ಗ್ರಾಂ ಮೋಲಿಕ್ಯೂಲ್ – ಅಣು ಗ್ರಾಂ – ಒಂದು ವಸ್ತುವಿನ ಅಣುತೂಕವನ್ನು ಗ್ರಾಂಗಳಲ್ಲಿ ವ್ಯಕ್ತಪಡಿಸುವ ನೆಲೆ.
ಗ್ರೈನ್ – ದ್ರವ್ಯರಾಶಿಯ ಬ್ರಿಟಿಷ್ ಮೂಲಮಾನ. 1 ಗ್ರೈನ್ = 0.648 ಗ್ರಾಂ = 0.0001428571 ಪೌಂಡ್.
ಗೋನಿಯೋಮೀಟರ್ – ಕೋನಮಾಪಕ – (ಹರಳುಗಳ) ಕೋನಗಳನ್ನು ಅಳೆಯುವ ಉಪಕರಣ.
ಗೋಲ್ಡ್ ಲೀಫ್ ಎಲೆಕ್ಟ್ರೋಸ್ಕೋಪ್ – ಚಿನ್ನದೆಲೆಯ ವಿದ್ಯುದ್ದರ್ಶಕ – ನಿಜವಾದ ಚಿನ್ನದಿಂದ ಮಾಡಿದ ಅತಿ ತೆಳ್ಳಗಿನ ಎಲೆಯಾಕಾರದ ಎರಡು ಚಿನ್ನದ ರೇಕುಗಳನ್ನು ಹೊಂದಿದ್ದು, ವಿದ್ಯುತ್ ಹರಿವನ್ನು ಅಥವಾ ವಿಸರ್ಜನೆಯನ್ನು ಪತ್ತೆ ಹಚ್ಚಲು ಬಳಸುವ ಒಂದು ಉಪಕರಣ.
ಗ್ಲೂವೋನ್ – ಗ್ಲೂವೋನು – ಪ್ರೋಟಾನು ಮತ್ತು ನ್ಯೂಟ್ರಾನುಗಳೊಳಗಿನ ಕ್ವಾರ್ಕುಗಳು ಎಂಬ ಅತಿ ಚಿಕ್ಕ ಕಣಗಳ ನಡುವೆ ವಿನಿಮಯವಾಗಿ ಅವುಗಳನ್ನು ಬೆಸೆಯುವ ಕಾಲ್ಪನಿಕ ಕಣಗಳು.
ಗ್ಲಾಸ್ ಊಲ್ – ಗಾಜಿನ ಉಣ್ಣೆ – ತುಂಬಾ ನಾಜೂಕಾದ ಗಾಜಿನ ದಾರಗಳಿಂದ ಆದ ವಸ್ತು. ಇದು ಹತ್ತಿಯ ತರಹವೇ ಇರುತ್ತದೆ. ಇದನ್ನು ಸೋಸುವಿಕೆಯಲ್ಲಿ, ಹಾನಿಕಾರಕ ದ್ರವಗಳನ್ನು ಹೀರಿಕೊಳ್ಳಬೇಕಾದ ಸನ್ನಿವೇಶಗಳಲ್ಲಿ ಮತ್ತು ಉಷ್ಣ ನಿರೋಧನೆಯಲ್ಲಿ ಬಳಸುತ್ತಾರೆ.
ಗಾಜಿನ ಪ್ರತಿರೋಧಕ – ಒಂದು ಗಾಜಿನ ಕೊಳವೆ ಹಾಗೂ ಹಾಗೂ ತನ್ನ ಮೇಲ್ಮೈಯಲ್ಲಿ ಚೂಪುತುದಿಯುಳ್ಳ ಇಂಗಾಲದ ಪತಿರೋಧಕವನ್ನು ಹೊಂದಿರುವ ಒಂದು ವಿದ್ಯುತ್ ಪ್ರತಿರೋಧಕ.
ಗ್ಲಾಸ್ – ಗಾಜು – ತನ್ನೊಳಗೆ ಅನಿಯಮಿತವಾದ ಪರಮಾಣು ಜೋಡಣೆಯನ್ನು ಹೊಂದಿರುವಂತಹ ಒಂದು ಘನವಸ್ತು. ಗಾಜುಗಳಲ್ಲಿರುವ ಪರಮಾಣುಗಳು ಚೆಲ್ಲಾಪಿಲ್ಲಿಯಾಗಿರುವುದರಿಂದ ಈ ವಸ್ತುಗಳು ಹರಳುರೂಪದಲ್ಲಿರುವುದಿಲ್ಲ, ತುಸು ತಾಪ ಕೊಟ್ಟರೆ ಸಾಕು, ಇವು ಮೃದುಗೊಳ್ಳುತ್ತವೆ. ಹೀಗಾಗಿ ಇವುಗಳನ್ನು ಬಹಳ ತಂಪಾಗಿಸಿದ ದ್ರವಗಳೆಂದು ಸಹ ಪರಿಗಣಿಸಬಹುದು!
ಘೋಸ್ಟ್ – ಭೂತಬಿಂಬ – ಬೇಕಾದ ಬಿಂಬದ ಪಕ್ಕ ಮೂಡುವ ಒಂದು ಮಸುಕಾದ ಬಿಂಬ.
ಗೆಟ್ಟರ್ – ಗ್ರಾಹಕ ವಸ್ತು – ಗಾಳಿಯನ್ನು ಹೊರದಬ್ಬಿ ನಿರ್ವಾತವನ್ನು ಉಂಟು ಮಾಡಿದ ಮೇಲೆ ಉಳಿಕೆ ಅನಿಲಗಳನ್ನು ಹೊರತೆಗೆಯುವುದಕ್ಕೋಸ್ಕರ
ಬಳಸುವ ರಾಸಾಯನಿಕ ವಸ್ತು.