ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Magnet

ಮ್ಯಾಗ್ನೆಟ್ – ಅಯಸ್ಕಾಂತ – ಕಾಂತ ಗುಣವುಳ್ಳ ವಸ್ತುವಿನ ತುಂಡು. ಇದನ್ನು ಅಯಸ್ಕಾಂತ ಕ್ಷೇತ್ರದಲ್ಲಿಟ್ಟು ಅಯಸ್ಕಾಂತವಾಗಿಸಿರುತ್ತಾರೆ‌‌. ಇದು ಒಂದು ಬಿಲ್ಲೆಯ ಆಕಾರದಲ್ಲಿ ಅಥವಾ ಒಂದು ಕುದುರೆ ಲಾಳದ ಆಕಾರದಲ್ಲಿ ಇರುತ್ತದೆ.

Magnetic amplifier

ಮ್ಯಾಗ್ನೆಟಿಕ್ ಆಂಪ್ಲಿಫೈಯರ್ – ಕಾಂತೀಯ ಬಲವರ್ಧಕ‌- ಇದೊಂದು ರೀತಿಯ ವಿದ್ಯುತ್ ಬಲವರ್ಧಕ. ಇದನ್ನು ಹೇಗೆ ವ್ಯವಸ್ಥೆಗೊಳಿಸಿರುತ್ತಾರೆ ಎಂದರೆ, ನಿಯಂತ್ರಿಸುವ ನೇರ ವಿದ್ಯುತ್ತನ್ನು ಸಣ್ಣ ಪ್ರಮಾಣದಲ್ಲಿ ನೀಡಿದಾಗ ಇದಕ್ಕೆ ಜೋಡಿಸಿದಂತಹ ವಿದ್ಯುನ್ಮಂಡಲದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳು ಉಂಟಾಗುತ್ತವೆ.

Magnetic anisotropy

ಮ್ಯಾಗ್ನೆಟಿಕ್ ಅನಿಸೋಟ್ರೋಫಿ‌ – ಕಾಂತೀಯ ಅಸಮವರ್ತನೆ – ಕೆಲವು ವಸ್ತುಗಳ ಕಾಂತೀಯ ಗುಣಗಳು ಯಾವ ದಿಕ್ಕಿನಲ್ಲಿ ಅವುಗಳನ್ನು ಅಳೆಯುತ್ತೇವೆ ಎಂಬುದನ್ನು ಅವಲಂಬಿಸಿರುತ್ತವೆ‌. ಈ ಗುಣವನ್ನು ಕಾಂತೀಯ ಅಸಮವರ್ತನೆ ಎನ್ನುತ್ತಾರೆ.

Magnetic balance

ಮ್ಯಾಗ್ನೆಟಿಕ್ ಬ್ಯಾಲೆನ್ಸ್ – ಕಾಂತೀಯ ತ್ರಾಸು (ಕಾಂತೀಯ ತಕ್ಕಡಿ) – ಅಯಸ್ಕಾಂತ ಧ್ರುವಗಳ ನಡುವಿನ ಆಕರ್ಷಣೆ ಅಥವಾ ವಿಕರ್ಷಣೆಯನ್ನು ನೇರವಾಗಿ‌ ಅಳೆಯಲು ಬಳಸುವಂತಹ ಉಪಕರಣ.

Magnetic bottle

ಮ್ಯಾಗ್ನೆಟಿಕ್ ಬಾಟಲ್ – ಕಾಂತೀಯ ಸೀಸೆ – ವಿದ್ಯುದಂಶ ಹೊತ್ತಿರುವ ಕಣಗಳನ್ನು ಹದ್ದುಬಸ್ತಿನಲ್ಲಿಡಲು( ನಿರ್ಬಂಧದಲ್ಲಿಡಲು) ಸಹಾಯ ಮಾಡುವ ವ್ಯವಸ್ಥೆ ಇದು‌.‌ ಇದನ್ನು ‌ಅಣುಬೀಜಕೇಂದ್ರದ ಬೆಸುಗೆಯ ಸಂದರ್ಭದಲ್ಲಿ ಪ್ಲಾಸ್ಮಾವನ್ನು ನಿರ್ಬಂಧದಲ್ಲಿಡಲು ಬಳಸುತ್ತಾರೆ. ಮೂಲತಃ ಒಂದು ಅಸಮಗುಣೀ ಕಾಂತಕ್ಷೇತ್ರ ಇದು‌.

