ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Lenz’s law

ಲೆಂಜ್ ಸ್ ಲಾ – ಲೆಂಜ್ ರ ನಿಯಮ – ಒಂದು ವಿದ್ಯುನ್ಮಂಡಲದಲ್ಲಿ ಪ್ರೇರಿತ ವಿದ್ಯುತ್ ಸಾಮರ್ಥ್ಯ (ವಿದ್ಯುತ್ ಚಾಲಕ ಬಲ)ದ  ದಿಕ್ಕು, ತನ್ನನ್ನು ಉತ್ಪಾದಿಸುವುದರ ದಿಕ್ಕಿಗೆ ವಿರುದ್ಧವಾಗಿರುತ್ತದೆ.

Lepton

ಲೆಪ್ಟಾನ್ – ಲೆಪ್ಟಾನು – ಎಲೆಕ್ಟ್ರಾನು, ಮ್ಯೂಯಾನು ( ಮತ್ತೆ ವಿಭಜಿಸಲು ಸಾಧ್ಯವಿಲ್ಲದ, ಋಣ ವಿದ್ಯುದಂಶ ಹೊಂದಿದ ಆದರೆ ಅದಕ್ಕಿಂತ ಹೆಚ್ಚು ದ್ರವ್ಯರಾಶಿಯುಳ್ಳ ಒಂದು ಅಂತರ್ಪರಮಾಣು – ಅಂದರೆ ಪರಮಾಣುವಿನೊಳಗಿನ -ಮೂಲಭೂತ ಕಣ) ಮತ್ತು ನ್ಯೂಟ್ರಾನುಗಳನ್ನು ಒಟ್ಟಾಗಿ ಸೂಚಿಸುವ ಒಂದು ಪದ.

Lethargy

ಲೆಥಾರ್ಜಿ – ನಿಶ್ಯಕ್ತಿ – ನಿರ್ದಿಷ್ಟ ಪ್ರಮಾಣೀಕೃತ ಶಕ್ತಿ ಹಾಗೂ ಒಂದು ನ್ಯೂಟ್ರಾನಿನ ಶಕ್ತಿ(E)ಯ ಅನುಪಾತದ ಋಣಾತ್ಮಕ ಸಹಜ ಕ್ರಮವಿಧಿ ( ಕ್ರಮವಿಧಿ = logarithm). ಸಾಮಾನ್ಯ ಪದಗಳಲ್ಲಿ ಹೇಳಬೇಕೆಂದರೆ ನಿಶ್ಯಕ್ತಿ ಅಂದರೆ ಶಕ್ತಿಯ ತೀವ್ರ ಕೊರತೆಯ ಸ್ಥಿತಿ.

Lever

ಲಿವರ್ – ಮೀಟುಗೋಲು ಅಥವಾ ಸನ್ನೆಗೋಲು – ಭದ್ರವಾಗಿ ನೆಲೆಯೂರಿಸಿದ ಒಂದು ಆಧಾರದ ಸುತ್ತ ತಿರುಗಿಸಲು ಸಾಧ್ಯವಿರುವ ಒಂದು ಗಟ್ಟಿ ಕೋಲು. ಇದರಿಂದ ಭಾರಗಳನ್ನು ಎತ್ತುವುದು ಸುಲಭವಾಗುತ್ತದೆ‌.

LF (Low frequency)

ಎಲ್ಎಫ್(ಲೋ ಫ್ರೀಕ್ವೆನ್ಸಿ) –  30-300 ಕಿಲೋ ಹರ್ಟ್ಝ್ ಆವರ್ತನಗತಿಯುಳ್ಳ (  ಅಂದರೆ 1 -10ಕಿ.ಮೀ.ತರಂಗಾಂತರವುಳ್ಳ) ವಿದ್ಯುತ್ಕಾಂತೀಯ ಅಲೆಗಳು.

