ಹೊರಗೆ ಊಟಕ್ಕೆ ಹೋದಾಗ ಅಥವಾ ಸಂತೋಷಕೂಟಗಳಲ್ಲಿ ಸಲಾಡ್ ( ಹೆಚ್ಚಿಟ್ಟ ಹಸಿತರಕಾರಿಗಳ ಖಾದ್ಯ) ಸಾಮಾನ್ಯವಾಗಿ ಇರುತ್ತದೆ ಅಲ್ಲವೆ? ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚು ಇರುವವರಂತೂ ಹುಡುಕಿ ತಿನ್ನುವ ತಿನಿಸು ಇದು.
ಹಾಂ, ಸಲಾಡ್ ಎಂಬ ಈ ಪದ ಕೇಳಿದಾಗಲೆಲ್ಲ ನನ್ನೊಳಗಿನ ಕನ್ನಡ ಕುತೂಹಲಿಗೆ ‘ಇದಕ್ಕೆ ಕನ್ನಡ ಸಂವಾದಿ ಪದ ಯಾವುದು?’ ಎಂಬ ಪ್ರಶ್ನೆ ಎದುರಾಗುತ್ತಿತ್ತು. ಸರಿ, ಉತ್ತರ ಹುಡುಕಲಾರಂಭಿಸಿದೆ.
‘ಸಲಾಡ್’ ಎಂಬ ಪದವು, ಪ್ರಾಚೀನ ಲ್ಯಾಟಿನ್ ಆಡುಭಾಷಾ ಪದಗಳಾದ ಸಾಲ್ (= ಉಪ್ಪು), ಸಲಾಟಾ (= ಉಪ್ಪು ಹಚ್ಚಿದ ತರಕಾರಿ, ಸೊಪ್ಪು/ ಉಪ್ಪು ನೀರಿನಲ್ಲಿ ನೆನೆಸಿದ ತರಕಾರಿ) ಎಂಬ ಪದಗಳಿಂದ ಹುಟ್ಟಿದೆ. ಹಳೆಯ ಫ್ರೆಂಚ್ ಭಾಷೆಯಲ್ಲಿ ಇದನ್ನು ‘ಸಲಾಡೆ’ ಎನ್ನುತ್ತಿದ್ದರು, ಹಾಗೂ ಹದಿನಾಲ್ಕನೇ ಶತಮಾನದಿಂದ ಇಂಗ್ಲಿಷ್ ಭಾಷೆಯಲ್ಲಿ ಸಲಾಡ್/ ಸಾಲೆಟ್ ಎಂಬ ರೂಪದಲ್ಲಿ ಇದು ಬಳಕೆಯಾಗಲಾರಂಭಿಸಿತು. ಇಲ್ಲೂ ಸಹ ಈ ಪದಕ್ಕೆ ಉಪ್ಪು/ಎಣ್ಣೆ/ ಯಾವುದಾದರೂ ಮಸಾಲೆ ಸೇರಿಸಿ ತಯಾರಿಸಿದ ಹಸಿ ತರಕಾರಿ ಖಾದ್ಯ ಎಂಬ ಅರ್ಥವೇ ಇತ್ತು.
ಹಾಗಾದರೆ ಕನ್ನಡದಲ್ಲಿ ನಾವಿದಕ್ಕೆ ಏನನ್ನೋಣ? ನಮ್ಮಲ್ಲಿ ಅಂದರೆ ಕನ್ನಡ ನಾಡಿನ ಬೇರೆ ಬೇರೆ ಕಡೆಗಳಲ್ಲಿ ಕೋಸಂಬರಿ, ಪಚ್ಚಡಿ, ಹಸಿ, ಬಜ್ಜಿ, ಮೊಸರು ಬಜ್ಜಿ ….. ಮುಂತಾದ ಹೆಸರಿನ, ಬೇಯಿಸದೆ ಮಾಡುವ ಹಸಿ ತರಕಾರಿ ಖಾದ್ಯಗಳಿವೆ. ಆದರೆ ಇವೆಲ್ಲವೂ ಬಾಣಸುಗಳಿಂದ ಒಂದಿಷ್ಟು ಹೆಚ್ಚು ಕೆಲಸ ಬೇಡುವ ಪದಾರ್ಥಗಳು. ಸುಮ್ಮನೆ ಹೆಚ್ಚಿ ಉಪ್ಪು ಹಚ್ಚಿಟ್ಟ ತರಕಾರಿಗಳಲ್ಲ. ಹಾಗಾದರೆ ನಾವು ಸಲಾಡ್ ಎಂಬ ‘ಹಸಿ ತರಕಾರಿ ತಟ್ಟೆ’ ಗೆ ಯಾವ ಪದ ಬಳಸೋಣ? ಉಪ್ಪು + ತರಕಾರಿ = ಉಪ್ತರಕಾರಿ ಅನ್ನೋಣವೆ? ಬಳಕೆಗೆ ಕಷ್ಟವಾಗಬಹುದು ಇದು. ಉತ್ತರ್ಕಾರಿ, ಉತ್ತರಕಾರಿ ಎಂದು ಕೇಳಿಸಿಬಿಡಬಹುದು!! ಹಸಿಪಲ್ಲೆ, ಅಥವಾ ತರಕಾರಿ ತಟ್ಟೆ ಎಂದು ಬಳಸಬಹುದೇನೋ. ನಲ್ಮೆಯ ಕನ್ನಡ ಬಂಧುಗಳಾದ ನಿಮ್ಮ ಅನಿಸಿಕೆ ಏನು? ತಿಳಿಸುವಿರಲ್ಲ?
Like us!
Follow us!