ಕಲರ್ ಕ್ಯಾಪ್ಸಿಕಂ, ಬೀನ್ಸ್,, ಪಿಯರ್, ಪೋಮೊಗ್ರಾನೇಟ್, ಪಪಾಯ, ಲಿಚೀ, ಬಟರ್ ಫ್ರೂಟ್ …. ಕರ್ನಾಟಕದ ರಾಜಧಾನಿ ಬೆಂಗಳೂರಿನ ಹಣ್ಣು ತರಕಾರಿ ಮಳಿಗೆಗಳಿಗೆ ಹೋದರೆ ಕಿವಿಗೆ ಬೀಳುವ ಪದಗಳಿವು. ಹುರುಳಿಕಾಯಿ, ಚವುಳಿಕಾಯಿ, ದೊಣ್ಣೆಮೆಣಸು, ಪರಂಗಿ ಹಣ್ಣು, ಕಣ್ಗುಡ್ಡೆ ಕಾಯಿ, ಬೆಣ್ಣೆಹಣ್ಣು…ಈ ಕನ್ನಡ ಪದಗಳು ಕಿವಿಗೆ ಬೀಳುವುದು ತೀರಾ ಅಪರೂಪ. ಇದಕ್ಕೆ ಕಾರಣ ಏನಿರಬಹುದು ಎಂದು ಯೋಚಿಸಿದೆ. ಎರಡು ಕಾರಣಗಳಿವೆ ಅನ್ನಿಸಿತು.
1. ಬೆಂಗಳೂರಿನಲ್ಲಿ ಕನ್ನಡಿಗರಲ್ಲದೆ ಹಿಂದಿ, ಮಾರ್ವಾಡಿ, ತಮಿಳು, ತೆಲುಗು, ಮಲೆಯಾಳಿ ಮುಂತಾದ ಕನ್ನಡೇತರ ಭಾಷೆಗಳನ್ನು ಮಾತಾಡುವ ಜನರ ಸಂಖ್ಯೆ ಕೂಡ ಗಮನೀಯ ಪ್ರಮಾಣದಲ್ಲಿದೆ. ಹೀಗಾಗಿ ಅಂಗಡಿಗೆ ಬರುವ ಎಲ್ಲರಿಗೂ ಅರ್ಥವಾಗಲೆಂದು ಮಾರಾಟಗಾರರು ಈ ಪದಗಳನ್ನು ಬಳಸಬಹುದು ಹಾಗೂ ಇಂತಹ ಬಹುಭಾಷಿಕ ಗಿರಾಕಿಗಳ ಜೊತೆಗಿನ ಒಡನಾಟದಿಂದಲೂ ಅಂಗಡಿ ಮಾಲೀಕರು ತಮಗೆ ಗೊತ್ತಿರುವ ಸ್ಥಳೀಯ ತರಕಾರಿ-ಹಣ್ಣುಗಳ ಹೆಸರುಗಳಿಗೆ ಇರುವಂತಹ ಇಂಗ್ಲಿಷ್/ಹಿಂದಿ/ಕನ್ನಡೇತರ ಪದಗಳನ್ನು ಕಲಿಯುತ್ತಿರಬಹುದು.
2. ಜಾಗತೀಕರಣದ ನಂತರ ಪ್ರಪಂಚದೆಲ್ಲೆಡೆಯ ಹಣ್ಣು ತರಕಾರಿಗಳು ನಮ್ಮ ರಸ್ತೆಗಳಲ್ಲಿ ತಲೆಯೆತ್ತಿದ, ‘ಶಾಪಿಂಗ್ ಮಾಲ್’ ಎಂದು ಕರೆಯಲಾಗುವ ಬೃಹತ್ ಗಾತ್ರದ ಮಾರಾಟ ಮಳಿಗೆಗಳಿಗೆ ಬರಲಾರಂಭಿಸಿದ್ದರಿಂದ ಕಿವಿ ಪ್ರೂಟ್, ಡ್ರ್ಯಾಗನ್ ಫ್ರೂಟ್, ಝುಕಿನಿ, ಕಲರ್ಡ್ ಕ್ಯಾಪ್ಸಿಕಂ …..ಮುಂತಾದ ಹೊಸ ಹೊಸ ಪದಗಳ ಪರಿಚಯವು ಎಲ್ಲರಿಗೂ ಆಗಿರುವುದು. ಮಾಲ್ ಗಳಿಗೆ ಬರುವ ವಿದೇಶಿ ತರಕಾರಿ, ಹಣ್ಣುಗಳು ಚಿಕ್ಕಪುಟ್ಟ ತರಕಾರಿ ಅಂಗಡಿಗಳಿಗೂ ಬಂದಾಗ ಅವುಗಳ ಅಂತಾರಾಷ್ಟ್ರೀಯ ಹೆಸರುಗಳೂ ಸಹ ನಮ್ಮ ಆಡುನುಡಿಯಲ್ಲಿ ತಮ್ಮ ಮೂಲರೂಪದಲ್ಲೇ ಸೇರಿರಬಹುದು.
ಬದಲಾದ ಕಾಲ, ಬದಲಾದ ಕನ್ನಡ ಭಾಷೆ, ಬದಲಾದ ಹೆಸರುಗಳು! ಕಾಲರಾಯನಿಗೆ ನಮಸ್ಕಾರ!
Like us!
Follow us!