ಇನ್ಕ್ಯುಬೇಟರ್ – ಕಾವು ಪೆಟ್ಟಿಗೆ – ತಾಪಸ್ಥಾಪಕವನ್ನು ಉಪಯೋಗಿಸಿಕೊಂಡು ಸ್ಥಿರವಾದ ಆಂತರಿಕ ಉಷ್ಣತೆಯನ್ನು ಕಾಪಾಡಿಕೊಂಡು ಬರುವ ಸಾಮರ್ಥ್ಯವನ್ನು ಹೊಂದಿರುವಂತೆ ವಿನ್ಯಾಸ ಮಾಡಿರುವ ಒಂದು ಪೆಟ್ಟಿಗೆ. ಕೋಳಿಮರಿಗಳನ್ನು ಬೆಳೆಸಲು, ಅವಧಿಗೆ ಮುನ್ನ ಹುಟ್ಟಿದ ಎಳೆಶಿಶುಗಳನ್ನು ಸುರಕ್ಷಿತವಾಗಿ ಬೆಳೆಸಲು ಮತ್ತು ಬ್ಯಾಕ್ಟೀರಿಯಾಶಾಸ್ತ್ರದಲ್ಲಿ ಇದನ್ಬು ಬಳಸುತ್ತಾರೆ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಇನ್‌ಡೆಟರ್ಮಿನೆನ್ಸಿ ಪ್ರಿನ್ಸಿಪ್ಲ್( ಅನ್ಸರ್ಟೈನಿಟಿ ಪ್ರಿನ್ಸಿಪ್ಲ್) – ಅನಿರ್ದಿಷ್ಟತಾ ಸಿದ್ಧಾಂತ ( ಹೈಸನ್ ಬರ್ಗ್ ರ ಅನಿಶ್ಚಿತತೆಯ ಸಿದ್ಧಾಂತ ) – ಒಂದು ಕಣದ ಸ್ಥಾನಬಿಂದು ಹಾಗೂ ದ್ರವ್ಯವೇಗವನ್ನು ಏಕಕಾಲಕ್ಕೆ ನಿಖರವಾಗಿ ಅರಿಯಲು ಸಾಧ್ಯ ಇಲ್ಲ ಎಂದು ಹೇಳುವ ಸಿದ್ಧಾಂತ ಇದು. ಇದನ್ನು 1927 ರಲ್ಲಿ ಇದನ್ನು ವರ್ನರ್ ಹೈಸನ್ಬರ್ಗ್( 1901-1976) ರು ಕಂಡುಹಿಡಿದರು.
ಇಂಡೆಕ್ಸ್ – ಸೂಚ್ಯಂಕ – ಆಯಾಮರಹಿತವಾದ ಒಂದು ಅಂಕಿ ಪರಿಮಾಣ. ಇದನ್ನು ಭೌತಶಾಸ್ತ್ರೀಯ ಪರಿಣಾಮವೊಂದರ ಪರಿಮಾಣವನ್ನು ಸೂಚಿಸಲು ಬಳಸುತ್ತಾರೆ. ಉದಾಹರಣೆಗೆ ಒಂದು ವಸ್ತುವಿನ ವಕ್ರೀಭವನ ಸೂಚ್ಯಂಕ.
ಇಂಡೆಕ್ಸ್ ಎರರ್( ಝೀರೋ ಎರರ್) – ಸೂಚ್ಯಾಂಕ ದೋಷ ಅಥವಾ ಶೂನ್ಯ ದೋಷ – ಅಳೆಯುವ ಉಪಕರಣವೊಂದರಲ್ಲಿ ಕಂಡುಬರುವ ಒಂದು ಅಳತೆಮಾನದ ದೋಷ ಇದು. ಇದರಲ್ಲಿ ಏನಾಗುತ್ತದೆಂದರೆ ಉಪಕರಣವು ಸೊನ್ನೆ ನಮೂದನ್ನು ತೋರಿಸಬೇಕಾದ ಕಡೆ ಈ ನಮೂದನ್ನು ತೋರಿಸುತ್ತದೆ.
