ದಕ್ಷಿಣ ಕನ್ನಡದಲ್ಲಿ ಬೆಳೆದ ನನ್ನಂಥವರಿಗೆ ‘ಬಟಾಟೆ ಗಸಿ’ ತುಂಬ ಪರಿಚಿತ ಪದ. ತೆಂಗಿನಕಾಯಿ ತುರಿಯನ್ನು ರುಬ್ಬಿ‌ ಹಾಕಿ ಮಾಡುವ ಸಾಗುವಿನಂತಹ ಖಾದ್ಯ ಅದು. ಉಡುಪಿ ಶೈಲಿಯ ಅಡುಗೆಗಳಲ್ಲಿ ‘ಬಟಾಟೆ ಬಾಜಿ'( ಒಂದು ರೀತಿಯ ಪಲ್ಯ) ಸಹ ಒಂದು ಪ್ರಸಿದ್ಧ ವ್ಯಂಜನ.‌

ತುಂಬ ಸ್ವಾರಸ್ಯಕರವಾದ ವಿಷಯ ಅಂದರೆ ‘ಬಟಾಟ’ ಎಂಬ ಪೋರ್ಚುಗೀಸ್ ಭಾಷೆಯ ಪದವು, ಭಾರತದ ಪಶ್ಚಿಮ ಕರಾವಳಿಯ ರಾಜ್ಯಗಳಲ್ಲಿ, ಅಂದರೆ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ, ‘ಬಟಾಟೆ’ ಆಗಿ ಉಳಿದಿದೆ. ಕರ್ನಾಟಕದ ಉಳಿದ ಭಾಗಗಳಲ್ಲಿ ಇದಕ್ಕೆ ಆಲೂಗಡ್ಡೆ ಅನ್ನುತ್ತಾರೆ ಅಲ್ಲವೆ?

ಇದಕ್ಕೆ ‘ಬಟಾಟೆ’ ಎಂಬ ಹೆಸರು ಏಕೆ ಬಂತು ಎಂದು ನೋಡೋಣ. 16ನೇ ಶತಮಾನದಲ್ಲಿ ನಮ್ಮ ದೇಶಕ್ಕೆ ಬಂದ ಪೋರ್ಚುಗೀಸ್ ವ್ಯಾಪಾರಿ/ವಸಾಹತುಕಾರರಿಂದ ದಕ್ಷಿಣ ಅಮೇರಿಕಾದ ಈ ತರಕಾರಿಯು  ಭಾರತಕ್ಕೆ ಪರಿಚಿತವಾಯಿತು.

ಇಂಗ್ಲಿಷ್ ಭಾಷೆಯಲ್ಲಿ ಆಲೂಗಡ್ಡೆಗೆ ಪೊಟೇಟೊ ಅನ್ನುತ್ತಾರಲ್ಲವೆ? ಈ ತರಕಾರಿಯನ್ನು ಆಂಡೀಸ್ ಪರ್ವತದ ಸಾಲಿನ ತಪ್ಪಲ ಪ್ರದೇಶದ ಪೆರು ಹಾಗೂ ಬೊಲಿವಿಯಾ ದೇಶದವರು 8000 ವರ್ಷಗಳ ಹಿಂದೆಯೇ ಬಳಸುತ್ತಿದ್ದರು! ಅಲ್ಲಿಯೇ ಮೂಲತಃ ಹುಟ್ಟಿದ್ದ ಗಿಡ ಅದು‌. ಪೆರುವಿನ ಕೆಚುವಾ ಭಾಷೆಯಲ್ಲಿ‌ ಇದಕ್ಕೆ ಪಾಪಾ ಎಂಬ ಹೆಸರಿತ್ತು. ಪೆರುವಿನ  ಮೇಲೆ ಆಕ್ರಮಣ ಮಾಡಿದ ಸ್ಪೇನ್ ದೇಶದವರು, ಈ ಗೆಡ್ಡೆಯನ್ನು ತಮಗೆ ಮುಂಚೆ ಪರಿಚಿತವಿದ್ದ  ಸಿಹಿಗೆಣಸಿನ ಒಂದು‌ ಪ್ರಭೇದ ಎಂದು ತಪ್ಪಾಗಿ ತಿಳಿದುಕೊಂಡರು.‌ ವಾಸ್ತವವಾಗಿ ಆಲೂಗಡ್ಡೆ ಮತ್ತು ಸಿಹಿಗೆಣಸು ಎರಡೂ ಬೇರೆ ಬೇರೆ ಪ್ರಭೇದದ ಸಸ್ಯಗಳು. ಇರಲಿ.‌ ಕೆರೆಬಿಯನ್ ಪ್ರದೇಶದ ಟೈನೊ ಭಾಷಿಗರು ಸಿಹಿ ಗೆಣಸಿಗೆ ಬಟಾಟ ಎನ್ನುತ್ತಿದ್ದರು. ಸ್ಪೇನ್ ನವರು ಈ ಎರಡೂ ಪದಗಳನ್ನು ಸೇರಿಸಿ ಆಲೂಗಡ್ಡೆಗೆ ಪಟಾಟ ಎಂದು ಹೆಸರಿಟ್ಟರು! ಪೋರ್ಚುಗೀಸ್ ಭಾಷೆಯಲ್ಲಿ ಅದು ‘ಬಟಾಟ’ ಆಯಿತು. ಹದಿನಾರನೆಯ ಶತಮಾನದಲ್ಲಿ ಅದು ಇಂಗ್ಲಿಷ್ ಗೆ ಬಂದಾಗ ಪೊಟೇಟೊ ಆಯಿತು!   

