ಈ ಲೇಖಕಿ/ಅಧ್ಯಾಪಕಿಯ ಗರಿಷ್ಠ ಕನ್ನಡ ಬಳಕೆಯ ಪ್ರಯತ್ನಗಳು ಕೆಲವೊಮ್ಮೆ ಮುಗುಳ್ನಗೆಯ ಸನ್ನಿವೇಶವನ್ನು ಸೃಷ್ಟಿ ಮಾಡ್ತವೆ. ಅಂತಹ ಒಂದು ಸನ್ನಿವೇಶಗಳನ್ನು ನಿಮ್ಮ ಜೊತೆ ಹಂಚ್ಕೊಳಕ್ಕೆ ಇಷ್ಟ ಪಡ್ತೀನಿ.

ಈಚೆಗೆ ನನ್ನ ಚಿಕ್ಕ ಮಗಳು ಪ್ರಣತಿಯೊಂದಿಗೆ ಐಸ್ಕ್ರೀಮ್ ಅಂಗಡಿಯೊಂದಕ್ಕೆ ಹೋಗಿದ್ದೆ (ಅಂದ ಹಾಗೆ ಐಸ್ಕ್ರೀಮ್ ಗೆ ‘ಮಂಜುಕೆನೆ’, ‘ಮಂಜಿನ ಮಿಠಾಯಿ’ ಮುಂತಾದ ಕನ್ನಡ ಪದಗಳಿದ್ದರೂ ಅವು ಕನ್ನಡಿಗರಲ್ಲಿ ಜನಪ್ರಿಯತೆ  ಪಡೆದಿಲ್ಲ). ಐಸ್ಕ್ರೀಮ್ ಕೊಂಡ ನಂತರ ಬೆಲೆಚೀಟಿ ( ಬಿಲ್) ಕೊಡಲು, ಆ ಅಂಗಡಿಯ ಚಿಕ್ಕ ವಯಸ್ಸಿನ ಹಣಕಾಸು ನಿರ್ವಾಹಕನು ನನ್ನ ದೂರವಾಣಿ ಸಂಖ್ಯೆ ಕೇಳಿದ. ನಾನು ‘ಒಂಬತ್ತು…ಒಂಬತ್ತು…ಎಂಟು …ಸೊನ್ನೆ…’ ಎಂದು ಕನ್ನಡದಲ್ಲಿ ಹೇಳಲು ಪ್ರಾರಂಭಿಸುತ್ತಿದ್ದಂತೆ –  ಸಾಮಾನ್ಯವಾಗಿ ಇಂಗ್ಲಿಷ್ ನಲ್ಲಿ ದೂರವಾಣಿ ಸಂಖ್ಯೆ ಹೇಳುವುದು ನಮ್ಮಲ್ಲಿ ಲೋಕಾರೂಢಿಯಾದ್ದರಿಂದ – ನನ್ನ ಮಗಳು, “ಅಮ್ಮಾ….ಅವ್ರಿಗೆ ಗೊತ್ತಾಗುತ್ತೋ ಇಲ್ವೋ ನೀ ಕನ್ನಡದಲ್ಲಿ ನಂಬರ್ ಹೇಳಿದ್ರೆ! ಯೂ ಆರ್ ಸೋ ಫನ್ನಿ” ಅಂದಳು. ತುಸು ಅಚ್ಚರಿ ಹಾಗೂ ಹಾಸ್ಯ ಎರಡೂ ಅವಳ ದನಿಯಲ್ಲಿದ್ದಂತೆ ನನಗೆ ಭಾಸವಾಯಿತು‌. ನಾನು ಕೂಡ ನಗುನಗುತ್ತಲೇ “ನಾಟ್ ಫನಿ.‌ ನಾನು ಕನ್ನಡಾಭಿಮಾನಿ” ಅಂದೆ. ಅವಳಿಗೆ ಮತ್ತಷ್ಟು ನಗು ಬಂತು. ಇದ್ದಕ್ಕಿದ್ದಂತೆ ಫನಿ‌ ಹಾಗೂ ಕನ್ನಡಾಭಿಮಾನಿ ಪ್ರಾಸ ಪದಗಳಾದ ಆ  ಘಳಿಗೆಯು,  ಮುಗುಳ್ನಗುವಿನ ಪ್ರಸಂಗವೊಂದನ್ನು ಅಲ್ಲಿ ಸೃಷ್ಟಿಸಿತು. ಓದಿದ ನೀವೂ ಮುಗುಳ್ನಗುತ್ತಿರುವಿರಿ ಎಂದು ನನ್ನ ಗುಮಾನಿ‌.