ನಾನು ಕೆಲಸ ಮಾಡುವ ಕಾಲೇಜು ಒಂದು ವಿಜ್ಞಾನ ಕಾಲೇಜಾದ್ದರಿಂದ ಅಲ್ಲಿನ ಯಾವುದೇ ಒಂದು ನಿರ್ದಿಷ್ಟ ಕನ್ನಡ ತರಗತಿಯಲ್ಲಿ  ಹಲವು ವಿಧವಾದ ಬಿ.ಎಸ್ಸಿ.ಸಂಯೋಜನೆಗಳು ( combinations) ಇರುತ್ತವೆ.‌ ಈಚೆಗೆ ಒಂದು ತರಗತಿಯಲ್ಲಿ ಒಂದು  ಸಂಯೋಜನೆಯ ಅನೇಕ ವಿದ್ಯಾರ್ಥಿನಿಯರು ತರಗತಿಗೆ ಗೈರುಹಾಜರಾಗಿದ್ದರು‌.‌ ಬೇಸರವಾಯಿತು ನನಗೆ. “ಛೆ, ಸಾರಾಸಗಟು ಗೈರುಹಾಜರಿ, ಈ ಸಂಯೋಜನೇದು” ಅಂದೆ.‌ ಮಕ್ಕಳಿಗೆ ‘ಸಾರಾಸಗಟು’ ಪದದ ಅರ್ಥ ತಿಳಿಯಲಿಲ್ಲ ಎಂದು ತೋರುತ್ತೆ. “ಸಾರಾಸಗಟು…..ಏನೇ ಹಾಗಂದ್ರೆ? ಗೊತ್ತಾ ನಿಂಗೆ? …ಇಲ್ಲಪ್ಪ…..ಗೊತ್ತಿಲ್ಲ…”…ಎಂದೆಲ್ಲ ಮೆಲುದನಿಯಲ್ಲಿ ವಿದ್ಯಾರ್ಥಿನಿಯರು ಮಾತಾಡಿಕೊಳ್ಳುತ್ತಿದ್ದದ್ದು ನನ್ನ ಕಿವಿಗೆ ಬಿತ್ತು. “ಸಾರಾಸಾಗಟು ಅಂದ್ರೆ wholesale ಅಂತ ಅರ್ಥ ಮಕ್ಳೇ. Wholesale absent!” ಎಂದು ಇಂಗ್ಲಿಷ್ ಸಂವಾದಿ‌ ಪದ ಮತ್ತು ಅದರ ಅರ್ಥ ಹೇಳಿ, ತುಸು ಬೇಸರ ಮತ್ತು ತುಸು ಹಾಸ್ಯದಿಂದ “ನಾನು ನಿಮ್ಮ ಇಂಗ್ಲಿಷ್ ಅಧ್ಯಾಪಕಿ ಆಗಿದ್ರೆ ಚೆನ್ನಾಗಿತ್ತು. ಆವಾಗ ನಾನು ಬಳಸಿದ ಕನ್ನಡ ಪದಗಳ್ಗೆಲ್ಲಾ ಇಂಗ್ಲಿಷ್ ನಲ್ಲಿ ಅರ್ಥ ಹೇಳ್ಬೇಕಾಗಿರ್ಲಿಲ್ಲ. ಮುಂದಿನ ವರ್ಷದಿಂದ ನಿಮ್ಗೆ ಇಂಗ್ಲಿಷ್ ಪಾಠ ಮಾಡ್ತೀನಿ ನೋಡಿ. ಸಾಕು ಕನ್ನಡ ಪಾಠ ಮಾಡಿದ್ದು ನಾನು” ಅಂದೆ. ಮಕ್ಕಳು…”ಬೇಡಾ ಮ್ಯಾಮ್…. ಬೇಡಾ….ಆಗ ನೀವು ಎಲ್ಲಕ್ಕೂ ಕನ್ನಡದಲ್ಲಿ ಅರ್ಥ ಹೇಳ್ಬೇಕಾಗುತ್ತೆ!!!” ಅಂದರು.‌ ಒಂದು ನಿಮಿಷ ತರಗತಿ ನಗೆಗಡಲಲ್ಲಿ ತೇಲಿತು. ನಂತರ ಯೋಚಿಸಿದಾಗ, “ಅಯ್ಯೋ…ಪಾಪ‌‌.‌‌‌‌‌…. ಈ ವಿದ್ಯಾರ್ಥಿಗಳಿಗೆ ಕನ್ನಡವೂ ಸರಿಯಾಗಿ ಬರಲ್ಲ,  ಇಂಗ್ಲಿಷೂ ಸರಿಯಾಗಿ ಬರಲ್ಲ‌.‌ ನಾವು ಚಿಕ್ಕಂದಿನಿಂದ ಮಕ್ಕಳಿಗೆ ಭಾಷೆ ಕಲಿಸುವ ರೀತಿಯಲ್ಲಿ ಆಮೂಲಾಗ್ರ ಬದಲಾವಣೆ ಬೇಕಲ್ವಾ…” ಅನ್ನಿಸ್ತು.