ಜರ್ಮನ್ ಸಿಲ್ವರ್ ( ನಿಕ್ಕಲ್ ಸಿಲ್ವರ್) – ಜರ್ಮನಿ ಬೆಳ್ಳಿ ( ತವರ ಬೆಳ್ಳಿ) – ತಾಮ್ರ, ಸತು ಮತ್ತು ತವರಗಳ ( ತುಂಬ ಸಲ 5: 2: 2 ಅನುಪಾತದಲ್ಲಿ ) ಒಂದು ಮಿಶ್ರಲೋಹ. ಇದು ಬೆಳ್ಳಿಯಂತೆಯೇ ಕಾಣಿಸುತ್ತದೆ. ಅಗ್ಗದ ಒಡವೆ, ಅಡಿಗೆ ಪಾತ್ರೆಗಳನ್ನು ಮಾಡಲು ಇದನ್ನು ಬಳಸುತ್ತಾರೆ, ಮತ್ತು ಬೆಳ್ಳಿ ಲೇಪನವಿರುವ ತಂತಿಗಳ ಆಧಾರಲೋಹವಾಗಿ ಬಳಸುತ್ತಾರೆ.
ಜಿಯೋಥರ್ಮಲ್ ಎನರ್ಜಿ – ಭೂಉಷ್ಣ ಶಕ್ತಿ – ಭೂಗರ್ಭದಲ್ಲಿರುವ ಉಷ್ಣತೆ. ಇದನ್ನು ಶಕ್ತಿಯ ಆಕರವಾಗಿ ಬಳಸಬಹುದು. ಜ್ವಾಲಾಮುಖಿಗಳು, ಬಿಸಿನೀರಿನ ಬುಗ್ಗೆಗಳು, ಚಿಮ್ಮುತ್ತಿರುವ ಬಿಸಿನೀರಿನ ಒರತೆಗಳು, ಬಿಸಿ ನೀರಿನ ಗುಂಡಿಗಳು ಈ ಶಕ್ತಿಯ ಆಕರಗಳಾಗಿರುತ್ತವೆ.
ಜಿಯೋಸ್ಟೇಷನರಿ ಆರ್ಬಿಟ್ ಅಥವಾ ಜಿಯೋಸಂಕ್ರಾನಸ್ ಆರ್ಬಿಟ್ – ಭೂಸ್ಥಾಯಿ ಕಕ್ಷೆ ಅಥವಾ ಭೂಸಮಕಾಲಿಕ ಕಕ್ಷೆ – ಭೂಮಿಯು ತನ್ನ ಅಕ್ಷದ ಮೇಲೆ ಸುತ್ತಲು ತೆಗೆದುಕೊಳ್ಳುವಷ್ಟೇ ( 24 ಗಂಟೆ, 56 ನಿಮಿಷ ಮತ್ತು 4.1 ಸೆಕೆಂಡ್) ಸಮಯವನ್ನು ತೆಗೆದುಕೊಂಡು ಭೂಮಿಯನ್ನು ಸುತ್ತುವ ಕೃತಕ ಉಪಗ್ರಹದ ಕಕ್ಷಾಪಥ.
ಜಿಯೋಫಿಸಿಕ್ಸ್ – ಭೂ ಭೌತವಿಜ್ಞಾನ - ಭೂಮಿಯ ಹೊರಪದರ ಮತ್ತು ಒಳತಿರುಳನ್ನು ಅಧ್ಯಯನ ಮಾಡಲು ಗಣಿತ ಮತ್ತು ಭೌತಶಾಸ್ತ್ರದ ಸಿದ್ಧಾಂತಗಳನ್ನು ಅನ್ವಯಿಸುವ ಭೂವಿಜ್ಞಾನದ ಒಂದು ಶಾಖೆ ಇದು.
