ಮಂಗಳೂರಿನ ನನ್ನ ಬಾಲ್ಯದ ಅನೇಕ ಸ್ಮರಣೀಯ ಸಂಗತಿಗಳಲ್ಲಿ ‘ಚೂಡಿ’ ಒಂದು. ಏನಿದು ಚೂಡಿ? ಹೇಳ್ತೇನೆ ನಿಮ್ಗೆ …. ಆಯ್ತಾ?

ಕನ್ನಡ ನಾಡಿನ ಕರಾವಳಿಯ ಭಾಗಗಳಲ್ಲಿ ಗೌಡ ಸಾರಸ್ವತ ಬ್ರಾಹ್ಮಣರು ಎಂಬ ಕೊಂಕಣಿ ಮಾತಾಡುವ ಸಮುದಾಯ ನೆಲೆಸಿದೆ. ಮಂಗಳೂರಿನಲ್ಲಿ ಕೂಡ ಇರುವ ಈ ಜನರು ಕೊಂಕಣಿಯನ್ನು ಮನೆಯಲ್ಲೂ, ಕನ್ನಡ ಹಾಗೂ ತುಳು ಭಾಷೆಗಳನ್ನು ಹೊರ ಪ್ರಪಂಚದ ವ್ಯವಹಾರದಲ್ಲೂ ಬಳಸುತ್ತಾರೆ. ಈ ಮೂರು ಭಾಷೆಗಳಲ್ಲಿ, ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಲೀಲಾಜಾಲವಾಗಿ ಜಿಗಿಯುತ್ತಾ, ಸ್ಥಳೀಯ ತುಳು ಹಾಗೂ ಕನ್ನಡ ಭಾಷಿಗರೊಂದಿಗೆ ಆರಾಮವಾಗಿ ಒಡನಾಡುತ್ತಾರೆ‌. ಇವರ ಮನೆಗಳಲ್ಲಿ ಶ್ರಾವಣ ಮಾಸದಲ್ಲಿ, ತಮ್ಮ  ಮನೆಗೆ ಬಂದ ಮುತ್ತೈದೆಯರಿಗೆ ‘ಚೂಡಿ’ ಕೊಡುವ ಹಾಗೂ ತಾವೂ ಮುಡಿಯುವ ಸಂಪ್ರದಾಯ ಇದೆ.

ಚೂಡಿ ಎಂದರೆ ಏನು?  ಶ್ರಾವಣ ಮಾಸದಲ್ಲಿ ದೇವರ ಪೂಜೆಗೆ ಬಳಸುವ ಹಾಗೂ ಪವಿತ್ರ ಎಂದು ಭಾವಿಸಲಾಗುವ ಗರಿಕೆ ಹುಲ್ಲು, ಶಂಖಪುಷ್ಪ, ರತ್ನಗಂಧಿ, ಪಾರಿಜಾತ ಮುಂತಾದವುಗಳನ್ನು, ಮೇಲೆ ಹೇಳಿದ ಸಮುದಾಯದ ಮಹಿಳೆಯರು ಹುಡುಕಿ ಸಂಗ್ರಹಿಸಿ, ಸುಮಾರು ಕಿತ್ತಳೆ ಹಣ್ಣಿನ ಗಾತ್ರದಲ್ಲಿ ಒಂದು ಕಟ್ಟಾಗಿ ಕಟ್ಟುತ್ತಾರೆ. ಈ ರೀತಿಯ 8-10-15  ಕಟ್ಟುಗಳನ್ನು ಮಾಡಿ  ‌ದೇವರ ಮುಂದೆ ಇಟ್ಟು ಪೂಜೆ ಮಾಡಿ, ಭಗವಂತನಿಗೆ ಅರ್ಪಿಸಿ, ನಂತರ ಪ್ರಸಾದವಾಗಿ ತಾವು ತಲೆಯಲ್ಲಿ ಮುಡಿಯುತ್ತಾರೆ ಹಾಗೂ ಮನೆಗೆ ಬಂದ ಹೆಂಗಸರಿಗೆ, ಹುಡುಗಿಯರಿಗೆ ಕೊಡುತ್ತಾರೆ ;  ತೆಗೆದುಕೊಂಡವರು ಸಹ ಅದೇ ಪೂಜ್ಯ ಭಾವದಿಂದ ಚೂಡಿಯನ್ನು ಮುಡಿಯುತ್ತಾರೆ. 

