ಸಭೆ-ಸಮಾರಂಭಗಳು, ಔತಣಕೂಟಗಳ ಮಾತು ಬಂದಾಗ ಅಥವಾ ಮನೆಯಲ್ಲಿ ನಿತ್ಯವೂ ಅಡಿಗೆ ಮಾಡುವುದು ಕಷ್ಟ ಎಂಬ ಸಂದರ್ಭ ಇದ್ದಾಗ,  ‘ಕೇಟರಿಂಗ್ ಗೆ ಹೇಳ್ಬಿಟ್ಟಿದ್ದೀವಪ್ಪ, ಅವ್ರೇ ಅಡಿಗೆ ಮಾಡಿ ತಂದು ಬಡಿಸ್ತಾರೆ, ಉಳಿದದ್ದನ್ನ ತಗೊಂಡು ಹೋಗ್ತಾರೆ, ನಮಗೆ ಯಾವ್ದೂ ತಲೆನೋವಿಲ್ಲ ಸದ್ಯ’, “ನಮ್ಮ ಪರಿಚಯದ ಕೇಟರಿಂಗ್ ನವ್ರಿದಾರೆ, ಫೋನ್ ನಂಬರ್ ಬೇಕಾ?”, “ಅಯ್ಯೋ, ಬೆಳಿಬೆಳಿಗ್ಗೆ ಆಫೀಸ್ಗೆ ಓಡುವಾಗ ತಿಂಡಿ ಮಾಡೋದು ಕಷ್ಟ. ಕೇಟರಿಂಗ್ನವ್ರಿಗೆ ಹೇಳಿದೀನಿ. ತಂದ್ಕೊಡ್ತಾರೆ” …. ಈ ತರಹದ ಮಾತುಗಳನ್ನು ನಾವು ಕೇಳುತ್ತಿರುತ್ತೇವೆ, ಅಲ್ಲವೆ? ಈ ‘ಕೇಟರಿಂಗ್’ ಎಂಬ ಪದ ಕಿವಿಗೆ ಬಿದ್ದಾಗಲೆಲ್ಲ  “ಇದಕ್ಕೆ ಕನ್ನಡ ಪದ ಯಾವುದು? ಜನ ಯಾಕೆ ಕೇಟರಿಂಗ್, ಕ್ಯಾಟರಿಂಗ್ ಎಂಬ ಆಂಗ್ಲ ಪದಗಳನ್ನೇ ಬಳಸ್ತಾರೆ?” ಎಂದು ಯೋಚಿಸುತ್ತಿದ್ದೆ ನಾನು. 

ಹುಡುಕಿ ನೋಡಿದಾಗ ಈ ಪದಕ್ಕೆ ಸಂವಾದಿಯಾಗಿ,‌ “ಅಡುಗೆ ಸೇವೆ”, “ಆಹಾರ ಸರಬರಾಜು”, ಎಂಬ ಕನ್ನಡ ಪದಗುಚ್ಛಗಳಿವೆ  ಎಂದು ಗೊತ್ತಾಯಿತು. ಹಾಗೂ ‘ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 1990 ರಿಂದ ಈಚೆಗೆ ಈ ಸೇವೆ ಹೆಚ್ಚು ಪ್ರಚಲಿತವಾಯಿತು, ಅಮೆರಿಕಾ ದೇಶದ ಫಿಲಡೆಲ್ಫಿಯಾ ಎಂಬ ಸ್ಥಳದಲ್ಲಿ, 1813ರಷ್ಟು ಹಿಂದೆ(!), ರಾಬರ್ಟ್‌ ಬೋಗ್ಲೆ ಎಂಬ ಉದ್ಯಮಿಯೊಬ್ಬ, ಅನೌಪಚಾರಿಕ ಆಹಾರ ಸೇವೆಗೆ ಮೊಟ್ಟ ಮೊದಲ ಬಾರಿಗೆ ಒಂದು ಉದ್ಯಮದ ರೂಪ ಕೊಟ್ಟ’ ಎಂದು ಗೂಗಲಮ್ಮ ಹೇಳಿದಳು‌! ಇವನನ್ನು ‘ದ ಒರಿಜಿನೇಟರ್ ಆಫ್ ಕೇಟರಿಂಗ್ (ಆಹಾರಸೇವೆಯ ಆದ್ಯಪ್ರವರ್ತಕ)’ ಎನ್ನುತ್ತಾರಂತೆ!

ಹೌದೂ….ನಾವು ‘ಅಡುಗೆ ಸೇವೆ’, ‘ಆಹಾರ ಸೇವೆ’ ಎಂಬ ಕನ್ನಡ ಪದಗಳನ್ನು ಕೇಟರಿಂಗ್ ಪದಕ್ಕೆ ಸಂವಾದಿಯಾಗಿ ಬಳಸಬಹುದಲ್ಲ, ಅಳಿಲು ಸೇವೆ ಎಂದು ಆರಾಮವಾಗಿ ಬಳಸುವಂತೆ? ಏನಂತೀರಿ ಕನ್ನಡ ಬಂಧುಗಳೇ?