ಒಮ್ಮೆ ಸಮಾರಂಭವೊಂದಕ್ಕಾಗಿ ನನ್ನ ದೊಡ್ಡ ಮಗಳು ರಶ್ಮಿಗೆಂದು ಒಂದು ಸೀರೆ ಕೊಂಡಿದ್ದೆವು‌. ತಿಳಿಹಳದಿಗೆ ಹಸಿರು ಬಣ್ಣದ ಛಾಯೆ ಇದ್ದ ಸೀರೆ ಅದು‌. ಆದರೆ ಖಚಿತವಾಗಿ ಇದು ಯಾವ ಬಣ್ಣ ಎಂದು ಗುರುತಿಸಲು ನಮಗೆ  ಸಾಧ್ಯವಾಗಲಿಲ್ಲ. ನಾವು ಮನೆಯವರೆಲ್ಲ ‘ಇದು ಯಾವ ಬಣ್ಣ?… ಯಾವ ಬಣ್ಣ?’ ಎಂದು ಅನೇಕ ಸಲ ಯೋಚಿಸಿದರೂ ಅದಕ್ಕೆ ಒಂದು ಹೆಸರು ನೀಡಲಾಗದೆ ಸುಮ್ಮನಾಗಿಬಿಟ್ಟೆವು. ಆದರೆ ಅನಿರೀಕ್ಷಿತವಾಗಿ ನಮ್ಮ ಈ ಗೊಂದಲಕ್ಕೆ ಉತ್ತರ ಸಿಕ್ಕಿಬಿಟ್ಟಿತು ನೋಡಿ! ರಶ್ಮಿಯು ಸಮಾರಂಭವೊಂದಕ್ಕಾಗಿ‌ ಈ ಸೀರೆಯನ್ನು ಧರಿಸಿ ಹೋಗಿದ್ದಾಗ ಅವಳ ಸಹೋದ್ಯೋಗಿಯೊಬ್ಬರು “ಅರೆ ರಶ್ಮಿ, ಇವತ್ತು ಶುಗರ್ ಕೇನ್ ಬಣ್ಣದ ಸೀರೆ ಉಟ್ಟಿದೀರಲ್ಲ..” ಅಂದರಂತೆ! ಹಾಂ, ಕಬ್ಬಿನ ಬಣ್ಣ! ಈಗ ನಮಗೆ ಆ ಸೀರೆಯ ಬಣ್ಣಕ್ಕೆ ಒಂದು ಹೆಸರು ಸಿಕ್ಕಿಬಿಟ್ಟಿತು! ಹುರ್ರೇ….!!

ಇದೇ ಗುಂಗಿನಲ್ಲಿ  ನಾವು ಕನ್ನಡಿಗರು ಬಣ್ಣಗಳನ್ನು ಗುರುತಿಸಲು ಬಳಸುವ ಪದ, ಪದಗುಚ್ಛಗಳನ್ನು ನೆನಪಿಸಿಕೊಳ್ಳಲಾರಂಭಿಸಿದೆ. ಜೇನು ಬಣ್ಣ,

ಮೆಂತ್ಯದ  ಬಣ್ಣ, ಗಿಣಿ ಹಸಿರು, ಯಾಲಕ್ಕಿ ಬಣ್ಣ, ಪಾದ್ರಿ ಹೂವಿನ ಬಣ್ಣ, ಈರುಳ್ಳಿ ಸಿಪ್ಪೆಯ ಬಣ್ಣ, ನಿಂಬೆಹಣ್ಣಿನ ಬಣ್ಣ, ಅಡಕೆ ಬಣ್ಣ, ಪಾಚಿ ಹಸಿರು, ಸರಸ್ವತಿ ಬಣ್ಣ, ಆನಂದ ಬಣ್ಣ, ಪರಮಾಚೀಟಿ ನೀಲಿ ….ಓಹ್ …ಬಣ್ಣಗಳನ್ನು ಗುರುತಿಸಲು ನಮ್ಮದೇ ಆದ ವಿಶಿಷ್ಟ, ದೇಸಿ ಪದಗಳಿವೆ ಅಲ್ಲವೆ…! ಎಷ್ಟೊಂದಿವೆ!!

ನನ್ನ ಪರಿಚಿತರೊಬ್ಬರು ಉಡುಗೊರೆಯಾಗಿದ್ದ ಕೊಟ್ಟಿದ್ದ ಒಂದು ಸೀರೆಯನ್ನುಟ್ಟು ಈ ನಡುವೆ ಒಂದು‌ ದಿನ ಕಾಲೇಜಿಗೆ ಹೋಗಿದ್ದೆ. ಕಂದು, ಮೆಹಂದಿ‌ ಹಸಿರು..ಎರಡೂ ಸೇರಿದ್ದ ಬಣ್ಣದ ಸೀರೆ ಅದು. ಏನು ಮಾಡಿದರೂ ನನಗೆ ಅದರ ಬಣ್ಣವನ್ನು ಖಚಿತವಾಗಿ ಗುರುತಿಸಲು ಸಾಧ್ಯ ಆಗಿರಲಿಲ್ಲ.‌ ನನ್ನ ಸ್ನೇಹಿತೆ ಹಾಗೂ ಸಹೋದ್ಯೋಗಿ ಹೇಮಲತಾ ಅವರು ಆ ಸೀರೆ ನೋಡಿದ ಕೂಡಲೇ “ಅರೆ….ಸೆಗಣಿ ಬಣ್ಣದ ಸೀರೆ! ಚೆನ್ನಾಗಿದೆ” ಅಂದರು! ನನಗೆ ಸೆಗಣಿ ಪದವನ್ನು ಹೀಗೆ ಬಣ್ಣವನ್ನು ಗುರುತಿಸಲು ಬಳಸುತ್ತಾರೆಂದು ಗೊತ್ತಿರಲಿಲ್ಲ. ನಾನು ಅವರ ಬಳಿ ಈ ಬಗ್ಗೆ ನನಗಾದ ಅಚ್ಚರಿಯನ್ನು ವ್ಯಕ್ತ ಪಡಿಸಿದಾಗ “ನಮ್ಮ ಕಡೆ ಹೀಗೆ ಬಳಸ್ತಾರೆ, ಸೆಗಣಿ ಬಣ್ಣ ಅಂತ. ನಂಗೆ ಆ ಬಣ್ಣ ಇಷ್ಟ” ಅಂದರು.

ಅಬ್ಬ! ಕನ್ನಡ ನಾಡಿನಲ್ಲಿ ಬಣ್ಣಗಳ ನಾಮಕರಣ ಎಷ್ಟು ಆಸಕ್ತಿದಾಯಕ ಅಲ್ವಾ. ನಿಮಗೆ ಯಾವುದಾದರೂ ಇಂತಹ ವಿಶೇಷ ಕನ್ನಡ ದೇಸಿ ಬಣ್ಣಗಳ ಹೆಸರು ಗೊತ್ತಿದ್ರೆ ನನ್ನೊಡನೆ ಹಂಚಿಕೊಳ್ತೀರಲ್ವಾ ನುಡಿಬಂಧುಗಳೇ….