ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Liquification  of gases

ಲಿಕ್ವಿಫಿಕೇಷನ್ ಆಫ್ ಗ್ಯಾಸಸ್ – ಅನಿಲಗಳ ದ್ರವೀಕರಣ – ಒಂದು ಅನಿಲದ ತಾಪಮಾನವು ಅದರ ನಿರ್ಧಾರಕ ತಾಪಮಾನಕ್ಕಿಂತ ಕಡಿಮೆ ಇದ್ದಾಗ, ಆ ಅನಿಲದ ಮೇಲೆ ಬಾಹ್ಯ ಒತ್ತಡವನ್ನು‌ ಹಾಕಿದಾಗಷ್ಟೇ ಅದನ್ನು ದ್ರವೀಕರಿಸಬಹುದು.

Lloyd’s mirror

ಲಾಯ್ಡ್ಸ್ ಮಿರರ್ – ಲಾಯ್ಡ್‌ ರ ಕನ್ನಡಿ‌ – ಹಂಫ್ರಿ ಲಾಯ್ಡ್ ಎಂಬ ಐರ್ಲೆಂಡ್ ನ ವಿಜ್ಞಾನಿಯು 1834 ರಲ್ಲಿ ಕಂಡುಹಿಡಿದ ವಿದ್ಯಮಾನ ಇದು. ಒಂದೇ ಬೆಳಕಿನ‌ ಆಕರವನ್ನು ಬಳಸಿ ಸುಂದರವಾದ ಕಪ್ಪು – ಬಿಳುಪು ಪಟ್ಟಿಗಳನ್ನು  (interference fringes) ಪಡೆಯಲು ಸಾಧ್ಯ ಆಗುವಂತೆ ಇದನ್ನು ರಚಿಸಲಾಗಿರುತ್ತದೆ ; ಆದರೆ ಎರಡು ಬೆಳಕಿನ ಆಕರಗಳಿರುವಂತೆ ಭಾಸವಾಗುತ್ತದೆ.

Load line

ಲೋಡ್ ಲೈನ್ – ವಿದ್ಯುದ್ಬಲ ರೇಖೆ – ಒಂದು ವಿದ್ಯುನ್ಮಂಡಲವು ಪಡೆದುಕೊಳ್ಳುತ್ತಿರುವ ವಿದ್ಯುದ್ಬಲದ ಹಂಚಿಕೆಯ ಚಿತ್ರರೂಪೀ ಪ್ರಸ್ತುತಿ ಇದು.‌

Local oscillator 

ಲೋಕಲ್ ಆಸ್ಸಿಲೇಟರ್ – ಸ್ಥಳೀಯ ಆಂದೋಲಕ – ಅಲೆ ಸಂಯೋಜಕ ಅಥವಾ  ಉಚ್ಚತರ ಅಲೆಸಂಯೋಜಕವಾಗಿರುವಂತಹ ಅಲೆಗ್ರಾಹಕದಲ್ಲಿರುವ ಆಂದೋಲಕ ಇದು. ಈ ಉಪಕರಣವು ರೇಡಿಯೊ ಅಲೆಗಳ ಆವರ್ತನ ಆಂದೋಲನವನ್ನು ಉತ್ಪತ್ತಿ ಮಾಡುತ್ತದೆ.

Logic gate

ಲಾಜಿಕ್ ಗೇಟ್ – ತರ್ಕ ವಿದ್ಯುದ್ವಾರ – ಸರಳವಾದ ತಾರ್ಕಿಕ ಕ್ರಿಯೆಗಳನ್ನು ಮಾಡುವ ಸಾಮರ್ಥ್ಯ ಇರುವ ಒಂದು ವಿದ್ಯುನ್ಮಂಡಲ ಇದು. ಉದಾಹರಣೆಗೆ, ‘ಮತ್ತು’, ‘ಇದು ಅಥವಾ ಅದು’, ‘ಇದೂ ಅಲ್ಲ – ಅದೂ ಅಲ್ಲ’ ಇಂಥ ಸೂಚನೆಗಳು‌.

Longitudinal wave

ಲಾಂಗಿಟ್ಯೂಡಿನಲ್ ವೇವ್ – ರೇಖೀಯ ಅಲೆ (ನೀಳ ಅಲೆ ಅಥವಾ ಉದ್ದಕ್ಕೆ ಕಂಪಿಸುವ ಅಲೆ) – ಅಲೆಯು ಚಲಿಸುತ್ತಿರುವ ದಿಕ್ಲಿನಲ್ಲೇ ಕಣಗಳ ಸ್ಥಳಾಂತರವೂ ಆಗುತ್ತಿದ್ದರೆ ಅಂತಹ ಅಲೆಯನ್ನು ರೇಖೀಯ ಅಲೆ ಎನ್ನುತ್ತಾರೆ. ಉದಾಹರಣೆಗೆ ಶಬ್ಧದ ಅಲೆ.

Loss angle

ಲಾಸ್ ಆಂಗಲ್ – ನಷ್ಟ ಕೋನ – ಒಳ ಹಾಕುವ ವಿದ್ಯುದ್ಬಲವು ಸುಸಂಗತ ಅಲೆ ( ಸೈನ್ ವೇವ್) ಯಾಗಿದ್ದಾಗ, ವಿದ್ಯುತ್ ಸಂಪರ್ಕ ತಂತುವಿನ ಕೋನವು 90 ಡಿಗ್ರಿಗಿಂತ  ಎಷ್ಟು ಕಡಿಮೆ ಇದೆಯೋ ಆ ಕೋನ.

Loss factor

ಲಾಸ್ ಫ್ಯಾಕ್ಟರ್ – ನಷ್ಟಾಂಶ – ಒಂದು ವಿದ್ಯುತ್ ಸಂಪರ್ಕ ರೇಖೆ, ಮಂಡಲ ಅಥವಾ ಉಪಕರಣದ ವಿದ್ಯುತ್ ಪೂರಕದ ಅತಿಗರಿಷ್ಠ ಬಿಂದುವಿನಲ್ಲಿ ಉಂಟಾಗುವ ವಿದ್ಯುತ್ ನಷ್ಟಕ್ಕೂ ಸರಾಸರಿ ವಿದ್ಯುತ್ ನಷ್ಟಕ್ಕೂ ಇರುವಂತಹ ಅನುಪಾತ. 

Lossy

ಲಾಸೀ – ನಷ್ಟಕಾಲ – ವಿದ್ಯುತ್ ಶಕ್ತಿವಾಹನೆಯ ಸಂದರ್ಭದಲ್ಲಿ ತುಂಬ ಹೆಚ್ಚಿನ ಪ್ರಮಾಣದಲ್ಲಿ ಶಕ್ತಿಗುಂದಿಸುತ್ತಾ, ಶಕ್ತಿಯನ್ನು ವ್ಯರ್ಥ ಮಾಡುವ ಅವಾಹಕ ಅಥವಾ ವಿದ್ಯುತ್ ಪ್ರಸಾರಪಥಗಳ ಸಂದರ್ಭದಲ್ಲಿ ಬಳಸುವ ಪದ.

Page 92 of 92

Kannada Sethu. All rights reserved.