Magnetic bubble memory

ಮ್ಯಾಗ್ನೆಟಿಕ್ ಬಬ್ಬಲ್ ಮೆಮೊರಿ‌ – ಕಾಂತೀಯ ಬೊಬ್ಬುಳಿ ನೆನಪು  – ಇದು ಒಂದು ರೀತಿಯ ಗಣಕಯಂತ್ರ ನೆನಪು. ಇದರಲ್ಲಿ ಕಾಂತೀಯಗೊಳಿಸಲಾದ ವಸ್ತುವಿನ ಒಂದು ಸಣ್ಣ ಪ್ರದೇಶವು(ಭಾಗವು) ಮಾಹಿತಿ ಸಂಗ್ರಹಿಸಲು ಬಳಕೆಯಾಗುತ್ತದೆ.

Magnetic circuit

ಮ್ಯಾಗ್ನೆಟಿಕ್ ಸರ್ಕ್ಯೂಟ್ – ಕಾಂತೀಯ ವಿದ್ಯುನ್ಮಂಡಲ  – ಕಾಂತೀಯ ಬಲರೇಖೆಗಳನ್ನು ಒಳಗೊಂಡ ಒಂದು ಮುಚ್ಚಿದ ಪಥ. ಇದರಲ್ಲಿ ಚಾಲಕ ಬಲ, ವಿದ್ಯುತ್ತು ಹಾಗೂ ಪ್ರತಿರೋಧ – ಇವೆಲ್ಲವೂ ಕಾಂತೀಯತೆಗೆ ಸಂಬಂಧ ಪಟ್ಟಿರುತ್ತವೆ‌.

Magnetic compass

ಮ್ಯಾಗ್ನೆಟಿಕ್ ಕಂಪಾಸ್ – ಕಾಂತೀಯ ದಿಕ್ಸೂಚಿ‌ – ಕಾಂತ ಬಲದ ಕ್ಷೇತ್ರದ ದಿಕ್ಕನ್ನು ತೋರಿಸಲು ಬಳಸುವಂತಹ ಒಂದು ಉಪಕರಣ.

Magnetic constant

ಮ್ಯಾಗ್ನೆಟಿಕ್ ಕಾನ್ಸ್ಟೆಂಟ್  – ಕಾಂತೀಯ ಸ್ಥಿರಾಂಕ – ಮುಕ್ತ ಅವಕಾಶ ( ಫ್ರೀ ಸ್ಪೇಸ್) ದಲ್ಲಿನ ಕಾಂತೀಯ ಪ್ರವೇಶ ಸಾಧ್ಯತೆ. ಇದರ ಮೌಲ್ಯವೆಂದರೆ  4π×1÷10000000 ಹೆನ್ರಿ ಪರ್ ಮೀಟರ್‌.

Magnetic declination

ಮ್ಯಾಗ್ನೆಟಿಕ್ ಡಿಕ್ಲಿನೇಷನ್ – ಕಾಂತೀಯ ಇಳಿಜಾರು – ಭೂಮಿಯ ಮೇಲ್ಮೈಯಲ್ಲಿ  ಅಯಸ್ಕಾಂತೀಯ ಗೋಳ ಮಧ್ಯರೇಖೆಗೂ ಭೌಗೋಳಿಕ ಗೋಳಮಧ್ಯರೇಖೆಗೂ ಇರುವ ಕೋನ.

Page 95 of 100

Kannada Sethu. All rights reserved.