ಇದು ಈಚೆಗೆ ನಮ್ಮ ಮಹಾರಾಣಿ ಕಾಲೇಜಿನಲ್ಲಿ ನಡೆದ ಒಂದು ತಮಾಷೆಯ ಪ್ರಸಂಗ.
ಕನ್ನಡ ಮತ್ತು ಇಂಗ್ಲಿಷ್ ಅಧ್ಯಾಪಕರು ಒಂದೇ ಅಧ್ಯಾಪಕರ ಕೊಠಡಿಯಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ನಮ್ಮ ಕಾಲೇಜಿನಲ್ಲಿದೆ. ನಮ್ಮ ವಿಭಾಗದ ಪಕ್ಕದ್ದೇ ಪ್ರಾಂಶುಪಾಲರ ಕಛೇರಿ. ಆ ಕಛೇರಿಯ ಸಹಾಯಕ( ಅಟೆಂಡರ್)ರೊಬ್ಬರು, ಒಂದಿಷ್ಟು ಹಳದಿ ದ್ರವವಿದ್ದ ಗಾಜಿನ ಪುಟ್ಟ ಲೋಟದಂಥದ್ದನ್ನು ( ಬೀಕರ್) ಕೈಯಲ್ಲಿ ಹಿಡಿದು ನಮ್ಮ ವಿಭಾಗಕ್ಕೆ ಲಗುಬಗೆಯಿಂದ ಬಂದರು. ನಮ್ಮ ಇಂಗ್ಲಿಷ್ ಅಧ್ಯಾಪಕರಾದ ಮುರಳೀಧರ್ ರಿಗೆ ಅದನ್ನು ಕೊಟ್ಟು “ಹಾಲ್ಕೋವಾ ತಂದಿದೀನಿ ಸಾರ್” ಅಂದರು. ನಾವು ನಾಲ್ಕಾರು ಜನ ಅಧ್ಯಾಪಕರು ಅಲ್ಲಿದ್ದೆವು. ಆ ಸಹಾಯಕರು ತಂದಿದ್ದ ವಸ್ತು ಯಾವ ಕೋನದಿಂದಲೂ ಹಾಲ್ಕೋವಾ ತರಹ ಕಾಣಿಸುತ್ತಿರಲಿಲ್ಲ. ಹಾಲ್ಕೋವಾ ಅನ್ನುವುದು ಹಾಲಿನಪುಡಿ ಮತ್ತು ಸಕ್ಕರೆ, ಯಾವುದಾದರೂ ಹಿಟ್ಟು ಬೆರೆಸಿ ಮಾಡುವ ಸಿಹಿತಿಂಡಿ ತಾನೇ. ಶಾಲಾ ಮಕ್ಕಳು ಖುಷಿಯಿಂದ ತಿನ್ನುವ ಪುಟ್ಟ ಪುಟ್ಟ ಘನಾಕೃತಿಗಳಂತಹ ಕೆನೆಬಣ್ಣದ ತಿಂಡಿ ಅಲ್ಲವೆ ಅದು? ಪ್ರಶ್ನಾಪೀಡಿತಳಾದ ನಾನು ಮುರಳೀಧರರನ್ನು ಉದ್ದೇಶಿಸಿ “ಮುರಳೀ…ಹಾಲ್ಕೋವಾ ತರಕ್ಕೆ ಹೇಳಿದ್ರಾ ಇವ್ರಿಗೆ?” ಎಂದು ಕೇಳಿದೆ. ಪ್ರತ್ಯುತ್ತರವಾಗಿ ಅವರು “ಆಂ….ಹಾಲ್ಕೋವಾನಾ! ಇಲ್ಲ ಮೇಡಂ. ಪ್ರೊಜೆಕ್ಟರ್ ಗೋಸ್ಕರ ಸ್ವಲ್ಪ ಆಲ್ಕೋಹಾಲ್ ಬೇಕಿತ್ತು, ಅದನ್ನು ತರಹೇಳಿದ್ದೆ ಅಷ್ಟೆ” ಅಂದರು. ಓಹ್….! ಅಂದುಕೊಂಡು ಆಗ ನಾವೆಲ್ಲಾ ಆ ಗಾಜಿನ ಪುಟಾಣಿ ಬೀಕರ್ ನಲ್ಲಿದ್ದ ತೆಳುಹಳದಿ ದ್ರವವನ್ನು ಇನ್ನೊಮ್ಮೆ, ಗಮನವಿಟ್ಟು ನೋಡಿದೆವು. ಆಗ ಗೊತ್ತಾಯಿತು – ಅದು ‘ಈಥೈಲ್ ಆಲ್ಕೋಹಾಲ್’, ಅಥವಾ ‘ಎಥೆನಾಲ್’! ; ರಸಾಯನ ಶಾಸ್ತ್ರದ ಪ್ರಯೋಗಾಲಯಗಳಲ್ಲಿ ನಿಯಮಿತವಾಗಿ ಬಳಸುವ ದ್ರವವಸ್ತು.
ನಾವು ಮನುಷ್ಯರು ಅಪರಿಚಿತ ಪದಗಳು ನಮ್ಮ ಕಿವಿ ಮೇಲೆ ಬಿದ್ದಾಗ ಅವನ್ನು ಪರಿಚಿತ ಪದಗಳ ನೆಲೆಯಲ್ಲೇ ಗ್ರಹಿಸುತ್ತೇವೆ. ಹೀಗಾಗಿ ಆ ಕಛೇರಿ ಸಹಾಯಕರಿಗೆ ಅಪರಿಚಿತವಾಗಿದ್ದ ‘ಆಲ್ಕೋಹಾಲ್’ ಪದವು ಪರಿಚಿತ ಪದವಾಗಿದ್ದ ‘ಹಾಲ್ಕೋವಾ’ ಎಂದು ಕೇಳಿಸಿದೆ! “ಏ ..ಏನೋ ಇದು! ಹಾಲ್ಕೋವಾ ಅಂತ ಹೇಳಿ ಆಸೆ ತೋರಿಸಿಬಿಟ್ಯಲ್ಲೋ….” ಎಂದು ಇನ್ನೊಬ್ಬ ಅಧ್ಯಾಪಕರು ಆ ಸಹಾಯಕರನ್ನು ತಮಾಷೆ ಮಾಡಿದರು. “ಏ…ಹೋಗಿ ಸಾರ್” ಎನ್ನುತ್ತಾ, ತುಸು ಗೊಂದಲಭರಿತ ನಗೆಯೊಂದನ್ನು ನಗುತ್ತಾ ತಲೆಕೊಡವಿ ಆ ಸಹಾಯಕರು ನಮ್ಮ ವಿಭಾಗದಿಂದ ಹೊರನಡೆಯುವುದರೊಂದಿಗೆ ಈ ಪ್ರಸಂಗಕ್ಕೆ ತೆರೆ ಬಿತ್ತು.
‘ಅರೆ! ಪದಗಳ ಉಚ್ಚಾರವನ್ನು ಕಲಿಯುವವರಿಗೂ, ಕಲಿಸುವವರಿಗೂ ಇದೊಂದು ಪಾಠ ಅಲ್ಲವೆ?’ ಅನ್ನಿಸಿತು ನನ್ನೊಳಗಿನ ಕನ್ನಡ ಅಧ್ಯಾಪಕಿಗೆ.
Like us!
Follow us!