ನಾನು ಮಂಗಳೂರಿನ ಕೆನರಾ ಶಾಲೆಯಲ್ಲಿ, ಮಾಧ್ಯಮಿಕ ಹಂತದಲ್ಲಿ ಓದುತ್ತಿದ್ದಾಗ ನಮಗೆ ‘ಸರೋಜಿನಿ ಟೀಚರ್’ ಎಂಬ ಕನ್ನಡ ಅಧ್ಯಾಪಕಿ ಇದ್ದರು. ಎತ್ತರಕ್ಕೆ, ಬೆಳ್ಳಗಿದ್ದು, ತುಸು ಸ್ಥೂಲ ಕಾಯದ, ದೊಡ್ಡ ಹಣೆಬೊಟ್ಟು ಇಡುತ್ತಿದ್ದವರು ಆಕೆ. ನಗುತ್ತಾ, ನಗಿಸುತ್ತಾ, ತಮಾಷೆಗೆ ಗದರುತ್ತಾ ಖುಷಿಖುಷಿ ಲಹರಿಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕಿ ಅವರು. ಅವರಿಂದ ಕಲಿತ ಸೌಂದರ್ಯ ಪ್ರಜ್ಞೆಯ ಮೊದಲ ಪಾಠ ಈಗಲೂ ನೆನಪಿದೆ ನನಗೆ.
ಒಂದು ದಿನ ಈ ಮೇಡಂ ಅವರು ನಮ್ಮನ್ನು ಅಂದರೆ ಎಂಟು-ಹತ್ತು ಜನ ವಿದ್ಯಾರ್ಥಿನಿಯರನ್ನು ಬೇರೆ ಶಾಲೆಯಲ್ಲಿ ನಡೆಯುತ್ತಿದ್ದ ಭಾಷಣ ಸ್ಪರ್ಧೆಗೆ ಕರೆದೊಯ್ಯುತ್ತಿದ್ದರು. ನಡೆಯುತ್ತಿದ್ದಾಗ ದಾರಿಯ ಪಕ್ಕದಲ್ಲಿದ್ದ ಮರವೊಂದರಿಂದ ಕೋಗಿಲೆ ಹಾಡಿದ ಸದ್ದು ಕೇಳಿಸಿತು. ಕೂವೂ….ಕೂವೂ…ಕೂವೂ..ಒಂದು ಕ್ಷಣ ಜಗತ್ತನ್ನೇ ಮರೆಸುವಷ್ಟು ಮಧುರವಾದ ಸ್ವರ ಅದು! ಮೇಡಂ “ನಿಲ್ಲಿ ಮಕ್ಕಳೆ ಒಂದು ನಿಮಿಷ. ಈಗ ಒಂದು ಶಬ್ಧ ಕೇಳಿತಲ್ಲ, ಅದು ಎಂಥದು? ಯಾರಿಗೆ ಕೇಳಿತು ಅದು? ಹೇಳಿ ನೋಡುವ?” ಎಂದು ತಮ್ಮ ಮಂಗಳೂರು ಶೈಲಿಯ ಕನ್ನಡದಲ್ಲಿ ಕೇಳಿದರು. ನಮ್ಮಲ್ಲಿ ಕೆಲವರು ಕೈಯೆತ್ತಿ “ಟೀಚರ್, ಅದು ಕೋಗಿಲೆ. ಕೂವೂ ಕೂವೂ ಅಂತ ಕೂಗಿದ್ದು” ಅಂದೆವು. ಆದರೆ ಇನ್ನು ಕೆಲವರು ಕೈಯನ್ನೂ ಎತ್ತಲಿಲ್ಲ, ಏನೂ ಹೇಳಲಿಲ್ಲ. ಆಗ ಮೇಡಂ ಅಂದರು ” ನೋಡಿ, ಯಾರಿಗೆ ಕೋಗಿಲೆ ಕೂಗಿದ್ದು ಕೇಳಿಸಿತೋ ಅವರಿಗೆ ಸಂಗೀತ ಪ್ರಜ್ಞೆ ಇದೆ ಎಂದು ಅರ್ಥ. ಇದೂ ಸಾ ಒಂದು ರೀತಿಯ ಪ್ರತಿಭೆ. ಅದು ಎಲ್ರಿಗೂ ಇರುದಿಲ್ಲ, ಕೆಲವರಿಗೆ ಮಾತ್ರ ಇರ್ತದೆ. ಇದನ್ನೆಲ್ಲ ನೀವು ದೊಡ್ಡವರಾದಾಗ ಸೌಂದರ್ಯ ಮೀಮಾಂಸೆ ಎಂಬ ವಿಷಯದಲ್ಲಿ ಕಲೀಲಿಕ್ಕುಂಟು, ಆಯ್ತಾ…” ಅಂದರು. ಅಂದರೆ ನಾವೆಲ್ಲರೂ ಒಂದೇ ವಾತಾವರಣದಲ್ಲಿ ಇದ್ದರೂ ನಮಗೆ ಕೇಳಿಸುತ್ತಿದ್ದುದು, ಕಾಣಿಸುತ್ತಿದ್ದುದು ಬೇರೆ ಬೇರೆ ಸಂಗತಿಗಳು!!! ಇದಕ್ಕೆಯೇ ಅಲ್ಲವೆ ಇದೇ ಲೋಕದಲ್ಲಿದ್ದರೂ ಕಲಾವಿದರಿಗೆ ಬೇರೆಯವರ ಗ್ರಹಿಕೆಗೆ ಬರದ ಸಂಗತಿಗಳು ಅರಿವಿಗೆ ಬರುವುದು! ಅಂದರೆ ಕೆಲವು ವ್ಯಕ್ತಿಗಳಲ್ಲಿ ಅಂತರ್ಗತವಾಗಿರುವ ಸೌಂದರ್ಯಾಸಕ್ತಿಯ ಬಗೆಗೆ, ಪ್ರಾಕೃತಿಕ ಸಂಗತಿಯೊಂದರ ಮೂಲಕ ನಮ್ಮ ಟೀಚರ್ ಎಷ್ಟು ಸರಳವಾಗಿ ಹೇಳಿಕೊಟ್ಟರಲ್ಲ! ಕೋಗಿಲೆ ಕೂಗಿದಾಗ ಈಗಲೂ ನಂಗೆ ಸರೋಜಿನಿ ಟೀಚರ್ ನೆನಪಾಗಿ ಮನಸ್ಸು ಅವರಿಗೊಮ್ಮೆ ನಮಿಸುತ್ತದೆ.
Like us!
Follow us!