ತಗ್ಗು-ಉಬ್ಬು ಅಥವಾ ನಿಮ್ನ-ಪೀನ – ತನ್ನ ಒಂದು ಮೇಲ್ಮೈಯಲ್ಲಿ ಉಬ್ಬಿದ್ದು ಇನ್ನೊಂದು ಮೇಲ್ಮೈಯಲ್ಲಿ ತಗ್ಗಿರುವ ಗಾಜು ಅಥವಾ ಮಸೂರ.
ತಗ್ಗು ಅಥವಾ ನಿಮ್ನ – ತನ್ನ ಮೇಲ್ಮೈಯಲ್ಲಿ ಒಳಮುಖಿಯಾಗಿ ತಗ್ಗಿದ ಅಥವಾ ಬಾಗಿದ ಒಂದು ಗಾಜು ಅಥವಾ ಮಸೂರ.
ಗಣಕ ಯಂತ್ರ – ಒಂದು ವಿದ್ಯುನ್ಮಾನ ಉಪಕರಣ. ಒಂದು ಸೂಚಿತ ಕ್ರಮಬದ್ಧ ಕಾರ್ಯಪಟ್ಟಿ(ಪ್ರೋಗ್ರಾಂ)ಯ ಪ್ರಕಾರ ಮಾಹಿತಿಯನ್ನು ಸಂಸ್ಕರಿಸುತ್ತದೆ. ಗಣಕ ಯಂತ್ರದ ಯಂತ್ರಾಂಶವು(ಹಾರ್ಡ್ವೇರ್) ವಾಸ್ತವಿಕ ವಿದ್ಯುನ್ಮಾನ ಅಥವ ಯಾಂತ್ರಿಕ ಉಪಕರಣಗಳನ್ನು ಒಳಗೊಂಡಿರುತ್ತದೆ, ಹಾಗೂ ಅದರ ತಂತ್ರಾಂಶವು(ಸಾಫ್ಟ್ವೇರ್) ಕ್ರಮಬದ್ಧ ಕಾರ್ಯಪಟ್ಟಿ ಮತ್ತು ದತ್ತಾಂಶಗಳನ್ನು ಒಳಗೊಂಡಿರುತ್ತದೆ.
ಕಾಂಪ್ಟನ್ ಪರಿಣಾಮ – ಕ್ಷ-ಕಿರಣ ಅಥವಾ ಗಾಮಾಕಿರಣಗಳಲ್ಲಿನ ಫೋಟಾನು(ಬೆಳಕು ಶಕ್ತಿಯ ಕಣಗಳು)ಗಳನ್ನು ಮುಕ್ತ ಎಲೆಕ್ಟ್ರಾನಗಳು ಚದುರಿಸಿದಾಗ ಆ ಫೋಟಾನುಗಳ ಶಕ್ತಿಯು ಕಡಿಮೆಯಾಗುವ ವಿದ್ಯಮಾನ. ಈ ಪರಿಣಾಮವನ್ನು ೧೯೨೩ರಲ್ಲಿ ಅಮೆರಿಕದ ವಿಜ್ಞಾನಿ ಎ.ಎಚ್.ಕಾಂಪ್ಟನ್‌ರು ಮೊಟ್ಟಮೊದಲು ಗಮನಿಸಿದರು.
ಸಂಕೋಚನ ಮಟ್ಟ – ಹಾಕುವ ಒತ್ತಡದಲ್ಲಿ ಬದಲಾವಣೆಯಾದಾಗ ಒಂದು ಘನವಸ್ತು ಅಥವಾ ದ್ರವವಸ್ತುವಿನ ಪರಿಮಾಣದಲ್ಲಿ ಆಗುವ ತುಲನಾತ್ಮಕ ಬದಲಾವಣೆಯ ಅಳತೆ.
ಸಂಯೋಜಿತ ಲೋಲಕ – ತನ್ನ ಮೂಲಕ ಹಾಯ್ದುಹೋಗುವ ಅಡ್ಡರೇಖಾ ಅಕ್ಷದ ಉದ್ದಕ್ಕೂ ಆ ಕಡೆಗೊಮ್ಮೆ ಈ ಕಡೆಗೊಮ್ಮೆ ಸಮರಸದ ಚಲನೆಯನ್ನು ಮಾಡಲು ಸಾಮರ್ಥ್ಯವಿರುವ ಘನವಸ್ತು.
ಸಂಯೋಜಿತ ದೂರದರ್ಶಕ – ದೂರದರ್ಶಕ ಎಂದರೆ ಚಿಕ್ಕವಸ್ತುವೊಂದರ ದೊಡ್ಡ ಬಿಂಬವನ್ನು ರೂಪಿಸಲು ಬಳಸುವಂತಹ ಒಂದು ಉಪಕರಣ. ಸಂಯೋಜಿತ ದೂರದರ್ಶಕವು ವಸ್ತುಬಿಂಬವನ್ನು ದೊಡ್ಡದಾಗಿಸಲು ಎರಡು ಮಸೂರಗಳನ್ನು ಅಥವಾ ಎರಡು ವ್ಯವಸ್ಥೆಗಳನ್ನು ಬಳಸುತ್ತದೆ. ಇದರಲ್ಲಿ ಎರಡನೆಯ ಮಸೂರ ವ್ಯವಸ್ಥೆಯು ಮೊದಲನೆಯದು ರೂಪಿಸಿದ ನಿಜಬಿಂಬವನ್ನು ದೊಡ್ಡದಾಗಿಸುತ್ತದೆ.
ಉಪಾಂಗ ದಿಶಾಯುತಗಳು – ಒಂದು ದಿಶಾಯುತದ ಅಂಗಭಾಗಗಳಾಗಿದ್ದು ಆ ದಿಶಾಯುತ ಮಾಡುವ ಪರಿಣಾಮವನ್ನೇ ತಾವೂ ಮಾಡುವ ಪೂರಕ ದಿಶಾಯುತಗಳು.
ಪೂರಕ ಬಣ್ಣಗಳು – ಪರಸ್ಪರ ಬೆರೆತಾಗ ಬಿಳಿಬಣ್ಣವನ್ನು ಕೊಡುವ ಎರಡು ಬೇರೆ ಬೇರೆ ಬಣ್ಣಗಳು. ಈ ಜೋಡಿಯ ಸಂಖ್ಯೆ ಅನಂತ.
ದಿಕ್ಸೂಚಿ – ಕಾಂತೀಯ ಬಲಕ್ಷೇತ್ರದ ದಿಕ್ಕನ್ನು ಸೂಚಿಸಲು ಬಳಸುವ ಉಪಕರಣ ಇದು. ಇದರೊಳಗೆ ಮುಕ್ತವಾಗಿ ಓಲಾಡುತ್ತಿರುವ ಅಯಸ್ಕಾಂತವೊಂದು ಭೂಮಿಯೊಳಗಿನ ಅಯಸ್ಕಾಂತವನ್ನು ಅನುಸರಿಸಿ ಉತ್ತರ ದಿಕ್ಕನ್ನು ಸೂಚಿಸುತ್ತದೆ. ಇದರಿಂದಾಗಿ ಈ ಉಪಕರಣವನ್ನು ಭೂಸಂಚಾರ ಅಥವಾ ಜಲಸಂಚಾರದಲ್ಲಿ ದಿಕ್ಕನ್ನು ಖಚಿತ ಪಡಿಸಿಕೊಳ್ಳಲು ವ್ಯಾಪಾಕವಾಗಿ ಬಳಸುತ್ತಾರೆ.