ಇಂಡಿಕೇಟರ್ ಡಯಾಗ್ರಮ್ – ಸೂಚಕ ಚಿತ್ರ – ಒಂದು ಚಾಲಕಯಂತ್ರದ ಗುಂಡುಕಂಬ (ಸಿಲಿಂಡರ್)ದೊಳಗಿರುವ ಚಲಿಸುವ ಭಾಗವು( ಪಿಸ್ಟನ್) ರೇಖಿಸಿದ ರೇಖಾಕಾರದ ಚಿತ್ರ. ಈ ಚಿತ್ರವನ್ನು ಚಾಲಕಯಂತ್ರದ ಕಾರ್ಯದಕ್ಷತೆಯನ್ನು ಅಂದಾಜು ಮಾಡಲು ಬಳಸುತ್ತಾರೆ.
ಇಂಡಕ್ಟೆನ್ಸ್ – ವಿದ್ಯುತ್ ಪ್ರೇರಕತೆ – ಒಂದು ವಿದ್ಯುನ್ಮಂಡಲ ಅಥವಾ ಉಪಕರಣ ಭಾಗದ ವಿದ್ಯುತ್ ಪ್ರೇರಿಸುವ ಗುಣ ಇದು. ಇದರಿಂದಾಗಿ, ವಿದ್ಯುನ್ಮಂಡಲದಲ್ಲಿ ಹರಿಯುತ್ತಿರುವ ವಿದ್ಯುತ್ ಬದಲಾದಾಗ ವಿದ್ಯುತ್ ಚಾಲಕ ಶಕ್ತಿಯ ಉತ್ಪಾದನೆಯಾಗುತ್ತದೆ.
ಇಂಡಕ್ಟೆನ್ಸ್ ಮೀಟರ್ – ವಿದ್ಯುತ್ ಪ್ರೇರಕತಾ ಮಾಪಕ – ಒಂದು ವಿದ್ಯುನ್ಮಂಡಲದ ಸ್ವಯಂಪ್ರೇರಕತೆಯನ್ನು ಅಥವಾ ಜೋಡಿ ಮಾಡಲ್ಪಟ್ಟ ಎರಡು ವಿದ್ಯುನ್ಮಂಡಲಗಳ ಪರಸ್ಪರ ಪ್ರೇರಕತೆಯನ್ನು ಕಂಡು ಹಿಡಿಯಲು ಬಳಸುವ ಒಂದು ವಿದ್ಯುತ್ ಉಪಕರಣ.
ಇಂಡಕ್ಷನ್ – ವಿದ್ಯುತ್ ಪ್ರೇರಣೆ – ಒಂದು ಕಾಂತಕ್ಷೇತ್ರದಿಂದಾಗಿ ಒಂದು ವಸ್ತುವಿನ ಸ್ಥಿತಿಯಲ್ಲಿ ಆದ ಬದಲಾವಣೆ.
ಇಂಡಕ್ಷನ್ ಕಾಯಿಲ್ – ವಿದ್ಯುತ್ ಪ್ರೇರಣಾ ಸುರುಳಿ – ಒಂದು ರೀತಿಯ ಪರಿವರ್ತಕ. ಇದನ್ನು ಕಡಿಮೆ ವಿದ್ಯುತ್ ಸಾಮರ್ಥ್ಯವುಳ್ಳ ಆಕರದಿಂದ ಹೆಚ್ಚಿನ ವಿದ್ಯುತ್ ಸಾಮರ್ಥ್ಯ ವುಳ್ಳ ವಿದ್ಯುತ್ ಚಿಮ್ಮುವಿಕೆ( pulses) ಗಳನ್ನು ಉತ್ಪತ್ತಿ ಮಾಡಲು ಉಪಯೋಗಿಸುತ್ತಾರೆ.
ಇಂಡಕ್ಷನ್ ಫರ್ನೇಸ್ – ವಿದ್ಯುತ್ಪ್ರೇರಣಾ ಕುಲುಮೆ – ವಿದ್ಯುತ್ ಕಾಂತೀಯ ಪ್ರೇರಣೆಯ ಸಹಾಯದಿಂದ ವಿದ್ಯುಚ್ಛಕ್ತಿಯನ್ನು ತಾಪವಾಗಿ ಪರಿವರ್ತಿಸಲು ಬಳಸುವಂತಹ ಉಪಕರಣ.
Like us!
Follow us!