ನಿಯತ ಕ್ಷೇತ್ರ – ಶಕ್ತಿಯು ನಿಯತವಾಗಿರುವ ಭೌತಿಕ ವ್ಯವಸ್ಥೆಗಳ ಬಲಗಳನ್ನು ಸೂಚಿಸುವ ದಿಶಾಯುತ(ದಿಕ್ಕುಳ್ಳ) ಕ್ಷೇತ್ರಗಳು.
ದ್ರವ್ಯರಾಶಿ ಮತ್ತು ಶಕ್ತಿಯ ನಿಯತತೆ – ತನ್ನಷ್ಟಕ್ಕೆ ತಾನು ಪ್ರತ್ಯೇಕವಾಗಿರುವ ವ್ಯವಸ್ಥೆಯಲ್ಲಿ ವಿಶ್ರಾಂತ ದ್ರವ್ಯರಾಶಿ ಶಕ್ತಿ+ಚಲನ ಶಕ್ತಿ+ಅಂತಃ ಸಾಮರ್ಥ್ಯಶಕ್ತಿ ಇವುಗಳ ಮೊತ್ತವು ಯಾವಾಗಲೂ ನಿಯತವಾಗಿರುತ್ತದೆ.
ಶಕ್ತಿಯ ನಿಯತತೆಯ ನಿಯಮ – ಈ ನಿಯಮದ ಪ್ರಕಾರ ಶಕ್ತಿಯನ್ನು ಸೃಷ್ಟಿ ಮಾಡಲೂ ಸಾಧ್ಯವಿಲ್ಲ, ನಾಶ ಮಾಡಲೂ ಸಾಧ್ಯವಿಲ್ಲ. ಆದರೆ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಅದನ್ನು ಪರಿವರ್ತಿಸಲು ಸಾಧ್ಯವಿದೆ.
ವಿದ್ಯುದಂಶದ ನಿಯತತೆ – ತನ್ನಷ್ಟಕ್ಕೆ ತಾನು ಪ್ರತ್ಯೇಕವಾಗಿರುವ ಒಂದು ವ್ಯವಸ್ಥೆಯಲ್ಲಿರುವ ವಿದ್ಯುದಂಶವು ನಿಯತವಾಗಿರುತ್ತದೆ(ನಿಯತ = ಸ್ಥಿರ = ಎಂದೂ ಬದಲಾಗದ್ದು).
ಜೋಡಿ ಬಿಂದುಗಳು – ಮಸೂರದ ಎರಡೂ ಬದಿಗಳಲ್ಲಿರುವ ಒಂದು ಜೋಡಿ ಬಿಂದುಗಳಿವು. ಇವು ಹೇಗಿರುತ್ತವೆ ಅಂದರೆ ಒಂದು ಬಿಂದುವಿನಲ್ಲಿ ಇಟ್ಟ ಒಂದು ವಸ್ತುವಿನ ಬಿಂಬವು ಇನ್ನೊಂದರಲ್ಲಿ ಮೂಡುತ್ತದೆ.
ವಾಹಕತೆ – ವಸ್ತುವಿನ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಆ ವಸ್ತುವಿನ ಚಲನೆಯಿಲ್ಲದೆ ಶಕ್ತಿಯು ಹರಿಯುವ ಕ್ರಿಯೆ. ಉದಾಹರಣೆಗೆ – ಉಷ್ಣವಾಹಕತೆ, ವಿದ್ಯುತ್ ವಾಹಕತೆ.
ವಾಹಕತ್ವ – ಒಂದು ವಸ್ತುವಿನಲ್ಲಿ ಎಷ್ಟು ಸುಲಭವಾಗಿ ವಿದ್ಯುತ್ ಹರಿಯಬಲ್ಲುದು ಎಂಬುದರ ಅಳತೆಯೇ ಅದರ ವಾಹಕತ್ವ.
ವಿದ್ಯುತ್ ಸಂಗ್ರಾಹಕ – ವಿದ್ಯುದಂಶವನ್ನು ಸಂಗ್ರಹಿಸಬಲ್ಲ ವಾಹಕ ಅಥವಾ ವಾಹಕಗಳಿಂದ ಕೂಡಿದ ಒಂದು ವ್ಯವಸ್ಥೆ. ಇದಕ್ಕೆ capacitor ಎಂಬ ಹೆಸರೂ ಇದೆ.
ಹನಿಗಟ್ಟುವಿಕೆ ಅಥವಾ ಬಾಷ್ಪೀಭವನ – ವಸ್ತುವಿನ ಅವಸ್ಥೆಯು ಆವಿಯಿಂದ ದ್ರವರೂಪಕ್ಕೆ ಬದಲಾಗುವುದು.
ಸ್ವರಮೈತ್ರಿ – ಎರಡು ಅಥವಾ ಅದಕ್ಕಿಂತ ಹೆಚ್ಚು ಸ್ವರಗಳು ಒಟ್ಟಿಗೆ ಸೇರಿ, ಕಿವಿಗೆ ಇಂಪಾಗುವಂತಹ ಧ್ವನಿಸಂಯೋಜನೆಯನ್ನು ಉಂಟುಮಾಡುವುದು.