ಚೂಡಿ ಎಂಬ ಪದ ‘ಸೂಡು’ ಎಂಬ ದ್ರಾವಿಡ ಭಾಷಾ ಪದಮೂಲದಿಂದ ಬಂದಿರಬೇಕು. ಸೂಡು ಎಂದರೆ ಹೂವು ಮುಂತಾದುವನ್ನು ಮುಡಿ, ಇಟ್ಟುಕೊಳ್ಳುವುದು ಎಂದು ಅರ್ಥ. ಜೊತೆಗೆ, ‘ಸೂಡಿ’ ಎಂಬ ಪದಕ್ಕೆ ತಲೆಯ ಕೂದಲನ್ನು ಸೇರಿಸಿ ಕಾಕುವ ಗಂಟು ಅನ್ನುವ ಅರ್ಥವೂ ಇದೆ.

 ಹಾಂ …… ಮನೆಯ ಹಿತ್ತಿಲು, ರಸ್ತೆಗಳಲ್ಲಿ ಹುಲ್ಲು-ಹೂವುಗಳನ್ನು  ಹುಡುಕುತ್ತಾ, ಸಂಗ್ರಹಿಸುತ್ತಾ ಓಡಾಡುವ ಹೆಂಗಸರು …….  ‘ಚೂಡಿ ಕಟ್ಲಿಕ್ಕೆ ಬೇಕಲ್ವಾ’, ‘ಇವತ್ತು ಗರಿಕೆ ಹೆಚ್ಚು ಸಿಗ್ಲೇ ಇಲ್ಲ ಮಾರಾಯ್ತಿ’,  ‘ನಿಮ್ಮ‌ ಮನೆಯಲ್ಲಿ ಪಾರಿಜಾತ ಆಗಿದೆಯಾ, ಮತ್ತೆ ರತ್ನಗಂಧಿ ಉಂಟನಾ’….. ಎಂದು ಪರಸ್ಪರ  ಆಡಿಕೊಳ್ಳುತ್ತಿದ್ದ ಮಾತುಗಳು …. ನನ್ನ ಸಹಪಾಠಿಗಳ ತಲೆಯಲ್ಲಿ, ಸುತ್ತಮುತ್ತಲ ಹೆಂಗಸರ ‘ಸೂಡಿಗಳಲ್ಲಿ’ ಸುಂದರವಾಗಿ, ಮುದ್ದಾಗಿ ಕುಳಿತಿರುತ್ತಿದ್ದ ‘ಚೂಡಿ’ಗಳು ……. ನನ್ನ ಬಾಲ್ಯದ ನೆನಪಿನ ಖಜಾನೆಯಲ್ಲಿ ಭದ್ರವಾಗಿವೆ. ಇಂದಿಗೂ ಸಹ ಶ್ರಾವಣ ಮಾಸ ಬಂದು ನೆಲವೆಲ್ಲ ಹಸಿರಾದಾಗ ಆ ‘ಚೂಡಿ’ ಗಳ ನೆನಪು ಬಂದು ಕಣ್ಣು ಹನಿಗೂಡುತ್ತದೆ. ಬೇಂದ್ರೆಯವರ ಸಣ್ಣ ಸೋಮವಾರ  ಕವಿತೆಯ ‘ಎಲ್ಲಿ ಹೋದಾವೋ ಗೆಳೆಯ ಆ ಕಾಲ’ ಎಂದು ನಿಡುಸುಯ್ಯುವಂತಾಗುತ್ತದೆ.