ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Forced convection

ಫೋರ್ಸ್ಡ್ ಕನ್ವೆಕ್ಷನ್ – ಬಲವಂತದ ಉಷ್ಣವರ್ಗಾವಣೆ – ಬಿಸಿಯಾಗಿರುವ ದ್ರವವನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ರೇಚಕ ( ಪಂಪು) ಅಥವಾ ಪಂಖಾದಿಂದ ತಳ್ಳಿ ಬಲವಂತವಾಗಿ ವರ್ಗಾಯಿಸುವ ಕ್ರಿಯೆ.

Forced oscillation

ಫೋರ್ಸ್ಡ್ ಆಸ್ಸಿಲೇಷನ್ – ಬಲವಂತದ ಆಂದೋಲನ – ಒಂದು ವಸ್ತು ಅಥವಾ ವ್ಯವಸ್ಥೆಯ ಸಹಜ ಆವರ್ತನದ್ದಲ್ಲದ ಆಂದೋಲನ. ಬಲವಂತದ ಆಂದೋಲನವನ್ನು ನಿಯತವಾದ ಬಾಹ್ಯ ಬಲದಿಂದ ಪ್ರೇರಿಸಬೇಕಾಗುತ್ತದೆ.

Formula 

ಫಾರ್ಮುಲಾ – ಸೂತ್ರ –  (ಅ)ರಸಾಯನ ಶಾಸ್ತ್ರದಲ್ಲಿ ಒಂದು ಸಂಯುಕ್ತವಸ್ತುವನ್ನು ಅಕ್ಷರ ರೂಪದಲ್ಲಿ ನಿರೂಪಿಸುವುದು. ‌ಆ ವಸ್ತುವಿನಲ್ಲಿರುವ ಪರಮಾಣುಗಳಿಗೆ ಸಂಕೇತವನ್ನು ನೀಡುವ ಮೂಲಕ ಅದರ ಸೂತ್ರವನ್ನು ಬರೆಯುತ್ತಾರೆ.

(ಆ). ಗಣಿತ ಮತ್ತು ಭೌತಶಾಸ್ತ್ರದಲ್ಲಿ ಒಂದು ನಿಯಮ ಅಥವಾ ಸಿದ್ಧಾಂತವನ್ನು ಬೀಜಗಣಿತದ ಸಂಕೇತಗಳಿಂದ ಸೂಚಿಸುವುದು. 

Fossil fuel

ಫಾಸಿಲ್ ಫ್ಯುಯೆಲ್ – ಪಳೆಯುಳಿಕೆ ಇಂಧನ – ಜನರು ಶಕ್ತಿಯ ಆಕರವಾಗಿ ಬಳಸುವ ಕಲ್ಲಿದ್ದಲು, ತೈಲ ಅಥವಾ ಜೈವಿಕ ( ಸಹಜ) ಅನಿಲದಂತಹ ಇಂಧನಗಳು.‌ ಇವುಗಳು ಜೀವಿಗಳ ಅವಶೇಷಗಳಿಂದ ರೂಪುಗೊಂಡಿರುತ್ತವೆ.  ಇವುಗಳಲ್ಲಿ ಅಧಿಕ ಪ್ರಮಾಣದ ಜಲಜನಕ ಅಥವಾ ಇಂಗಾಲ ಇರುತ್ತದೆ‌.

Foucault pendulum

ಫ್ಯೂಕೋ ಪೆಂಡ್ಯುಲಮ್  –  ಫ್ಯೂಕೋರ ಲೋಲಕ –  

ಭೂಮಿಯ ಸುತ್ತುವಿಕೆಯಿಂದಾಗಿ ನಿಧಾನವಾಗಿ ತಿರುಗುವ ಮೇಲ್ಮೈ ಹೊಂದಿರುವ ಒಂದು ಸರಳ ಲೋಲಕ ಇದು‌‌. 1851 ರಲ್ಲಿ ಫ್ರೆಂಚ್ ಭೌತವಿಜ್ಞಾನಿಯಾದ  ಜೀನ್ ಬರ್ನಾರ್ಡ್ ಲಿಯೋನ್ ಫ್ಯೂಕೋರು  ಇದನ್ನು ಕಂಡುಹಿಡಿದರು. ‌ಭೂಮಿಯ ಸುತ್ತುವಿಕೆಗೆ ಮೊದಲ ನೇರ ಸಾಕ್ಷಿ ಕೊಟ್ಟದ್ದು ಈ ಲೋಲಕ.