ಜಿಯೋಮೆಟ್ರಿಕ್ ಸೀರೀಸ್ – ಸಂಖ್ಯೆಗಳು ಅಥವಾ ಗಣಿತ ವಾಕ್ಯಗಳ ಒಂದು ಸರಣಿ. ಇದರಲ್ಲಿ ಪ್ರತಿ ಸಂಖ್ಯೆ ಮತ್ತು ಅದರ ಹಿಂದಿನ ಸಂಖ್ಯೆಗೆ ಇರುವ ಅನುಪಾತವು ಸ್ಥಿರವಾಗಿರುತ್ತದೆ. ಉದಾಹರಣೆಗೆ, 1, 4, 16, 64, 156. ಈ ಸರಣಿಯ ಸರ್ವಸಾಮಾನ್ಯ ಅನುಪಾತ 4.
ಜಿಯೋಮೆಟ್ರಿಕ್ ಆವರೇಜ್ – ಜ್ಯಾಮಿತೀಯ ಸರಾಸರಿ – n ಸಂಖ್ಯೆಗಳ ಒಂದು ಗಣದ ಜ್ಯಾಮಿತೀಯ ಸರಾಸರಿ ಅಂದರೆ ಅವುಗಳ ಗುಣಲಬ್ಧದ n ನೇ ಘಾತ.
ಜಿಯೋಮೆಟ್ರಿಕಲ್ ರಿಸಾಲ್ವಿಂಗ್ ಪವರ್ – ಜ್ಯಾಮಿತೀಯ ವಿಂಗಡಣಾ ಸಾಮರ್ಥ್ಯ - ಒಂದು ಸೂಕ್ಷ್ಮ ದರ್ಶಕ ಅಥವಾ ದೂರದರ್ಶಕಕ್ಕೆ ಇರುವ ಒಂದು ಸಾಮರ್ಥ್ಯ ಇದು ; ಎರಡು ತುಂಬ ಹತ್ತಿರ ಇರುವ ಬೇರೆ ಬೇರೆ ವಸ್ತುಗಳನ್ನು ಎರಡು ಪ್ರತ್ಯೇಕ ವಸ್ತುಗಳಾಗಿ ತೋರಿಸುವ ಸಾಮರ್ಥ್ಯ.
ಜಿಯೋಮೆಟ್ರಿಕಲ್ ಆಪ್ಟಿಕ್ಸ್ – ಜ್ಯಾಮಿತೀಯ ದೃಶ್ಯಬೆಳಕು ವಿಜ್ಞಾನ – ದೃಶ್ಯಬೆಳಕು ವಿಜ್ಞಾನದ (optics) ಒಂದು ಶಾಖೆ ಇದು. ಬೆಳಕು ಸರಳರೇಖೆಯಲ್ಲಿ ಪ್ರಯಾಣಿಸುತ್ತದೆ ಎಂಬುದನ್ನು ತಳಹದಿ ಊಹೆಯಾಗಿ ಇರಿಸಿಕೊಂಡು ಬೆಳಕಿನ ಕಿರಣದ ಪ್ರತಿಫಲನ ಹಾಗೂ ವಕ್ರೀಭವನಗಳ ನಿಯಂತ್ರಣದ ಕುರಿತು ಚಿಂತನೆ ನಡೆಸುತ್ತದೆ.
ಜಿಯೋಡೆಸಿಕ್ ಲೈನ್ – ಭೂವಿಭಜನಾ (ರೇಖೆ) – ಬಾಗಿರುವ ಒಂದು ಮೇಲ್ಮೈ ಯಲ್ಲಿ ಎರಡು ಬಿಂದುಗಳಿಗಿರುವ ಅತ್ಯಂತ ಕಡಿಮೆ (ಕನಿಷ್ಠ) ಅಂತರ.
ಜೆನರೇಟರ್ – ವಿದ್ಯದುತ್ಪಾದಕ – ಯಂತ್ರಚಲನ ಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ಒಂದು ದೊಡ್ಡ ಗಾತ್ರದ ಯಂತ್ರ.