ಕಳೆದ ವಾರ ಪದವಿಪೂರ್ವ ಶಿಕ್ಷಣದ ಫಲಿತಾಂಶ ಬಂತಲ್ಲ, ಎಲ್ಲ ಮಾಧ್ಯಮಗಳಲ್ಲೂ ಅದರದೇ ಸುದ್ದಿ. ಎಲ್ಲರೂ ಇದರ ಬಗ್ಗೆಯೇ ಮಾತಾಡುತ್ತಾ, ಚರ್ಚಿಸುತ್ತಾ ಇದ್ದ ಸಂದರ್ಭದಲ್ಲಿ, ನನಗೆ ಪರಿಚಿತರಾದ ಕನ್ನಡ ಅಧ್ಯಾಪಕ ಮಿತ್ರರೊಬ್ಬರು ತಮ್ಮ ಮಗಳ ಪ.ಪೂ. ತರಗತಿಯ ಫಲಿತಾಂಶದ ಬಗ್ಗೆ ಹೇಳುತ್ತಾ, “ಅವ್ಳಿಗೆ 69% ಅಂಕ ಬಂದಿದೆ ಮೇಡಂ . ಕನ್ನಡ, ಇಂಗ್ಲಿಷ್ ನಲ್ಲೇ ಕಡಿಮೆ. ಅವರ ಕಾಲೇಜಲ್ಲಿ ಕನ್ನಡ, ಇಂಗ್ಲಿಷ್ ಗೆ ಸರಿಯಾಗಿ ಅಧ್ಯಾಪಕರೇ ಇಲ್ಲ. ನಾನೇ ಒಂದಿಷ್ಟು ಭಾಷಾಭ್ಯಾಸ ಹೇಳ್ಕೊಟ್ಟಿದ್ದೆ ಅವಳಿಗೆ ಕೊನೆಯಲ್ಲಿ, ಆದ್ರೂ ಹೇಳಿಕೊಳ್ಳುವಂತಹ ಪ್ರಯೋಜನ ಆಗ್ಲಿಲ್ಲ” ಅಂದರು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಭಾಷೆಗಳ ಬಗ್ಗೆ ಈ ನಿರ್ಲಕ್ಷ್ಯ ಏಕೆ? ಮನುಷ್ಯನ ಜ್ಞಾನವು ಪ್ರಕಟಗೊಳ್ಳುವುದೇ ಅವನ ಭಾಷೆಯಿಂದ ಅಲ್ಲವೆ? ಒಳ್ಳೆಯ ಚಹ ತುಂಬಿರುವ ಬಡಿಸುಪಾತ್ರೆಯೊಂದರ ಹೊರಕೊಳವೆ ಕಿತ್ತು ಹೋದರೆ ಹೇಗೋ, ಹಾಗೆಯೇ, ವ್ಯಕ್ತಿಯಲ್ಲಿ ಭಾಷಾ ಸಾಮರ್ಥ್ಯ ಇಲ್ಲವೆಂದರೆ, ಅವನ/ಅವಳ ಜ್ಞಾನವು, ಆ ಕೊಳವೆ ಮುರಿದ ಪಾತ್ರೆಯಲ್ಲಿನ ಚಹಾದಂತೆ ವ್ಯರ್ಥವಾಗುತ್ತದೆ. ಸರ್ಕಾರ, ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರು ಈ ವಿಷಯದಲ್ಲಿ ಕೂಡಲೇ ಎಚ್ಚೆತ್ತುಕೊಳ್ಳಬೇಕು.
Like us!
Follow us!