Fourier series

ಫೋರಿಯರ್ ಸೀರೀಸ್ – ಫೋರಿಯರ್ ಸರಣಿ – ನಿಯತಕಾಲಿಕ ಗುಣಕವನ್ನು ತ್ರಿಕೋನಮಿತಿಯ (ಟ್ರಿಗೋನೋಮೆಟ್ರಿ) ಗುಣಕಗಳಾಗಿ‌ ವಿಸ್ತರಿಸಿ ಬರೆಯುವುದು.  ಇದನ್ನು ಮೊದಲು‌ ಫ್ರಾನ್ಸ್ ದೇಶದ ಗಣಿತಜ್ಞರಾದ ಜೆ.ಬಿ.ಜೆ. ಫೋರಿಯರ್‌ ( 1768 – 1830) ಅವರು ಸಂಕೀರ್ಣ ಅಲೆಯ ಸುಸಂಬದ್ಧ ಅಂಗಗಳನ್ನು ಕಂಡುಹಿಡಿಯಲು ಬಳಸಿದರು.

Fourth dimension

ಫೋರ್ತ್ ಡೈಮೆನ್ಶನ್ – ನಾಲ್ಕನೆಯ ಆಯಾಮ   – ಅವಕಾಶ ಮತ್ತು ಸಮಯದ ನಿರಂತರತೆಯ ಒಂದು ಆಯಾಮ ಇದು. ಉದ್ದ, ಅಗಲ, ದಪ್ಪಗಳನ್ನು ಹೊರತು ಪಡಿಸಿದ ಒಂದು ಆಯಾಮ.‌

Frame of reference

ಫ್ರೇಮ್ ಆಫ್ ರೆಫರೆನ್ಸ್ – ಪರಾಮರ್ಶನ ಚೌಕಟ್ಟು – ಇದು ನಿರ್ದೇಶಕ ಅಕ್ಷರೇಖೆಗಳ ಒಂದು ಚೌಕಟ್ಟು. ಇದರ ಸಹಾಯದಿಂದ ಸಮಯದೊಂದಿಗೆ ಬದಲಾಗುವ ವಸ್ತುವಿನ ಸ್ಥಾನವನ್ನು ಗುರುತಿಸಬಹುದು. 

Fraunhofer lines 

ಫ್ರಾನ್ ಹಾಫರ್ ಲೈನ್ಸ್ – ಫ್ರಾನ್ ಹಾಫರ್ ಗೆರೆಗಳು – ಸೂರ್ಯನ ಬೆಳಕಿನಿಂದ ಉಂಟಾಗುವ ವರ್ಣಪಟಲದಲ್ಲಿನ ಗಾಢ ಕಪ್ಪು ಗೆರೆಗಳು. ಈ ಗೆರೆಗಳ ತರಂಗಾಂತರಗಳನ್ನು, ತರಂಗಾಂತರಗಳೊಂದಿಗೆ ಬದಲಾಗುವ ಪರಿಮಾಣಗಳನ್ನು ಗುರುತಿಸಲು ಪರಾಮರ್ಶನ‌ ಮಾನದಂಡಗಳಾಗಿ ಬಳಸುತ್ತಾರೆ. ‌ಉದಾಹರಣೆಗೆ, ವಕ್ರೀಭವನ ಸ್ಥಿರಾಂಕಗಳು.‌

Free energy

ಫ್ರೀ ಎನರ್ಜಿ – ಮುಕ್ತ ಶಕ್ತಿ – ಉಪಯುಕ್ತ ಕೆಲಸ ಮಾಡಲು ಒಂದು ವ್ಯವಸ್ಥೆಗೆ  ಇರುವ ಸಾಮರ್ಥ್ಯ.

Page 7 of 10

Kannada Sethu. All rights reserved.