ದ್ವಿನಯನ ದೃಷ್ಟಿ ಎರಡೂ ಕಣ್ಣುಗಳನ್ನು ಬಳಸಿಕೊಳ್ಳುವ ದೃಷ್ಟಿ. ನಮ್ಮ ಮೆದುಳು ಎರಡು ಬೇರೆ ಬೇರೆ ಬಿಂಬಗಳಿಂದ ಮೂರು ಆಯಾಮಗಳ, ಏಕೀಭವಿಸಿದ ನೋಟವನ್ನು ನಿರ್ಮಿಸುತ್ತದೆ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಜೋಡಿಕೊಳವೆ ದೂರದರ್ಶಕ – ಎರಡು ಕಣ್ಣುಗಳಿಗೂ ಒಂದೊಂದು ನೋಡುಕೊಳವೆಯನ್ನು ನೀಡಿ, ದೂರದಲ್ಲಿರುವ ವಸ್ತುಗಳು ದೊಡ್ಡದಾಗಿ ಮತ್ತು ಸ್ಪಷ್ಟವಾಗಿ ಕಾಣುವಂತೆ ಮಾಡುವ ದೃಷ್ಟಿವಿಜ್ಞಾನದ ಒಂದು ಉಪಕರಣ.
ದ್ವಿಪದೋಕ್ತಿ ಪ್ರಮೇಯ – ಎರಡು ಚರಾಕ್ಷರಗಳಿರುವ ಗಣಿತೋಕ್ತಿ ಅಥವಾ ದ್ವಿಪದೋಕ್ತಿಯನ್ನು ವಿಸ್ತರಿಸುವಾಗ ಬಳಸುವ ನಿಯಮ.
ಜೀವಿಸೂಸಿತ ಪ್ರಕಾಶ – ಜೀವಿಗಳು ಹೊರಸೂಸುವ ತಾಪರಹಿತ ಬೆಳಕು. ಮಿಂಚುಹುಳುಗಳು, ಬ್ಯಾಕ್ಟೀರಿಯಾ, ಅಣಬೆಗಳು ಮತ್ತು ಸಮುದ್ರದಾಳದಲ್ಲಿರುವ ಅನೇಕ ಮೀನುಗಳು ಇಂತಹ ಬೆಳಕನ್ನು ಹೊರಸೂಸುತ್ತವೆ.
ಜೈವಿಕ ಭೌತಶಾಸ್ತ್ರ ಜೀವಶಾಸ್ತ್ರೀಯ ವಿದ್ಯಮಾನ(ಆಗುಹೋಗುಗಳಿಗೆ) ಭೌತಶಾಸ್ತ್ರದ ನಿಯಮಗಳನ್ನು ಅನ್ವಯಿಸುವ ಜ್ಞಾನಶಿಸ್ತು.
ದ್ವಿಧ್ರುವ ವಿದ್ಯುದ್ವಾರ ವಿದ್ಯುತ್ ರಾಸಾಯನಿಕ ಕೋಶವೊಂದರಲ್ಲಿ ವಿದ್ಯುತ್ ಹರಿಯುವ ಒಂದು ಲೋಹದ ಪಟ್ಟಿ. ಆದರೆ ಇದನ್ನು ಆ ಕೋಶದ ಧನವಿದ್ಯುದ್ವಾರಕ್ಕಾಗಲೀ ಋಣವಿದ್ಯುದ್ವಾರಕ್ಕಾಗಲೀ ಜೋಡಿಸಿರುವುದಿಲ್ಲ. ಏಕೆಂದರೆ ವಿದ್ಯುತ್ ಹರಿಯುವಾಗ ಈ ಪಟ್ಟಿಯ ಒಂದು ಮುಖವು ಸಹಕಾರೀ ಋಣವಿದ್ಯುದ್ವಾರವಾಗಿ ಕೆಲಸ ಮಾಡಿದರೆ ಇನ್ನೊಂದು ಮುಖವು ಧನವಿದ್ಯುದ್ವಾರವಾಗಿ ಕೆಲಸ ಮಾಡುತ್ತದೆ.
