‘ಅತಿಥಿ ದೇವೋಭವ'(ಅತಿಥಿಯೇ ದೇವರು) ಎಂಬ ಉಪನಿಷತ್ ವಾಕ್ಯವು ಕನ್ನಡ ನಾಡಿನಲ್ಲೂ ಪಡಿಮಿಡಿಯುವುದು ನಮ್ಮೆಲ್ಲರಿಗೂ ತಿಳಿದ ವಿಷಯ. ಕನ್ನಡ ನಾಡಿನ ಅತಿಥಿ ಸತ್ಕಾರವನ್ನು ನೆನೆದಾಗ ‘ಅ’ ಅಕ್ಷರದಿಂದ ಪ್ರಾರಂಭವಾಗುವ ಅರವಂಟಿಗೆ ಅಥವಾ ಅರವಟ್ಟಿಗೆ ಎಂಬ ಪದ ಹಾಗೂ ‘ಆ’ ಅಕ್ಷರದಿಂದ ಪ್ರಾರಂಭವಾಗುವ ‘ಆಸರಿಕೆಗೆ ಕೊಡುವುದು’ ಎಂಬ ಪದ್ಧತಿಗಳು ನೆನಪಾಗುತ್ತವೆ. ಇವುಗಳ ವಿವರಣೆ ಇದೋ ಈ ಮುಂದೆ.
ಅರವಂಟಿಗೆ ಅಥವಾ ಅರವಟಿಗೆ( ಅರವಟ್ಟಿಗೆ) ಅಂದರೆ ಧರ್ಮಕ್ಕಾಗಿ, (ನೀರು, ಪಾನಕ, ನೀರು ಮಜ್ಜಿಗೆ, ಎಳನೀರು ಮುಂತಾದ) ಪಾನೀಯಗಳನ್ನು ದಾರಿಹೋಕರಿಗೆ ತಾತ್ಕಾಲಿಕವಾದ ಧರ್ಮಶಾಲೆ. ಹಿಂದಿನ ಕಾಲದಲ್ಲಿ ನಮ್ಮ ರಾಜರುಗಳು ಅರವಟ್ಟಿಗೆಗಳನ್ನು ಸ್ಥಾಪಿಸುವುದನ್ನು ಒಂದು ಉತ್ತಮ ಕೆಲಸ, ಪುಣ್ಯ ಕಾರ್ಯ ಎಂದು ಭಾವಿಸುತ್ತಿದ್ದರು. ಊರಿನ ಶ್ರೀಮಂತರು, ದಾನಗುಣಿಗಳು ಸಹ ಈ ಕೆಲಸ ಮಾಡುತ್ತಿದ್ದರು. ಈಗಲೂ ಕರ್ನಾಟಕದ ಹಲವು ಕಡೆಗಳಲ್ಲಿ ಉಚಿತವಾಗಿ ನೀರು, ಮಜ್ಜಿಗೆ ಮುಂತಾದುವುಗಳನ್ನು ದಾರಿಹೋಕರಿಗಾಗಿ ಇಟ್ಟಿರುವುದನ್ನು ನಾವು ಗಮನಿಸಬಹುದು. ಒಟ್ಟಿನಲ್ಲಿ ಸಹಜೀವಿಗಳ ಬಗೆಗೆ – ಅವರು ಅಪರಿಚಿತರಾದರೇನಂತೆ – ಕಾಳಜಿ ಮಾಡುವ ಹಿರಿದಾದ ಮೌಲ್ಯವಿದು.ನಮ್ಮ ನಾಡಿನ ಬಗೆಗೆ ನಮಗೆ ಹೆಮ್ಮೆ ತರುವಂತಹ ಮೌಲ್ಯ.
ಇನ್ನೊಂದು ಪ್ರಯೋಗ ‘ಆಸರಿಕೆಗೆ ಕೊಡು’ ಎಂಬುದು. ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ, ಬಿಸಿಲಲ್ಲಿ ಮನೆಗೆ ಬಂದ ಅತಿಥಿ-ಅಭ್ಯಾಗತರಿಗೆ, ಅವರು ಬರುತ್ತಿದ್ದಂತೆಯೇ ಕುಡಿಯಲು ನೀರು ಹಾಗೂ ಒಂದು ತುಂಡು ಬೆಲ್ಲವನ್ನು ಕೊಡುವ ವಾಡಿಕೆ ಇದೆ. ಆಸರು ಎಂದರೆ ಬಾಯಾರಿಕೆ ಎಂದು ಅರ್ಥ. ಬಂದವರ ಬಾಯಾರಿಕೆ ಕಳೆಯಲಿ ಎಂಬುದು ಹೀಗೆ ಕೊಡುವುದರ ಹಿಂದಿನ ಉದ್ದೇಶ. ವಿಪರೀತ ಬೆವರಿ ದೇಹದಲ್ಲಿನ ನೀರಿನ ಅಂಶ, ಲವಣಗಳನ್ನು ಕಳೆದುಕೊಂಡಿರಬಹುದಾದ ಜೀವಕ್ಕೆ ತುಸು ಆರಾಮ ಸಿಗಲಿ, ತಂಪಾಗಲಿ ಎಂಬ ಸದ್ಭಾವನೆ ಇಲ್ಲಿಯದು. ಎಷ್ಟು ಚಂದದ ಪದ್ಧತಿ ಅಲ್ವಾ?
ಸದಾ ಉಳಿದು ಬಾಳಲಿ ನಮ್ಮ ಕನ್ನಡ ನಾಡು ಹಾಗೂ ಅದರ ಇಂತಹ ಉತ್ತಮ ಅಭ್ಯಾಸಗಳು ಎಂದು ಹಾರೈಸೋಣ.
Like us!
Follow us!