Libration

ಲಿಬ್ರೇಷನ್ – ಓಲಾಟ – ಇದು ಖಗೋಳವಿಜ್ಞಾನದ ಒಂದು ವಿದ್ಯಮಾನ‌. ಭೂಮಿಯಿಂದ ನೋಡಿದಾಗ,  ಕೆಲವು ಸಲ, ಚಂದ್ರನ,  ತೋರುವ  ಅಥವಾ ನಿಜವಾದ ಓಲಾಟದಿಂದಾಗಿ ಸಾಮಾನ್ಯವಾಗಿ ಕಾಣದ ಅದರ ( ಚಂದ್ರನ) ಅಂಚುಗಳು ಭೂಮಿಯಲ್ಲಿರುವವರಿಗೆ ಕಾಣುತ್ತವೆ. ಈ ಓಲಾಟದಿಂದಾಗಿ ಚಂದ್ರನ 59% ಮೇಲ್ಮೈಯನ್ನು ನಾವು‌ 30 ವರ್ಷಗಳ ಅವಧಿಯುದ್ದಕ್ಕೂ ನೋಡಬಹುದು.

Light

ಲೈಟ್ – ಬೆಳಕು – ಇದು ವಿದ್ಯುತ್ಕಾಂತೀಯ ಅಲೆಯ ಒಂದು ವಿಧ. ಇದಕ್ಕೆ ಮಾನವ ಕಣ್ಣು ಸ್ಪಂದಿಸುತ್ತದೆ. ಇದರ ಮೇಲೆಯೇ ನಮ್ಮ‌ ದೃಷ್ಟಿಪ್ರಜ್ಞೆಯು ಅವಲಂಬಿತವಾಗಿರುತ್ತದೆ. ಪ್ರಪಂಚವನ್ನು ನಾವು ನಮ್ಮ ಕಣ್ಣಿಂದ ನೋಡಲು ಸಾಧ್ಯವಾಗುವುದು ಸಹ ಇದರಿಂದಲೇ. ನಾವು ಬಣ್ಣಗಳನ್ನು ಗುರುತಿಸಲು ಸಾಧ್ಯವಾಗುವುದು ಸಹ ಇದರಿಂದಲೇ.

Light bulb

ಲೈಟ್ ಬಲ್ಬ್ – ಗಾಜಿನ ಬುರುಡೆಯ ವಿದ್ಯಿದ್ದೀಪ ( ಬಲ್ಬು) – ವಿದ್ಯುತ್ತಿನಿಂದ ಬೆಳಕನ್ನು ಪಡೆಯಲು ಬಳಸುವ ಉಪಕರಣ. ಇದರಲ್ಲಿ, ಒಂದು ಗಾಜಿನ ಬುರುಡೆಯಲ್ಲಿ ಒಂದು ಟಂಗ್ಸ್ಟನ್ ತಂತು ಮತ್ತು ಒಂದು ಜಡ ಅನಿಲ‌ ಇರುತ್ತವೆ. ಈ ತಂತುವಿನಲ್ಲಿ ವಿದ್ಯುತ್ತನ್ನು‌ ಹಾಯಿಸಿದಾಗ ಅದು ಕಾದು ಬೆಳ್ಳಗಾಗುತ್ತದೆ. ಟಂಗ್ಸ್ಟನ್ ಲೋಹವು ಆವಿಯಗಿ ಗಾಜಿನ ಬುರುಡೆಯು ಕಪ್ಪಾಗುವುದನ್ನು ಆದಷ್ಟೂ ತಡೆಯಲು ಜಡ ಅನಿಲವನ್ನು ಬಳಸುತ್ತಾರೆ.

Light water reactor

ಲೈಟ್ ವಾಟರ್ ರಿಯಾಕ್ಟರ್ – ಸಾಮಾನ್ಯ ನೀರಿನ ಅಣುಸ್ಥಾವರ – ತಂಪುಕಾರಕವಾಗಿ ಸಾಮಾನ್ಯ ನೀರನ್ನು ಬಳಸುವ ಒಂದು‌‌ ವಿಶೇಷ ರೀತಿಯ ಅಣುಸ್ಥಾವರ.

Light Watt 

ಲೈಟ್ ವ್ಯಾಟ್ –  ಬೆಳಕು ವ್ಯಾಟ್ – ದೃಶ್ಯಬೆಳಕು ವಿಜ್ಞಾನದಲ್ಲಿ ಒಂದು ಬೆಳಕಿನ ಆಕರದ ಪ್ರಕಾಶ ಸಾಮರ್ಥ್ಯವನ್ನು ವ್ಯಕ್ತಪಡಿಸಲು ಬಳಸುವ ಒಂದು ಪದ.

Page 89 of 92

Kannada Sethu. All rights reserved.