ದ್ವಿಧ್ರುವ ಟ್ರ್ಯಾನ್ಸಿಸ್ಟರು _ ಎಲೆಕ್ಟ್ರಾನುಗಳು ಮತ್ತು ರಂಧ್ರಗಳು ತುಂಬ ಅವಶ್ಯಕವಾದ ಪಾತ್ರಗಳನ್ನು ನಿರ್ವಹಿಸುವ ಒಂದು ಟ್ರ್ಯಾನ್ಸಿಸ್ಟರು, ಉದಾಹರಣೆಗೆ ಒಂದು ಕೂಡುಸ್ಥಳ(ಜಂಕ್ಷನ್) ಟ್ರ್ಯಾನ್ಸಿಸ್ಟರು.
(ಪ್ರೆಸ್ನೆಲ್‌ರ) ಇಮ್ಮಡಿ ಪಟ್ಟಕ – ಬೆಳಕಿನ ಪ್ರವೇಶದ ಅಗತ್ಯವುಳ್ಳ ಪ್ರಯೋಗಗಳಲ್ಲಿ ಎರಡು ನಿಜಭಾಸ(ವರ್‍ಚುವಲ್) ಹಾಗೂ ಸಮಂಜಸ(ಕೊಹೆರೆಂಟ್) ಆಕರಗಳನ್ನು ಉತ್ಪತ್ತಿ ಮಾಡುವಂತಹ ದೊಡ್ಡ ಕೋನವುಳ್ಳ ಒಂದು ಗಾಜಿನ ಪಟ್ಟಕ. ಪ್ರಾನ್ಸಿನ ಕಟ್ಟಡ ಯಂತ್ರಜ್ಞಾನಿಯಾಗಿದ್ದ ಆಗಸ್ಟಿನ್ ಜೀನ್ ಫ್ರೆಸ್ನೆಲ್‌ರು(ಕಾಲ : ೧೦-೦೫-೧೭೮೮ ರಿಂದ ೧೪-೦೭-೧೮೨೭) ಇದನ್ನು ಕಂಡುಹಿಡಿದರು.
ಇಮ್ಮಡಿ ವಕ್ರೀಭವನ ಕ್ಯಾಲ್ಸೈಟ್‌ನಂತಹ ಕೆಲವು ವಸ್ತುಗಳ ಹರಳುಗಳ ಮೂಲಕ ಬೆಳಕು ಹಾಯುವಾಗ ಪರಸ್ಪರ ಲಂಬವಾಗಿರುವ ಎರಡು ದಿಕ್ಕುಗಳಲ್ಲಿ ಸೀಳಿಕೊಳ್ಳುತ್ತದೆ. ಇವುಗಳಲ್ಲಿ ಒಂದನ್ನು ಸಾಮಾನ್ಯ ಕಿರಣ ಮತ್ತು ಇನ್ನೊಂದನ್ನು ಅಸಾಮಾನ್ಯ ಕಿರಣ ಎನ್ನುತ್ತಾರೆ. ಇದೇ ಇಮ್ಮಡಿ ವಕ್ರೀಭವನ.
ದ್ವಿಸ್ಥಿರಸ್ಥಿತಿ(ಹೀಗೊಮ್ಮೆ ಹಾಗೊಮ್ಮೆ ಲಾಗ ಹೊಡೆವ) ವಿದ್ಯುನ್ಮಂಡಲ – ಇದು ಎರಡೆರಡು ಸ್ಥಿರಸ್ಥಿತಿಯುಳ್ಳ ವಿದ್ಯುನ್ಮಂಡಲ. ಸಾಮಾನ್ಯವಾಗಿ ಇದು ಒಮ್ಮೆ ಹೀಗೆ ಒಮ್ಮೆ ಹಾಗೆ ಲಾಗ ಹೊಡೆಯುವ ಬಹುಕಂಪಕವಾಗಿರುತ್ತದೆ. ಇದನ್ನು ಗಣಕಯಂತ್ರಗಳಲ್ಲಿ ೦ ಮತ್ತು ೧ (ಜೋಡಿ ಅಂಕಿಗಳು) ಗಳನ್ನು ಸಂಗ್ರಹಿಸಲು ಮತ್ತು ಎಣಿಸಲು ಬಳಸುತ್ತಾರೆ.