಿದ್ದ  ಒಬ್ಬ ವ್ಯಕ್ತಿ ಈ ಗೊಂದಲವನ್ನು ಅರ್ಥ ಮಾಡಿಕೊಂಡು “ಆಕೆ ಹೇಳಿದ್ದು ‘ಚಿಲ್ರೆಕಾಸು ಇಲ್ಲ, ಆಮೇಲೆ ಬನ್ನಿ ಅಂತ ಸಾರ್.‌  ರಾಯಚೂರಲ್ಲಿ ‘ನಂತರ, ಆಮೇಲೆ’  ಅನ್ನಕ್ಕೆ ಹಿಂದಗಡೀಂದ ಅಂತಾರೆ” ಅಂದರಂತೆ. “ಕನ್ನಡಗಳಲ್ಲಿರುವ ಪ್ರಾದೇಶಿಕ ವ್ಯತ್ಯಾಸ ಎಷ್ಟು ತಪ್ಪು ತಿಳುವಳಿಕೆಗೆ ಕಾರಣ ಆಗುತ್ತಲ್ಲ’ ಎಂದುಕೊಂಡರಂತೆ ವಿಶ್ವನಾಥರು‌‌. ಹೌದಲ್ವಾ…!