ಈ ತರಕಾರಿಗೆ ಹಿಂದಿ, ಬಂಗಾಳಿ ಮುಂತಾದ ಉತ್ತರ ಭಾರತೀಯ ಭಾಷೆಗಳಲ್ಲಿ ‘ಆಲೂ’ ಎಂಬ ಹೆಸರಿದೆ. ಈ ಆಲೂ ಪದದ ಮೂಲ ಅಂದರೆ, ಸಂಸ್ಕೃತದ ‘ಆಲೂಕ’ ಹಾಗೂ ಪ್ರಾಕೃತ ಭಾಷೆಯ ‘ಆಲೂಗ’ ಪದಗಳು. ಹೀಗೆಂದರೆ ನೆಲದೊಳಗೆ ಬೇರುಗಳಲ್ಲಿ ಬೆಳೆಯುವ ಗಡ್ಡೆ ಎಂದು ಅರ್ಥ.

ಇನ್ನು ನಮ್ಮ ತಮಿಳು ಮತ್ತು‌ ಮಲಯಾಳಿ ಸಹೋದರರು ಈ ಜನಪ್ರಿಯ ತರಕಾರಿಯನ್ನು ‘ಉರುಳೈ ಕೆಝಂಗು’ ಎಂದು ಕರೆಯುತ್ತಾರೆ ಉರುಳುವ ಗಡ್ಡೆ ಎಂದು ಅರ್ಥ – ಇಂದು ಗುಂಡಗಿದ್ದು ಚೆಂಡಿನಂತೆ ಉರುಳುತ್ತಲ್ಲ, ಅದಕ್ಕಾಗಿ ಈ ಪದ ಬಳಕೆ ಇರಬಹುದು ಅನ್ನಿಸುತ್ತೆ.

ಇನ್ನು ಆಂಧ್ರದ ನಮ್ಮ ಸೋದರ ಸೋದರಿಯರು ಇದಕ್ಕಿಟ್ಟಿರುವ ಮೂರು ಮೂರು ಹೆಸರುಗಳಂತೂ  ಇನ್ನೂ ವಿಶೇಷ. ಉತ್ತರಾಂಧ್ರದಲ್ಲಿ ಇದನ್ನು ‘ಬಂಗಾಳ ದುಂಪ’ ( ದುಂಪ ಎಂದರೆ ತೆಲುಗು ಭಾಷೆಯಲ್ಲಿ ನೆಲದೊಳಗೆ ಬೆಳೆಯುವ ಗಡ್ಡೆ ಎಂದು ಅರ್ಥ) ಎನ್ನುತ್ತಾರೆ. ಒರಿಸ್ಸಾ ರಾಜ್ಯವು ರೂಪುಗೊಳ್ಳುವ ಮುಂಚೆ ಬ್ರಿಟಿಷರ ಕಾಲದಲ್ಲಿ ಆಂಧ್ರ ನಾಡು ಬಂಗಾಳ ಪ್ರಾಂತ್ಯಕ್ಕೆ ಸೇರಿತ್ತು. ‌ಬಂಗಾಳದಿಂದ ಪರಿಚಿತವಾದದ್ದಕ್ಕಾಗಿ ಇದು ಬಂಗಾಳ ದುಂಪ. ಇನ್ನು ಕರ್ನಾಟಕದ ಗಡಿಭಾಗದ ಆಂಧ್ರದ ಭಾಗಗಳಲ್ಲಿ ಇದನ್ನು ಆಲೂಗಡ್ಡ ಎನ್ನುತ್ತಾರೆ ಹಾಗೂ ತಮಿಳುನಾಡಿನ ಗಡಿಗೆ ಹತ್ತಿರ ಇರುವ ಭಾಗಗಳಲ್ಲಿ ಇದನ್ನು ಉರುಳ ಗಡ್ಡ ಎನ್ನುತ್ತಾರೆ (ತಮಿಳಿನ ಉರುಳೈ ಕೆಝಂಗು ಪದವನ್ನು ನೆನಪಿಸಿಕೊಳ್ಳಬೇಕು)!. 

ಅಬ್ಬ! ಈ ಹೆಸರಿನ ಉದ್ದಚರಿತೆ ಹೇಗೇ ಇರಲಿ, ಹೊರಗಿಂದ ಬಂದು ತನ್ನ ರುಚಿ ಹಾಗೂ (ಅನೇಕ ಬಗೆಯ ಅಡುಗೆಯ ಕ್ರಮಗಳಿಗೆ ಒದಗುವ) ಬಹುಮುಖೀ ಸಾಮರ್ಥ್ಯದಿಂದ ಈ ಬಟಾಟೆ/ ಆಲೂಗಡ್ಡೆಯು  ನಮ್ಮ  ಭಾರತದ ಅಡುಗೆ ಮನೆಗಳಲ್ಲಿ ರಾಜತರಕಾರಿ ಆಗಿಬಿಟ್ಟಿದೆ ಅಲ್ವಾ! ಜೈ ಬಟಾಟ! ಜೈ ಆಲೂ(ಗಡ್ಡೆ)!!